VIDEO: ಈ ಕೆನ್ನೆಗೆ ಆ ಕೆನ್ನೆಯಂತೆ ಮೊಟ್ಟೆಗೆ ಮೊಟ್ಟೆ: ಯೂತ್ ಕಾಂಗ್ರೆಸ್ನಿಂದ ಹೀಗೊಂದು ಗಾಂಧಿ ತತ್ವ ಅಭಿಯಾನ- ನಲ್ಪಾಡ್ ಹೇಳಿಕೆ

ಬೆಂಗಳೂರು: ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಮೇಲೆ ಮೊಟ್ಟೆ ಎಸೆದ ಪ್ರಕರಣ ಇದೀಗ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ. ರಾಜ್ಯಾದ್ಯಂತ ಕಾಂಗ್ರೆಸ್ ಕಾರ್ಯಕರ್ತರಿಂದ ಭಾರಿ ಪ್ರತಿಭಟನೆ ಶುರುವಾಗಿದೆ. ಈ ಘಟನೆಗೆ ಸಂಬಂಧಿಸಿದಂತೆ ಬಿಜೆಪಿ ವಿರುದ್ಧ ಕೈ ಕಾರ್ಯಕರ್ತರು ಹರಿಹಾಯ್ಯುತ್ತಿದ್ದು, ಇದೀಗ ರಾಜಕೀಯ ವಲಯದಲ್ಲಿ ಕೋಲಾಹಲವನ್ನು ಸೃಷ್ಟಿ ಮಾಡಿದೆ.
ಇದರ ನಡುವೆಯೇ ಮೊಟ್ಟೆಗೆ ಮೊಟ್ಟೆಯಿಂದಲೇ ಉತ್ತರ ನೀಡುವುದಾಗಿ ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಮಹಮ್ಮದ್ ಹ್ಯಾರಿಸ್ ನಲಪಾಡ್ ಹೇಳಿದ್ದಾರೆ.
ಫೇಸ್ಬುಕ್ ಲೈವ್ಗೆ ಬಂದಿರುವ ಹ್ಯಾರಿಸ್ ಸಿದ್ದರಾಮಯ್ಯ ಅವರ ಮೇಲೆ ಮೊಟ್ಟೆ ಎಸೆದಿರುವ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ್ದು, ಇದರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಿಜೆಪಿಯವರು ಕೀಳುಮಟ್ಟದ ರಾಜಕೀಯ ಮಾಡುತ್ತಿರುವುದಾಗಿ ಅವರು ಕಿಡಿ ಕಾರಿದ್ದಾರೆ.
ಸಿದ್ದರಾಮಯ್ಯ ಅವರ ಮೇಲೆ ಮೊಟ್ಟೆ ಎಸೆದು ಮುಜುಗರ ಉಂಟು ಮಾಡಲು ಯತ್ನಿಸಿರುವುದು ನಿಜಕ್ಕೂ ನಾಚಿಕೆಗೇಡಿನ ಸಂಗತಿ ಎಂದಿರುವ ಅವರು, ಕಾಂಗ್ರೆಸ್ ಪಕ್ಷವು ಎಂದಿಗೂ ಗಾಂಧಿ ತತ್ವ ಹಾಗೂ ಆದರ್ಶಗಳನ್ನು ಮೈಗೂಡಿಸಿಕೊಂಡು ಬಂದಿದೆ. ನಮ್ಮ ಯುವ ಕಾಂಗ್ರೆಸ್ ಮಿತ್ರರು ಕೂಡ ಅದಕ್ಕೆ ಹೊರತಾಗಿಲ್ಲ. ಅದರಂತೆ ಒಂದು ಕೆನ್ನೆಗೆ ಹೊಡೆದರೆ ಇನ್ನೊಂದು ಕೆನ್ನೆ ನೀಡುವಂತೆ ಗಾಂಧೀಜಿಯವರು ಹೇಳಿದ್ದನ್ನೇ ನಾವೂ ಪಾಲಿಸುತ್ತಿರುವುದಾಗಿ ಹೇಳಿದ್ದಾರೆ.
ಮಕ್ಕಳ ಮತ್ತು ಕಲ್ಯಾಣ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆಯವರು ಮೊಟ್ಟೆ ಖರೀದಿಯಲ್ಲಿ ಅವ್ಯವಹಾರ ಮಾಡಿರುವ ಆರೋಪ ಎದುರಿಸುತ್ತಿದ್ದರು. ಇದನ್ನು ವಿಡಿಯೋದಲ್ಲಿ ಉಲ್ಲೇಖಿಸಿರುವ ನಲಪಾಡ್, ನಾವು ಶಶಿಕಲಾ ಜೊಲ್ಲೆಗೆ ಹುಟ್ಟಿದವರಲ್ಲ, ನಾವು ಯಾರಿಗೂ ಹೆದರುವುದಿಲ್ಲ ಎಂದಿದ್ದಾರೆ.
ಒಂದು ಕೆನ್ನೆಗೆ ಹೊಡೆದರೆ ಇನ್ನೊಂದು ಕೆನ್ನೆ ತೋರಿಸಿ ಎಂದು ಗಾಂಧೀಜಿ ಹೇಳಿದ್ದರು. ಅದರಂತೆ ರಾಜ್ಯ ಯುವ ಕಾಂಗ್ರೆಸ್ ಸಮಿತಿಯು ರಾಜ್ಯದ ಎಲ್ಲಾ ಸಚಿವರಿಗೆ ಮೊಟ್ಟೆ ನೀಡಲು ನಿರ್ಧರಿಸಿದ್ದೇವೆ. ಬಿಜೆಪಿಯವರು ನಮ್ಮ ಮೇಲೆ ಮೊಟ್ಟೆ ಎಸೆದು ಮುಜುಗರ ಉಂಟು ಮಾಡಲು ಯತ್ನಿಸಿರಬಹುದು ಆದರೆ ನಾವು ಗಾಂಧೀಜಿಯ ಆಹಿಂಸಾ ತತ್ವವನ್ನು ಪಾಲಿಸಲಿದ್ದೇವೆ. ನಾವು ನ್ಯಾಯಕ್ಕಾಗಿ ಹೋರಾಡುತ್ತಿದ್ದು ಯಾವುದೇ ಕಾರಣಕ್ಕೂ ನಾವು ತಲೆಬಾಗುವುದಿಲ್ಲ ಎಂದಿದ್ದಾರೆ.
ಈ ನಿಮಿತ್ತ ಇಂದು ಬೆಂಗಳೂರಿನಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ, ಈ ಹೋರಾಟವನ್ನು ನಾವು ಮುಂದುವರೆಸುತ್ತೇವೆ ಎಂದು ಅವರು ಪತ್ರಿಕಾ ಪ್ರಕಟಣೆಯಲ್ಲಿ ಹೇಳಿದ್ದಾರೆ.
ನಲ್ಪಾಡ್ ಅವರ ಫೇಸ್ಬುಕ್ ಲೈವ್ ಇಲ್ಲಿದೆ ನೋಡಿ: