RCBಯ ಅಧಿಕೃತ ಯೂಟ್ಯೂಬ್ ಚಾನೆಲ್ ಹ್ಯಾಕ್..!

ಬೆಂಗಳೂರು: ಸೋಶಿಯಲ್ ಮೀಡಿಯಾದಲ್ಲಿ ಅತಿಹೆಚ್ಚು ಅಭಿಮಾನಿಗಳನ್ನು ಹೊಂದಿರುವ IPL ಫ್ರಾಂಚೈಸಿಗಳಲ್ಲಿ ಒಂದಾದ ರಾಯಲ್ ಚಾಲೆಂಜರ್ಸ್ ಬೆಂಗಳೂರಿನ ಅಧಿಕೃತ ಯೂಟ್ಯೂಬ್ ಚಾನೆಲ್‍ಅನ್ನು ‘ಮೈಕ್ರೋ ಸ್ಟ್ರಾಟಜಿ’ ಎಂಬ ಕ್ರಿಪ್ಟೋಕರೆನ್ಸಿ ಕಂಪನಿ ಹ್ಯಾಕ್ ಮಾಡಿದೆ ಎಂದು ವರದಿಯಾಗಿದೆ.
ಯುನೈಟೆಡ್ ಸ್ಪಿರಿಟ್ಸ್ ಒಡೆತನದ RCB ಫ್ರ್ಯಾಂಚೈಸ್ ಸಾಮಾಜಿಕ ಮಾಧ್ಯಮಗಳಲ್ಲಿ ಹೆಚ್ಚು ಸಕ್ರಿಯವಾಗಿತ್ತು. ತನ್ನ ಕೋಟ್ಯಂತರ ಅಭಿಮಾನಿಗಳಿಗೆ ಸರಿಯಾದ ಸಮಯಕ್ಕೆ ಅತ್ಯುತ್ತಮ ವಿಡಿಯೋಗಳ ಅಪ್‍ಡೇಟ್ ಮೂಲಕ ಮನರಂಜನೆ ನೀಡುತ್ತಿತ್ತು.
ಸದ್ಯ ಹ್ಯಾಕ್ ಮಾಡಲಾಗಿರುವ ಆರ್ಸಿಬಿಯ ಯೂಟ್ಯೂಬ್ ಚಾನೆಲ್‍ನಲ್ಲಿ ಈ ಹಿಂದೆ ಪೋಸ್ಟ್ ಮಾಡಿದ್ದ ವಿಡಿಯೋಗಳೆಲ್ಲವನ್ನು ಡಿಲೀಟ್ ಮಾಡಲಾಗಿದೆ ಎಂದು ತಿಳಿದುಬಂದಿದೆ. ಇದರಿಂದ RCBಯ ಅಪಾರ ಅಭಿಮಾನಿ ಬಳಗಕ್ಕೆ ಬರಸಿಡಿಲು ಬಡಿದಂತಾಗಿದೆ.
ಪ್ರಸ್ತುತ YouTubeನಲ್ಲಿನ ಹುಡುಕಾಟ ಫಲಕವು RCBಯ ಅಧಿಕೃತ ಚಾನಲ್ ಅನ್ನು ಹುಡುಕುವ ಮೂಲಕ ಮೈಕ್ರೋಸ್ಟ್ರಾಟಜಿ ಕಂಪನಿಯ ಫಲಿತಾಂಶಗಳಿಗೆ ಬಳಕೆದಾರರನ್ನು ಕರೆದೊಯ್ಯುತ್ತದೆ.
MicroStrategy ಎಂಬುದು ಗುಪ್ತಚರ ಕಂಪನಿಯಾಗಿದ್ದು, ಸಂಸ್ಥೆಗಳು ಡೇಟಾವನ್ನು ಶಕ್ತಿಯುತ BI, AI, ML ಮತ್ತು Analytics ಅಪ್ಲಿಕೇಶನ್‌ಗಳಾಗಿ ಪರಿವರ್ತಿಸಲು ಸಾಫ್ಟ್‌ವೇರ್ ಪ್ಲಾಟ್‌ಫಾರ್ಮ್ ಅನ್ನು ನಿರ್ಮಿಸಿದೆ ಎಂದು ತಿಳಿದು ಬಂದಿದೆ.RCB ಇಂತಹ ಸಮಸ್ಯೆ ಎದುರಿಸುತ್ತಿರುವುದು ಇದೇ ಮೊದಲೇನಲ್ಲ.
ಕಳೆದ ವರ್ಷವಷ್ಟೇ ಈ ಫ್ರಾಂಚೈಸಿಯ ಟ್ವಿಟರ್ ಖಾತೆಯನ್ನು ಕಿಡಿಗೇಡಿಗಳು ಹ್ಯಾಕ್ ಮಾಡಿದ್ದರು. ಬಳಿಕ ಹ್ಯಾಕ್ ಆಗಿದ್ದ ಖಾತೆಯನ್ನು ಸರಿಪಡಿಸಲು ತಾಂತ್ರಿಕ ತಂಡಕ್ಕೆ ಕೆಲವು ಗಂಟೆಗಳೇ ಬೇಕಾಗಿತ್ತು. ತನ್ನ ಟ್ವಿಟರ್ ಖಾತೆ ಹ್ಯಾಕ್ ಆಗಿದ್ದ ಬಗ್ಗೆ ಮಾಹಿತಿ ನೀಡಿದ್ದ RCB ಫ್ರಾಂಚೈಸಿ, ‘ನಮ್ಮ ಟ್ವಿಟರ್ ಖಾತೆಯನ್ನು ಕೆಲವು ಗಂಟೆಗಳ ಹಿಂದೆ ಕಿಡಿಗೇಡಿಗಳು ಹ್ಯಾಕ್ ಮಾಡಿದ್ದರು.
ಆದರೆ ಈಗ ಆ ದೋಷವನ್ನು ಸರಿಪಡಿಸುವಲ್ಲಿ ನಾವು ಯಶಸ್ವಿಯಾಗಿದ್ದೇವೆ. ಜೊತೆಗೆ ಹ್ಯಾಕರ್‌ಗಳು ಹಾಕಿರುವ ಟ್ವೀಟ್ ಅನ್ನು ನಾವು ಖಂಡಿಸುತ್ತೇವೆ. ಈ ಅನಾನುಕೂಲತೆಗಾಗಿ ನಾವು ವಿಷಾದಿಸುತ್ತೇವೆ’ ಎಂದು ಹೇಳಿಕೊಂಡಿತ್ತು.ರಾಯಲ್ ಚಾಲೆಂಜರ್ಸ್ ಬೆಂಗಳೂರು 2008ರ ಆವೃತ್ತಿಯಿಂದಲೂ ಐಪಿಎಲ್‍ನಲ್ಲಿ ಉತ್ತಮ ಪ್ರದರ್ಶನ ನೀಡುವ ತಂಡವೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ವಿರಾಟ್ ಕೊಹ್ಲಿ ನಾಯಕತ್ವ ಮತ್ತು ಘಟಾನುಘಟಿ ಆಟಗಾರರಿದ್ದರೂ RCB ಒಂದು ಬಾರಿಯೂ ಕಪ್ ಎತ್ತಿ ಹಿಡಿಯಲಿಲ್ಲ. 2009, 2011 ಮತ್ತು 2016ರ 3 ಸೀಸನ್‌ಗಳಲ್ಲಿ ಫೈನಲ್ ಪ್ರವೇಶಿಸಿದರೂ ಕಪ್ ಗೆಲ್ಲಲು ಸಾಧ್ಯವಾಗಲಿಲ್ಲ.
ಹೀಗಾಗಿ ಕೋಟ್ಯಂತರ ಅಭಿಮಾನಿಗಳಿಗೆ ದೊಡ್ಡ ನಿರಾಸೆ ಉಂಟಾಗಿದೆ. ಯಾವಾಗ RCB ತಂಡ ಐಪಿಎಲ್ ಟ್ರೋಫಿ ಎತ್ತಿ ಹಿಡಿಯುತ್ತೋ ಅಂತಾ ಅಭಿಮಾನಿಗಳು ಕಾಯುತ್ತಿದ್ದಾರೆ.
ಪ್ರಶಸ್ತಿ ಗೆಲ್ಲದಿದ್ದರೂ ಆರ್‍ಸಿಬಿ ಫ್ಯಾನ್ಸ್ ಕ್ರೇಜ್ ಮಾತ್ರ ಕಡಿಮೆಯಾಗಿಲ್ಲ.