ಕ್ರೀಡೆ

MS Dhoni 41ನೇ ಹುಟ್ಟುಹಬ್ಬ: ಬಂಧುಮಿತ್ರರ ಎದುರು ಕೇಕ್ ಕತ್ತರಿಸಿ ಸಂಭ್ರಮಿಸಿದ ಕ್ಯಾಪ್ಟನ್‌ ಕೂಲ್

Happy Birthday MSD

ಭಾರತ ತಂಡ ಸಾರ್ವಕಾಲಿಕ ಶ್ರೇಷ್ಠ ವಿಕೆಟ್‌ಕೀಪರ್‌ ಬ್ಯಾಟ್ಸ್‌ಮನ್‌ ಹಾಗೂ ವಿಶ್ವ ಕ್ರಿಕೆಟ್‌ನ ಅತ್ಯಂತ ಯಶಸ್ವಿ ಕಪ್ತಾನ ಎಂಎಸ್‌ ಧೋನಿ ಗುರುವಾರ ತಮ್ಮ 41ನೇ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಪತ್ನಿ ಸಾಕ್ಷಿ ಧೋನಿ ಅವರೊಟ್ಟಿಗೆ ಬ್ರಿಟನ್‌ ಪ್ರವಾಸದಲ್ಲಿ ಇರುವ ಕ್ಯಾಪ್ಟನ್‌ ಕೂಲ್‌, ಅಲ್ಲಿಯೇ ತಮ್ಮ ಬಂಧುಮಿತ್ರರ ಎದುರು ಕೇಕ್‌ ಕತ್ತರಿಸುವ ಮೂಲಕ ಜನ್ಮದಿನದ ಸಂಭ್ರಮ ಆಚರಿಸಿದ್ದಾರೆ. ತಮ್ಮ 12ನೇ ವಿವಾಹ ವಾರ್ಷಿಕೋತ್ಸವದ (ಜುಲೈ 4) ಸಂಭ್ರಮ ಸಲುವಾಗಿ ಅವರು ಬ್ರಿಟನ್‌ ಪ್ರವಾಸ ಕೈಗೊಂಡಿದ್ದರು.

ಭಾರತ ತಂಡದ ಮಾಜಿ ನಾಯಕ ಧೋನಿ ಕೇಕ್‌ ಕತ್ತರಿಸಿ ಸಂಭ್ರಮಿಸಿದ ವಿಡಿಯೋವನ್ನು ಪತ್ನಿ ಸಾಕ್ಷಿ ಧೋನಿ ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯ ಮೂಲಕ ಅಭಿಮಾನಿಗಳೊಟ್ಟಿಗೆ ಹಂಚಿಕೊಂಡಿದ್ದಾರೆ. ಭಾರತ ತಂಡದ ಯುವ ವಿಕೆಟ್‌ಕೀಪರ್‌ ಬ್ಯಾಟ್ಸ್‌ಮನ್‌ ರಿಷಭ್ ಪಂತ್‌ ಕೂಡ ಈ ಖಾಸಗಿ ಸಮಾರಂಭದಲ್ಲಿ ಪಾಲ್ಗೊಂಡಿದ್ದರು.

ಅಂದಹಾಗೆ 2020ರ ಆಗಸ್ಟ್‌ 15ರಂದು ಸೋಷಿಯಲ್‌ ಮೀಡಿಯಾ ಪೋಸ್ಟ್‌ ಒಂದರ ಮೂಲಕ ಎಂಎಸ್‌ಡಿ ತಮ್ಮ ಅಂತಾರಾಷ್ಟ್ರೀಯ ಕ್ರಿಕೆಟ್‌ ವೃತ್ತಿಬದುಕಿಗೆ ವಿದಾಯ ಹೇಳಿದ್ದರು. 2019ರ ಐಸಿಸಿ ಏಕದಿನ ಕ್ರಿಕೆಟ್‌ ವಿಶ್ವಕಪ್‌ ಟೂರ್ನಿಯ ಸೆಮಿಫೈನಲ್‌ ಪಂದ್ಯ ಕ್ಯಾಪ್ಟನ್‌ ಕೂಲ್‌ ಭಾರತ ತಂಡದ ಪರ ಆಡಿದ ಕೊನೆಯ ಪಂದ್ಯವಾಗಿದೆ.

ಆ ಪಂದ್ಯದಲ್ಲಿ ಭಾರತ ತಂಡ ನ್ಯೂಜಿಲೆಂಡ್‌ ಎದುರು ಸೋತು ಫೈನಲ್‌ ತಲುಪುವಲ್ಲಿ ವಿಫಲವಾಗಿತ್ತು. ಧೋನಿ ಜವಾಬ್ದಾರಿಯುತ ಅರ್ಧಶತಕ ಬಾರಿಸಿದ್ದರೂ ರನ್‌ಔಟ್‌ ಆಗುವ ಮೂಲಕ ನಿರಾಶೆಗೊಳಗಾದರು. ಕಾಕ ತಾಳೀಯ ಎಂಬಂತೆ ಅವರ ಮೊದಲ ಅಂತಾರಾಷ್ಟ್ರೀಯ ಪಂದ್ಯದಲ್ಲೂ ರನ್‌ಔಟ್‌ ಆಗಿದ್ದ ಧೋನಿ, ಕೊನೇ ಪಂದ್ದದಲ್ಲೂ ರನ್‌ಔಟ್‌ ಆಗಿ ತಮ್ಮ ವೃತ್ತಿಬದುಕು ಕೊನೆಗೊಳಿಸಿದರು.

ಈಗ ಇಂಡಿಯನ್ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ನಾಲ್ಕು ಬಾರಿಯ ಚಾಂಪಿಯನ್ಸ್‌ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ ಪರ ತಮ್ಮ ಸೇವೆ ಮುಂದುವರಿಸಿದ್ದಾರೆ. ಐಪಿಎಲ್‌ 2022 ಟೂರ್ನಿಯ ಆರಂಭದಲ್ಲಿ ತಂಡದ ನಾಯಕತ್ವವನ್ನು ಆಲ್‌ರೌಂಡರ್‌ ರವೀಂದ್ರ ಜಡೇಜಾ ಅವರಿಗೆ ಹಸ್ತಾಂತರಿಸಿದ್ದರು.

ಆದರೆ, ಜಡೇಜಾ ಸಾರಥ್ಯದಲ್ಲಿ ಸಿಎಸ್‌ಕೆ ಸಾಲು ಸಾಲು ವೈಫಲ್ಯ ಕಂಡ ಪರಿಣಾಮ ನಾಯಕತ್ವದ ಹೊರೆ ಮರಳಿ ಧೋನಿ ಹೆಗಲೇರಿತ್ತು. ಈ ಕಾರಣ ಐಪಿಎಲ್ 2023 ಟೂರ್ನಿಯಲ್ಲೂ ಧೋನಿ ಸಿಎಸ್‌ಕೆ ಕ್ಯಾಪ್ಟನ್‌ ಆಗಿ ಕಾಣಿಸಿಕೊಳ್ಳಲಿದ್ದಾರೆ.

2004ರಲ್ಲಿ ಚತ್ತಗಾಂಗ್‌ನಲ್ಲಿ ನಡೆದ ಬಾಂಗ್ಲಾದೇಶ ವಿರುದ್ಧದ ಒಡಿಐ ಪಂದ್ಯದಲ್ಲಿ ಟೀಮ್ ಇಂಡಿಯಾ ಪರ ಮೊದಲ ಪಂದ್ಯವನ್ನಾಡಿದ ಎಂಎಸ್‌ ಧೋನಿ, ಬಳಿಕ 90 ಟೆಸ್ಟ್, 350 ಒಡಿಐ ಮತ್ತು 98 ಅಂತಾರಾಷ್ಟ್ರೀಯ ಟಿ20 ಪಂದ್ಯಗಳಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ.

ತಮ್ಮ 15 ವರ್ಷಗಳ ಸುದೀರ್ಘಾವಧಿಯ ಕ್ರಿಕೆಟ್‌ ವೃತ್ತಿಬದುಕಿನಲ್ಲಿ ಹಲವು ದಾಖಲೆಗಳನ್ನು ಬರೆದ ಧೋನಿ, 2007ರ ಐಸಿಸಿ ಟಿ20 ಕ್ರಿಕೆಟ್‌ ವಿಶ್ವಕಪ್‌, 2011ರ ಐಸಿಸಿ ಏಕದಿನ ಕ್ರಿಕೆಟ್‌ ವಿಶ್ವಕಪ್‌ ಮತ್ತು 2013ರ ಐಸಿಸಿ ಚಾಂಪಿಯನ್ಸ್‌ ಟ್ರೋಫಿ ಟೂರ್ನಿಗಳಲ್ಲಿ ಭಾರತಕ್ಕೆ ಟ್ರೋಫಿ ಗೆದ್ದುಕೊಟ್ಟಿದ್ದಾರೆ.

ಈ ಮೂಲಕ ಐಸಿಸಿ ಆಯೋಜನೆಯ ಮೂರು ಪ್ರಮುಖ ಟೂರ್ನಿಗಳಲ್ಲಿ ಟ್ರೋಫಿ ಗೆದ್ದ ವಿಶ್ವದ ಏಕಮಾತ್ರ ಕ್ಯಾಪ್ಟನ್‌ ಎಂಬ ವಿಶ್ವ ದಾಖಲೆ ಹೊಂದಿದ್ದಾರೆ. ಜೊತೆಗೆ ಒಡಿಐ ಮತ್ತು ಟೆಸ್ಟ್‌ ಕ್ರಿಕೆಟ್‌ ಶ್ರೇಯಾಂಕದಲ್ಲಿ ಭಾರತಕ್ಕೆ ನಂ.1 ಸ್ಥಾನ ತಂದುಕೊಟ್ಟ ಮೊದಲ ನಾಯಕ ಕೂಡ ಆಗಿದ್ದಾರೆ.

Antony Raju A

Ncibtimesmedia Web Portal Director & national executive officer Contact:9482289151 Gmail: antonyraju166@gmail.com

Related Articles

Leave a Reply

Your email address will not be published. Required fields are marked *

Back to top button