Uncategorized

COTPA ಕಾಯ್ದೆ ಬಲಕ್ಕೆ ಆಗ್ರಹಿಸಿ ಸಿಗರೇಟ್ ತುಂಡುಗಳ ಪ್ರದರ್ಶನ

ಬೆಂಗಳೂರು, ಮೇ 31, 2022: ಸಾರ್ವಜನಿಕ ಸ್ಥಳಗಳಲ್ಲಿ ಅವ್ಯಾಹತವಾಗಿ ನಡೆಯುತ್ತಿರುವ ಧೂಮಪಾನವನ್ನು ಬಯಲಿಗೆಳೆಯುವ ದಿಸೆಯಲ್ಲಿ ಎನ್‌ಎಸ್‌ಎಸ್ ಸ್ವಯಂಸೇವಕರು, ಸಾರ್ವಜನಿಕರು ಮತ್ತು ನಾಗರಿಕ ಸಮಾಜ ಸಂಸ್ಥೆಗಳ ಸದಸ್ಯರು ಬೆಂಗಳೂರು ನಗರದಾದ್ಯಂತ ಸಾವಿರಾರು ಸಿಗರೇಟ್ ಮತ್ತು ಬೀಡಿ ತುಂಡುಗಳನ್ನು ಸಂಗ್ರಹಿಸಿದ್ದಾರೆ.

ವಿಶ್ವ ತಂಬಾಕು ರಹಿತ ದಿನದ ಅಂಗವಾಗಿ, ಸಿಗರೇಟ್ ಮತ್ತು ಬೀಡಿ ತುಂಡುಗಳನ್ನು ನಿಮ್ಹಾನ್ಸ್ ಕನ್ವೆನ್ಷನ್ ಸೆಂಟರ್ ನಲ್ಲಿ ಪ್ರದರ್ಶಿಸುವ ಮೂಲಕ ಕರ್ನಾಟಕದ ಎಲ್ಲ ಸಂಸದರು ಹಾಗು ಕೇಂದ್ರ ಆರೋಗ್ಯ ಮಂತ್ರಾಲಯವನ್ನು ಪ್ರಧಾನ ತಂಬಾಕು ನಿಯಂತ್ರಣ ಕಾನೂನಾದ ಸಿಗರೇಟ್ ಮತ್ತು ಇತರ ತಂಬಾಕು ಉತ್ಪನ್ನಗಳ ಕಾಯ್ದೆಗೆ (COTPA) ತಿದ್ದುಪಡಿ ಮಾಡಿ ಸಾರ್ವಜನಿಕ ಸ್ಥಳಗಳನ್ನು ಶೇ. 100 ರಷ್ಟು ಧೂಮಪಾನ ಹೊಗೆಮುಕ್ತಗೊಳಿಸಬೇಕೆಂದು ಆಗ್ರಹಿಸಲಾಯಿತು.

ತಂಬಾಕು ಮುಕ್ತ ಕರ್ನಾಟಕ ವೇದಿಕೆ ಮತ್ತು ಅದರ ಸಹಯೋಗ ಸಂಸ್ಥೆಗಳ ನೇತೃತ್ವದಲ್ಲಿ ಮೂರು ವಾರಗಳ ಕಾಲ ನಡೆದ ಅಭಿಯಾನದಲ್ಲಿ, ಜಯನಗರ, ಜೆಪಿ ನಗರ, ಕೆಆರ್ ಮಾರುಕಟ್ಟೆ, ತುಮಕೂರು ರಸ್ತೆ, ಎಂಜಿ ರಸ್ತೆ, ಶಿವಾಜಿನಗರ, ಚಾಮರಾಜಪೇಟೆ, ಸಂಪಂಗಿರಾಮನಗರ ಮತ್ತು ರಾಜಾಜಿನಗರ ಮುಂತಾದ ಪ್ರದೇಶಗಳಲ್ಲಿನ ಸಾರ್ವಜನಿಕ ಸ್ಥಳಗಳಾದ ಬಸ್ ನಿಲ್ದಾಣಗಳು, ಶಿಕ್ಷಣ ಸಂಸ್ಥೆಗಳು, ಉದ್ಯಾನವನಗಳು, ಸರ್ಕಾರಿ ಕಚೇರಿಗಳು, ಆಸ್ಪತ್ರೆಗಳು, ಕಾಫಿ/ಟೀ ಅಂಗಡಿಗಳು ಮತ್ತು ಹೋಟೆಲ್‌ಗಳ ಬಳಿಯಿಂದ ಸಿಗರೇಟ್ ಮತ್ತು ಬೀಡಿ ತುಂಡುಗಳನ್ನು ಸಂಗ್ರಹಿಸಲಾಗಿದೆ.

ಕೋಟ್ಪಾ ಭಾರತದಲ್ಲಿ ತಂಬಾಕು ನಿಯಂತ್ರಣಕ್ಕಾಗಿ ಇರುವ ಪ್ರಧಾನ ಕಾನೂನಾಗಿದ್ದು, ಅದು ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ, ತಂಬಾಕು ಉತ್ಪನ್ನಗಳ ನೇರ ಮತ್ತು ಪರೋಕ್ಷ ಜಾಹೀರಾತು, ಅಪ್ರಾಪ್ತ ವಯಸ್ಕರಿಗೆ ಸಿಗರೇಟ್ ಅಥವಾ ಇತರೆ ಉತ್ಪನ್ನಗಳ ಮಾರಾಟ, ಮತ್ತು ಯಾವುದೇ ಶಿಕ್ಷಣ ಸಂಸ್ಥೆಯ 100 ಗಜಗಳ ವ್ಯಾಪ್ತಿಯಲ್ಲಿ ತಂಬಾಕಿನ ಮಾರಾಟವನ್ನು ನಿಷೆಧಿಸುತ್ತದೆ.

ಆದರೆ, ಈ ಎಲ್ಲ ನಿಬಂಧಗಳನ್ನು, ವಿಶೇಷೆವಾಗಿ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ನಿಷೆಧವನ್ನು ವ್ಯಾಪಕವಾಗಿ ಉಲ್ಲಂಘಿಸಲಾಗುತ್ತಿದೆ.

ಈ ಉಲ್ಲಂಘನೆಗಳಿಗೆ ಪ್ರಸ್ತುತ ಕೋಟ್ಪಾ ಅಡಿ ವಿಧಿಸಲಾಗುತ್ತಿರುವ ದಂಡಗಳು ತೀರಾ ಕಡಿಮೆಯಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡುವುದನ್ನು ತಡೆಗಟ್ಟಲು 200 ರೂಪಾಯಿಯ ದಂಡವು ಸಾಕಾಗುವುದಿಲ್ಲ.ಪ್ರಧಾನ ತಂಬಾಕು ನಿಯಂತ್ರಣ ಕಾನೂನಾದ ಕೋಟ್ಪಾ ಸಾಕಷ್ಟು ಕಠಿಣವಾಗಿಲ್ಲ ಮತ್ತು ತಂಬಾಕು ನಿಯಂತ್ರಣಕ್ಕೆ ಸಂಬಂಧಿಸಿದ ಎಲ್ಲ ಆಯಾಮಗಳನ್ನು ಒಳಗೊಂಡಿಲ್ಲ ಎಂಬುದು ನಮ್ಮ ಸ್ಪಷ್ಟು ಅನಿಸಿಕೆ.

ಈ ಅಭಿಯಾನದ ಮೂಲಕ ಕೋಟ್ಪಾ ಕಾಯ್ದೆಗೆ ತಿದ್ದುಪಡಿ ತಂದು, ಅದನ್ನು ಬಲಪಡಿಸಿ ಉಲ್ಲಂಘನೆಗಳಿಗೆ ಕಡಿವಾಣ ಹಾಕಬೇಕು ಎಂದು ಕರ್ನಾಟಕದ ಎಲ್ಲ ಸಂಸದರು ಮತ್ತು ಕೇಂದ್ರ ಆರೋಗ್ಯ ಮಂತ್ರಾಲಯವನ್ನು ಒತ್ತಾಯಿಸಲು ನಾವು ಬಯಸುತ್ತೇವೆ.

ಸಾರ್ವಜನಿಕ ಸ್ಥಳಗಳು ಧೂಮಪಾನದ ಹೊಗೆಯಿಂದ ಶೇ. 100 ರಷ್ಟು ಮುಕ್ತವಾಗಿರಬೇಕು ಎಂಬುದೇ ನಮ್ಮ ಆಶಯ, ಎಂದು ಖ್ಯಾತ ಕ್ಯಾನ್ಸರ್ ತಜ್ಞ ಮತ್ತು ತಂಬಾಕು ಮುಕ್ತ ಕರ್ನಾಟಕ ವೇದಿಕೆಯ ಅಧ್ಯಕ್ಷ ಡಾ. ರಮೇಶ್ ಬಿಳಿಮಗ್ಗ ಹೇಳಿದರು.

ಸಾರ್ವಜನಿಕ ಸ್ಥಳಗಳಾದ ಹೋಟೆಲ್, ರೆಸ್ಟೋರೆಂಟ್, ಬಾರ್, ಪಬ್ ಮತ್ತು ವಿಮಾನ ನಿಲ್ದಾಣಗಳಲ್ಲಿನ ನಿರ್ದಿಷ್ಟು ಧೂಮಪಾನ ಪ್ರದೇಶಗಳು ಧೂಮಪಾನ ಮಾಡದವರ ಆರೋಗ್ಯದ ಮೇಲೆ ದುಷ್ಟುರಿಣಾಮ ಬೀರುತ್ತಿರುವುದರಿಂದ ನಿರ್ದಿಷ್ಟು ಧೂಮಪಾನ ಪ್ರದೇಶಕ್ಕೆ ಅವಕಾಶ ನೀಡಬಾರದು ಎಂದು ಡಾ. ಬಿಳಿಮಗ್ಗ ತಿಳಿಸಿದರು.

ಎಚ್ ಸಿಜಿ ಕ್ಯಾನ್ಸರ್ ಆಸ್ಪತ್ರೆಯ ಕಾರ್ಯಕಾರಿ ಅಧ್ಯಕ್ಷರಾದ ಡಾ. ಬಿಎಸ್ ಅಜಯ್ ಕುಮಾರ್, ನಾವು ಎಚ್‌ಸಿಜಿ ಆಸ್ಪತ್ರೆಯನ್ನು ಪ್ರಾರಂಭಿಸಿದ್ದೇ ಕ್ಯಾನ್ಸರ್ ರೋಗಿಗಳಿಗೆ ಚಿಕಿತ್ಸೆ ನೀಡಲು.

ಕ್ಯಾನ್ಸರ್ ತಜ್ಞರಾಗಿ ಜನರ ಆರೋಗ್ಯ ಮತ್ತು ಯೋಗಕ್ಷೇಮವನ್ನು ಕಾಪಾಡುವುದೇ ನಮ್ಮ ಅಂತಿಮ ಗುರಿಯಾಗಿದೆ.

ನಮ್ಮ ಜನರ ಆರೋಗ್ಯವನ್ನು ಕಾಪಾಡಲು ಇರುವ ಉತ್ತಮ ಮಾರ್ಗವೆಂದರೆ ಕ್ಯಾನ್ಸರ್ ಅನ್ನು ತಡೆಗಟ್ಟುವುದು, ಅಂದರೆ ರೋಗವನ್ನೇ ಇಲ್ಲವಾಗಿಸುವುದು.

ಕೇವಲ ತಂಬಾಕನ್ನು ನಿರ್ಮೂಲನೆ ಮಾಡುವ ಮೂಲಕ ಸುಮಾರು ಶೇ. 30-35 ಕ್ಯಾನ್ಸರ್‌ಗಳನ್ನು ತಡೆಯಬಹುದು. ತಂಬಾಕು ಪಿಡುಗನ್ನು ಹೋಗಲಾಡಿಸಲು ಇಡೀ ಸಮಾಜವೇ ಒಗ್ಗೂಡಬೇಕಾಗಿದೆ. ಈ ನಿಟ್ಟಿನಲ್ಲಿ, ತಂಬಾಕು ಬಳಕೆಯನ್ನು ನಿಲ್ಲಿಸುವಂತೆ ಜನರನ್ನು ಪ್ರೇರೇಪಿಸುವುದು ನಿಸ್ಸಂದೇಹವಾಗಿ ಒಂದು ನಿರ್ಣಾಯಕ ಮಾರ್ಗ.

ಆದರೆ ಹೆಚ್ಚು ಪರಿಣಾಮಕಾರಿ ಮಾರ್ಗವೆಂದರೆ ಸಮಸ್ಯೆಯ ಮೂಲಕಾರಣವನ್ನು ನಿವಾರಿಸುವುದು ಮತ್ತು ತಂಬಾಕಿನ ಉತ್ಪಾದನೆಯನ್ನು ನಿಲ್ಲಿಸಿ ಅದರ ಬೆಳೆಗಾರರನ್ನು ಪರ್ಯಾಯ ಬೇಸಾಯ ಮಾಡಲು ಪ್ರೋತ್ಸಾಹಿಸುವುದು.

ಎಚ್‌ಸಿಜಿ ಈಗಾಗಲೇ ಹುಣಸೂರಿನಲ್ಲಿ ಈ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದೆ, ಎಂದು ಹೇಳಿದರು.

ಅಭಿಯಾನದ ಭಾಗವಾಗಿ, ಕೋಟ್ಪಾ ಬಲಪಡಿಸುವ ಮೂಲಕ ಸಿಗರೇಟ್ ಮತ್ತು ಬೀಡಿ ತುಂಡುಗಳ ನಿರ್ಮೂಲನೆ ಎಂಬ ವಿಚಾರದ ಕುರಿತು ಚರ್ಚೆ (ಪ್ಯಾನಲ್ ಡಿಸ್ಕಶನ್) ನಡೆಸಲಾಯಿತು. ಸಂಗ್ರಹಿಸಲಾದ ಸಿಗರೇಟ್ ಮತ್ತು ಬೀಡಿ ತುಂಡುಗಳನ್ನು ಸುರಕ್ಷಿತ ವಿಲೇವಾರಿಗಾಗಿ ತ್ಯಾಜ್ಯ ನಿರ್ವಹಣೆಯಲ್ಲಿ ತೊಡಗಿರುವ ಎನ್‌ಜಿಒ ಒಂದಕ್ಕೆ ಹಸ್ತಾಂತರಿಸಲಾಗುವುದು.

ಇದೇ ಸಂದರ್ಭದಲ್ಲಿ, ಕೋಟ್ಪಾ ಕಾಯ್ದೆಗೆ ತಿದ್ದುಪಡಿ ತರಲು ಕ್ರಮ ವಹಿಸುವಂತೆ ಒತ್ತಾಯಿಸಿ ಮಕ್ಕಳು ಮತ್ತು ಯುವಕರು ಸಂಸದರಿಗೆ ಮನವಿ ಪತ್ರ ಸಲ್ಲಿಸಿದರು.

Basaveshwara M

Crime reporter, Bangalore

Related Articles

Leave a Reply

Your email address will not be published. Required fields are marked *

Back to top button