Uncategorized

Chitradurgaದ ಐತಿಹಾಸಿಕ ಮುರುಘಾ ಮಠಕ್ಕೆ ನೂತನ ಉತ್ತರಾಧಿಕಾರಿ ನೇಮಕ

NCIB ಚಿತ್ರದುರ್ಗ: ಅದು ಭಾರತದ ಶೂನ್ಯ ಪೀಠಗಳಲ್ಲೇ ಅಗ್ರಗಣ್ಯವಾದ ಮಠ (mutt). ಬಹಳಷ್ಟು ಐತಿಹಾಸಿಕ ಪರಂಪರೆಯನ್ನು ಒಳಗೊಂಡ ಮಠವೂ ಅದಾಗಿದೆ. ಚಿತ್ರದುರ್ಗದಲ್ಲಿರುವ (Chitradurga) ಆ ಮಠದ ಪೀಠಾಧಿಪತಿಯ ಉತ್ತರಾಧಿಕಾರಿ (successor ) ಆಯ್ಕೆ ಇಂದು ನಡೆಯಿತು.
ಉತ್ತರಾಧಿಕಾರಿ ಆಯ್ಕೆಯ ಘೋಷಣೆ ಬಗ್ಗೆ ಗೌಪ್ಯತೆ ಕಾಪಾಡಲಾಗಿತ್ತು. ತಂದೆ-ತಾಯಿಗೂ ಸಹ ಏನು ಹೇಳದೆ ಕರೆಸಿಕೊಳ್ಳಲಾಗಿತ್ತು.

ಕೋಟೆನಾಡು ಚಿತ್ರದುರ್ಗ ಜಿಲ್ಲೆಯನ್ನು ಮಠಗಳ ಬೀಡು ಎಂದೇ ಕರೆಯುತ್ತಾರೆ. ಅದ್ರಲ್ಲಿ ಪ್ರಮುಖ ಮಠಗಳಲ್ಲಿ ಶ್ರೀ ಮುರುಘರಾಜೇಂದ್ರ (Muruga Rajendra Mutt) ಬೃಹನ್ಮಠವೂ ಒಂದಾಗಿದೆ. ಇಂದು ಮಠದಲ್ಲಿ ನಡೆದ ಶರಣ ಸಭೆಯಲ್ಲಿ ಉತ್ತರಾಧಿಕಾರಿ ಆಯ್ಕೆ ನಡೆಯಿತು. ಚಿತ್ರದುರ್ಗ ತಾಲೂಕಿನ ಹುಲ್ಲೂರು ಗ್ರಾಮದ ಶಿವಮೂರ್ತಯ್ಯ ಹಾಗೂ ಚಂದ್ರಕಲಾ ದಂಪತಿಗಳ ಏಕೈಕ ಪುತ್ರರಾದ ಬಸವಾದಿತ್ಯ (Basavaditya) ಅವರು ಉತ್ತರಾಧಿಕಾರಿಯಾಗಿ ಘೋಷಿಸಲ್ಪಟ್ಟರು. ರುದ್ರಾಕ್ಷಿ ಮಾಲೆ ಹಾಕಿ, ಪುಷ್ಪವೃಷ್ಟಿ ಗೈದ ಡಾ.ಶಿವಮೂರ್ತಿ ಮುರುಘಾ ಶರಣರು, ನಾಡಿನ ಅನೇಕ ಕಡೆಗಳಿಂದ ಬಂದಿದ್ದ ಮಠದ ಭಕ್ತರೆದುರು ಉತ್ತರಾಧಿಕಾರಿ ಆಯ್ಕೆಯನ್ನು ಘೋಷಿಸಿದರು.

ಮಠದ ಗುರುಕುಲದಲ್ಲಿಯೇ ಇದ್ದು, ಎರಡು ವರ್ಷ ಪಿಯುಸಿ ಅಭ್ಯಸಿಸಿರುವ ಬಸವಾದಿತ್ಯ ಅವರು, ಕೆಲದಿನಗಳಿಂದ ಡಾ.ಶಿವಮೂರ್ತಿ ಮುರುಘಾ ಶರಣರ ಜೊತೆಗೆ ಓಡಾಟದಲ್ಲೂ ಪಾಲ್ಗೊಂಡವರು. ಮಠಕ್ಕೆ ಬಂದ ಮೇಲೆ ಸಂಪೂರ್ಣ ಅಧ್ಯಾತ್ಮಿಕತೆಯತ್ತ ವಾಲಿದ ಬಸವಾದಿತ್ಯ ಅವರು, ಮುರುಘಾ ಶರಣರ ಗಮನ ಸೆಳೆದಿರಬಹುದು. ಒಂದು ವರ್ಷದ ಹಿಂದೆಯೇ ಉತ್ತರಾಧಿಕಾರಿ ಆಯ್ಕೆಯಾಗಿತ್ತು. ಮಠದ ಆಡಳಿತದ ಸ್ಪಷ್ಟತೆಗಾಗಿ ಆಯ್ಕೆ ನಡೆದಿದೆ ಎನ್ನುತ್ತಾರೆ ಡಾ.ಶಿವಮೂರ್ತಿ ಮುರುಘಾ ಶರಣರು.

ಇಂದಿನ ಉತ್ತರಾಧಿಕಾರಿ ಆಯ್ಕೆಗೆ ಬಸವಾದಿತ್ಯ ಅವರ ತಂದೆ ಶಿವಮೂರ್ತಯ್ಯ ಹಾಗೂ ತಾಯಿ ಚಂದ್ರಕಲಾ ಅವರಿಗೂ ತಿಳಿಸಲಾಗಿತ್ತು. ಆದರೆ, ಉತ್ತರಾಧಿಕಾರಿ ನೇಮಕದ ಘೋಷಣೆ ತಿಳಿಸಿರಲಿಲ್ಲ. ಮೊದಲಿನಿಂದಲೂ ಮಠದ ಭಕ್ತರಾಗಿರುವ ಇವರು ಮಗ ಮುರುಘರಾಜೇಂದ್ರ ಬೃಹನ್ಮಠಕ್ಕೆ ಪೀಠಾಧಿಪತಿಯಾಗಿ ಘೋಷಣೆಯಾಗಿದ್ದಕ್ಕೆ ಸಂತಸ ವ್ಯಕ್ತಪಡಿಸಿದರು. ಶಿವಮೂರ್ತಿ ಮುರುಘಾ ಶರಣರು ನಡೆದ ದಾರಿಯಲ್ಲೇ ನಮ್ಮ ಮಗನು ನಡೆಯಲಿ ಎನ್ನುತ್ತಾರೆ ಬಸವಾದಿತ್ಯ ಅವರ ತಾಯಿ ಚಂದ್ರಕಲಾ.

ಇನ್ನು ಬಸವಾದಿತ್ಯ ಅವರ ದೊಡ್ಡಮ್ಮ ದಾಕ್ಷಾಯಿಣಿ ಅವರಿಗೆ ಚಿತ್ರದುರ್ಗದ ಮುರುಘಾ ಮಠದೊಂದಿಗೆ 30 ವರ್ಷದ ನಂಟಿದೆ. ಪ್ರತೀ ತಿಂಗಳು ನಡೆಯುವ ಶರಣ ಸಂಗಮಕ್ಕೆ ಬರುವ ಅವರು, ಬಸವಾದಿತ್ಯ ಅವರಿಗೆ ಮುರುಘರಾಜೇಂದ್ರ ಮಠದ ನಂಟು ಬೆಳೆಯಲು ಕಾರಣ. ಆ ನಂಟು ಇಲ್ಲಿಯವರೆಗೂ ನಡೆದು ಬಂದದ್ದು ಖುಷಿಯ ವಿಚಾರ ಎನ್ನುತ್ತಾರೆ ಅವರು.

ಮುರುಘಾ ಮಠದ ಆಡಳಿತದಡಿ ನಡೆಯುವ ಗುರುಕುಲದಲ್ಲಿ ಇದ್ದುಕೊಂಡೇ ದ್ವಿತೀಯ ಪಿಯುಸಿ ಓದಿರುವ ಬಸವಾದಿತ್ಯ ಅವರು, ಚುರುಕು ವಿದ್ಯಾರ್ಥಿ ಎಂದೇ ಶಿಕ್ಷಕರಿಂದ ಹೆಸರು ಗಳಿಸಿಕೊಂಡವರು. ಮುಂದೆ ಫಿಲಾಸಫಿ, ಕ್ರಿಮಿನಾಲಜಿ, ಜರ್ನಲಿಸಂ ಓದುವ ಇಂಗಿತ ಹೊಂದಿರುವ ಬಸವಾದಿತ್ಯ ಅವರು ಸಮಾಜಕ್ಕೆ ಖಂಡಿತ ಬೇಕಾದವರಾಗುತ್ತಾರೆ ಎನ್ನುತ್ತಾರೆ ಬಸವಾದಿತ್ಯ ಅವರಿಗೆ ಕಲಿಸಿದ ಉಪನ್ಯಾಸಕರು.

ಚಿತ್ರದುರ್ಗದ ಮುರುಘರಾಜೇಂದ್ರ ಬೃಹನ್ಮಠಕ್ಕೆ ದೊಡ್ಡ ಇತಿಹಾಸವಿದೆ. ಭಾರತದ ಶೂನ್ಯ ಪೀಠಗಳಲ್ಲೇ ಅಗ್ರಗಣ್ಯ ಹಾಗೂ ಯಜಮಾನಿಕೆಯ ಸ್ಥಾನದಲ್ಲಿರುವಂಥದ್ದು ಈ ಮಠ. ಹಾಗಾಗಿ ಇಂತಹ ಮಠಕ್ಕೆ ಬಸವಾದಿತ್ಯ ಅವರ ಉತ್ತರಾಧಿಕಾರಿ ಘೋಷಣೆಗೆ ನಾಡಿನ ವಿವಿಧೆಡೆಯಿಂದ ಬಂದಿದ್ದ ಮಠದ ಭಕ್ತರು ಹರ್ಷ ವ್ಯಕ್ತಪಡಿಸಿದರು. ಡಾ.ಶಿವಮೂರ್ತಿ ಮುರುಘಾ ಶರಣರ ದಾರಿಯಲ್ಲಿಯೇ ನಡೆಯಲಿ ಎಂದು ಭಕ್ತ ಸಮೂಹ ಹಾರೈಸಿತು..

𝐂𝐡𝐚𝐧𝐝𝐚𝐧 𝐌𝐑𝐂

𝐃𝐈𝐑𝐄𝐂𝐓𝐎𝐑 -𝐍𝐂𝐈𝐁 𝐓𝐈𝐌𝐄𝐒 𝐌𝐄𝐃𝐈𝐀 𝟐𝟒/𝟕 𝐏𝐕𝐓. 𝐋𝐓𝐃.

Related Articles

Leave a Reply

Your email address will not be published. Required fields are marked *

Back to top button