ರಾಜ್ಯ

BIGG NEWS : ಮಲೆನಾಡು ಹಾಗೂ ಕರಾವಳಿ ಪ್ರದೇಶದಲ್ಲಿ ಹೆಚ್ಚಿನ ಮಳೆ ಸಾಧ್ಯತೆ : ಭೂಕುಸಿತ ಪ್ರದೇಶಗಳಲ್ಲಿ ಹೆಚ್ಚಿನ ಗಮನಹರಿಸಿ: ಬಸವರಾಜ ಬೊಮ್ಮಾಯಿ

ಮಡಿಕೇರಿ : ಮುಂದಿನ 10 ದಿನಗಳ ಕಾಲ ಮಲೆನಾಡು ಮತ್ತು ಕರಾವಳಿ ಭಾಗದಲ್ಲಿ ಹೆಚ್ಚಿನ ಮಳೆಯಾಗುವ ಮುನ್ಸೂಚನೆ ಇದ್ದು, ಭೂಕುಸಿತ ಪ್ರದೇಶಗಳಲ್ಲಿ ಹೆಚ್ಚಿನ ಗಮನಹರಿಸುವಂತೆ ಜಿಲ್ಲಾಡಳಿತಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನಿರ್ದೇಶನ ನೀಡಿದ್ದಾರೆ

ಜಿಲ್ಲಾಧಿಕಾರಿಗಳು, ಜಿ.ಪಂ.ಸಿಇಒ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರ ಜೊತೆ ಮಂಗಳವಾರ ನಡೆದ ವಿಡಿಯೋ ಸಂವಾದದಲ್ಲಿ ಮಾಹಿತಿ ಪಡೆದು ಅವರು ಮಾತನಾಡಿದರು.

ಮುಂದಿನ ಹತ್ತು ದಿನಗಳಲ್ಲಿ ಮಲೆನಾಡು ಮತ್ತು ಕರಾವಳಿ ಭಾಗದಲ್ಲಿ ಹೆಚ್ಚಿನ ಮಳೆಯಾಗುವ ಸಾಧ್ಯತೆ ಇದ್ದು, ಈ ಸಂಬಂಧ ಸೂಕ್ಷ್ಮ ಪ್ರದೇಶದಲ್ಲಿನ ಕುಟುಂಬಗಳನ್ನು ಕಾಳಜಿ ಕೇಂದ್ರಕ್ಕೆ ಸ್ಥಳಾಂತರಿಸುವಂತಾಗಬೇಕು ಎಂದು ಮುಖ್ಯಮಂತ್ರಿ ಅವರು ಹೇಳಿದರು.

ಮನೆ ಹಾನಿಗೆ ಸಂಬಂಧಿಸಿದಂತೆ ಕೂಡಲೇ ಪರಿಹಾರ ವಿತರಿಸಬೇಕು. ಸಂತ್ರಸ್ತರಿಗೆ ಯಾವುದೇ ರೀತಿಯ ಸಮಸ್ಯೆ ಉಂಟಾಗದಂತೆ ಗಮನಹರಿಸುವಂತೆ ಮುಖ್ಯಮಂತ್ರಿ ಅವರು ಸೂಚಿಸಿದರು.

ಈಗಾಗಲೇ ಕೈಗೊಂಡಿರುವ ವಿಶೇಷ ಕಾರ್ಯಪಡೆ, ಎನ್‍ಡಿಆರ್‍ಎಫ್, ಎಸ್‍ಡಿಆರ್‍ಎಫ್ ತಂಡಗಳ ಕಾರ್ಯನಿರ್ವಹಣೆ, ಕಾಳಜಿ ಕೇಂದ್ರಗಳಲ್ಲಿ ಅಗತ್ಯ ಮೂಲ ಸೌಲಭ್ಯ ಕಲ್ಪಿಸುವುದು ಮತ್ತಿತರವನ್ನು ಕೈಗೊಳ್ಳುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನಿರ್ದೇಶನ ನೀಡಿದರು.

ಜಿಲ್ಲಾಡಳಿತ ಭವನ ಬಳಿಯ ತಡೆಗೋಡೆ ಸಂಬಂಧಿಸಿದಂತೆ ಮಾಹಿತಿ ಪಡೆದ ಮುಖ್ಯಮಂತ್ರಿ ಅವರು, ತಡೆಗೋಡೆಗೆ ಸದ್ಯ ಮರಳು ಮೂಟೆಗಳನ್ನು ಅಳವಡಿಸಲಾಗಿದ್ದು, ಲಘು ವಾಹನ ಸಂಚಾರಕ್ಕೆ ಅವಕಾಶ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಅವರು ತಿಳಿಸಿದರು.

ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಅವರು ಮಾಹಿತಿ ನೀಡಿ ಕಳೆದ 24 ಗಂಟೆ ಅವಧಿಯಲ್ಲಿ ಸಂಪಾಜೆ ಮತ್ತು ಕರಿಕೆ ಭಾಗದಲ್ಲಿ ಹೆಚ್ಚಿನ ಮಳೆಯಾಗಿತ್ತು, ಕೊಯನಾಡು ಬಳಿ 5 ಮನೆ ಮತ್ತು ಸಂಪಾಜೆ ಬಳಿ 2 ಮನೆಗಳಿಗೆ ಹಾನಿಯಾಗಿದ್ದು, 12 ಕಡೆ ಮಣ್ಣು ಕುಸಿತ ಉಂಟಾಗಿದೆ. ಸದ್ಯ ಮನೆ ಹಾನಿಯಾಗಿರುವುದಕ್ಕೆ ತಲಾ 10 ಸಾವಿರ ರೂ. ಪರಿಹಾರ ವಿತರಿಸಲಾಗಿದೆ ಎಂದರು.

ಸದ್ಯ ಕಾಳಜಿ ಕೇಂದ್ರದಲ್ಲಿ 5 ಕುಟುಂಬದ 21 ಜನರು ಇದ್ದಾರೆ. ಸಂಬಂಧಿಕರ ಮನೆಯಲ್ಲಿರುವವರಿಗೂ ಸಹ ಆಹಾರ ಕಿಟ್ ವಿತರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಅವರು ಮಾಹಿತಿ ನೀಡಿದರು.

ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಆಯೋಗದ ಆಯುಕ್ತರಾದ ಡಾ.ಮನೋಜ್ ರಾಜನ್ ಅವರು ಮಾಹಿತಿ ನೀಡಿ ಮುಂದಿನ ಒಂದು ವಾರಗಳ ಕಾಲ ಮಲೆನಾಡು ಮತ್ತು ಕರಾವಳಿ ಭಾಗದಲ್ಲಿ ಹೆಚ್ಚಿನ ಮಳೆಯಾಗುವ ಸಾಧ್ಯತೆ ಇದೆ. ಆದ್ದರಿಂದ ಭೂಕುಸಿತ ಪ್ರದೇಶಗಳಲ್ಲಿನ ಜನರಿಗೆ ಮಾಹಿತಿ ನೀಡಿ, ಸ್ಥಳಾಂತರಿಸಬೇಕು. ಸಹಾಯವಾಣಿ ಕೇಂದ್ರಗಳು ಸಂಪರ್ಕದಲ್ಲಿರಬೇಕು. ಎಸ್‍ಡಿಆರ್‍ಎಫ್, ಎನ್‍ಡಿಆರ್‍ಎಫ್ ಹಾಗೂ ಅಧಿಕಾರಿಗಳ ತಂಡಗಳು ಎಚ್ಚರ ಇರಬೇಕು ಎಂದು ಅವರು ತಿಳಿಸಿದರು.

ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಹಾಸನ, ಚಿಕ್ಕಮಗಳೂರು, ಶಿವಮೊಗ್ಗ, ದಾವಣಗೆರೆ, ಮೈಸೂರು, ತುಮಕೂರು, ಬೆಳಗಾವಿ ಜಿಲ್ಲೆಗಳ ಜಿಲ್ಲಾಧಿಕಾರಿಗಳು ತಮ್ಮ ಜಿಲ್ಲೆಯಲ್ಲಿ ಮಳೆಯಿಂದ ಮನೆ ಹಾನಿ ಪರಿಹಾರ ಮತ್ತಿತರ ಬಗ್ಗೆ ಮಾಹಿತಿ ನೀಡಿದರು.

ಜಿ.ಪಂ.ಸಿಇಒ ಭಂವರ್ ಸಿಂಗ್ ಮೀನಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಎ.ಅಯ್ಯಪ್ಪ, ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ನಂಜುಂಡೇಗೌಡ, ಲೋಕೋಪಯೋಗಿ ಇಲಾಖೆ ಇಇ ನಾಗರಾಜು, ತಹಶೀಲ್ದಾರ್ ಪಿ.ಎಸ್.ಮಹೇಶ್, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕರಾದ ನಾರಾಯಣ ರೆಡ್ಡಿ, ಜಿಲ್ಲಾ ವಿಪತ್ತು ನಿರ್ವಹಣಾ ಪರಿಣತರಾದ ಅನನ್ಯ ವಾಸುದೇವು ಇತರರು ಇದ್ದರು.

ಅಧಿಕಾರಿಗಳ ಜತೆ ಚರ್ಚೆ: ವಿಡಿಯೋ ಸಂವಾದ ಬಳಿಕ ಅಧಿಕಾರಿಗಳ ಜೊತೆ ಚರ್ಚಿಸಿದ ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಅವರು ಮುಂದಿನ ಹತ್ತು-ಹದಿನೈದು ದಿನಗಳ ಕಾಲ ಕೊಡಗು ಜಿಲ್ಲೆಯಲ್ಲಿ ಹೆಚ್ಚಿನ ಮಳೆಯಾಗುವ ಸಾಧ್ಯತೆ ಇರುವುದರಿಂದ ಈಗಾಗಲೇ ಗುರುತಿಸಲಾಗಿರುವ 43 ಗ್ರಾಮಗಳ ಸೂಕ್ಷ್ಮ ಪ್ರದೇಶದಲ್ಲಿ ಅಗತ್ಯ ಮುನ್ನೆಚ್ಚರ ವಹಿಸಬೇಕಿದೆ ಎಂದರು.

𝐂𝐡𝐚𝐧𝐝𝐚𝐧 𝐌𝐑𝐂

𝐃𝐈𝐑𝐄𝐂𝐓𝐎𝐑 -𝐍𝐂𝐈𝐁 𝐓𝐈𝐌𝐄𝐒 𝐌𝐄𝐃𝐈𝐀 𝟐𝟒/𝟕 𝐏𝐕𝐓. 𝐋𝐓𝐃.

Related Articles

Leave a Reply

Your email address will not be published. Required fields are marked *

Back to top button