ರಾಜ್ಯ

BIG NEWS: ಹೆಚ್ಚುತ್ತಿರುವ ಭಾರತ ವಿರೋಧಿ ಹೋರಾಟ, ಹಿಂದು ದೇವಾಲಯಗಳ ಮೇಲೆ ದಾಳಿ; ಬ್ರಿಟನ್‌ ಹಾಗೂ ಕೆನಡಾಕ್ಕೆ ಕೇಂದ್ರದಿಂದ ಖಡಕ್‌ ಸಂದೇಶ

ಬ್ರಿಟನ್‌ ಹಾಗೂ ಕೆನಡಾದಲ್ಲಿ ಭಾರತ ವಿರೋಧಿ ಸಿಖ್‌ ಮೂಲಭೂತವಾದಿಗಳ ಹೋರಾಟ, ಹಿಂದು ದೇವಾಲಯಗಳ ಮೇಲೆ ದಾಳಿ ನಿರಂತರವಾಗಿ ನಡೆಯುತ್ತಲೇ ಇದೆ. ಇದನ್ನು ಸೂಕ್ಷ್ಮವಾಗಿ ಗಮನಿಸುತ್ತಲೇ ಬಂದ ಭಾರತ ಸರ್ಕಾರ ಈಗ ಬ್ರಿಟನ್‌ ಹಾಗೂ ಕೆನಡಾಕ್ಕೆ ಕಠಿಣ ಸಂದೇಶವನ್ನು ರವಾನಿಸಿದೆ.

ಬ್ರಿಟನ್‌ನ ಲೀಸೆಸ್ಟರ್‌ನಲ್ಲಿ ಭಾರತೀಯ ಸಮುದಾಯದ ವಿರುದ್ಧ ನಡೆಸಲಾದ ಹಿಂಸಾಚಾರವನ್ನು ಕೇಂದ್ರ ಸರ್ಕಾರ ಖಂಡಿಸಿದೆ. ಇಂತಹ ಘಟನೆಗಳು ನಡೆಯದಂತೆ ಎಚ್ಚರಿಕೆ ವಹಿಸಬೇಕೆಂದು ಬ್ರಿಟನ್‌ ಅಧಿಕಾರಿಗಳಿಗೆ ಸೂಚಿಸಿದೆ. ಆದರೆ ಬ್ರಿಟಿಷ್ ಭದ್ರತಾ ಏಜೆನ್ಸಿಗಳು ಪ್ರತ್ಯೇಕತಾ ಚಳವಳಿಯನ್ನು ಉತ್ತೇಜಿಸುತ್ತಿವೆ. ಇದು ಸಹ ಕೇಂದ್ರ ಸರ್ಕಾರದ ಗಮನಕ್ಕೆ ಬಂದಿದೆ.

ಬ್ರಿಟನ್‌ ಹಾಗೂ ಕೆನಡಾದಲ್ಲಿನ ಭಾರತ ವಿರೋಧಿ ಬೆಳವಣಿಗೆಗಳ ಬಗ್ಗೆ ತೀವ್ರ ಪ್ರತಿಕ್ರಿಯೆ ನೀಡಿದೆ. ಬ್ರಿಟನ್‌ನಲ್ಲಿ ಭಾರತೀಯರ ಮೇಲೆ ನಡೆಯುತ್ತಿರುವ ದೌರ್ಜನ್ಯ ಅತ್ಯಂತ ಕಳವಳಕಾರಿಯಾಗಿದ್ದು, ಈ ಬಗ್ಗೆ ಭಾರತ ಆತಂಕ ಹೊರಹಾಕಿದೆ.

ಸಾಮಾಜಿಕ ಮಾಧ್ಯಮದಲ್ಲಿ ಪ್ರಕಟವಾಗುವ ಚೇಷ್ಟೆಯ ವರದಿಗಳ ವಿರುದ್ಧವೂ ಧ್ವನಿಯೆತ್ತಿದೆ. ವಿದೇಶಾಂಗ ವ್ಯವಹಾರಗಳ ಸಚಿವ ಸುಬ್ರಹ್ಮಣ್ಯಂ ಜೈಶಂಕರ್ ಮತ್ತು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರು ಯುಕೆ ಮತ್ತು ಕೆನಡಾದಲ್ಲಿ ನಡೆಯುತ್ತಿರುವ ಈ ಘಟನೆಗಳನ್ನು ಗಮನಿಸಿದ್ದಾರೆ. ಭಾರತದ ಪ್ರತಿಕ್ರಿಯೆ ಕೂಡ ಇದಕ್ಕೆ ಅನುಗುಣವಾಗಿಯೇ ಇರುತ್ತದೆ ಎಂಬ ಎಚ್ಚರಿಕೆಯನ್ನು ರವಾನಿಸಿದ್ದಾರೆ. ಈ ಮಧ್ಯೆ ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ, ಉಕ್ರೇನ್‌ನ ಆಕ್ರಮಿತ ಪ್ರದೇಶಗಳಲ್ಲಿ ರಷ್ಯಾದ ಯೋಜಿತ “ಜನಮತಸಂಗ್ರಹ”ಗಳನ್ನು ಬಲವಾಗಿ ಖಂಡಿಸಿದ್ದಾರೆ.

ಸೆಪ್ಟೆಂಬರ್ 19 ರಂದು ಒಂಟಾರಿಯೊದ ಬ್ರಾಂಪ್ಟನ್‌ನಲ್ಲಿ ನಿಷೇಧಿತ “ಸಿಖ್ಸ್ ಫಾರ್ ಜಸ್ಟಿಸ್” ಸಂಘಟನೆ ಜನಾಭಿಪ್ರಾಯ ಸಂಗ್ರಹಣೆಯನ್ನು ಆಯೋಜಿಸಿತ್ತು. ಈ ಬೆಳವಣಿಗೆಗೆ ಸಂಬಂಧಪಟ್ಟಂತೆ ನರೇಂದ್ರ ಮೋದಿ ಸರ್ಕಾರ ಗ್ಲೋಬಲ್ ಅಫೇರ್ಸ್ ಕೆನಡಾಕ್ಕೆ ಮೂರು ರಾಜತಾಂತ್ರಿಕ ಸಂದೇಶಗಳನ್ನು ಕಳುಹಿಸಿದೆ. ಕಾನೂನು ಬಾಹಿರ ಜನಾಭಿಪ್ರಾಯ ಸಂಗ್ರಹವನ್ನು ನಿಲ್ಲಿಸಲು ಟ್ರುಡೊ ಸರ್ಕಾರವನ್ನು ಕೇಳಿದೆ.

ಕೆನಡಾ ಸಹ ಭಾರತದ ಪ್ರಾದೇಶಿಕ ಸಮಗ್ರತೆ ಮತ್ತು ಸಾರ್ವಭೌಮತೆಯನ್ನು ಗೌರವಿಸುತ್ತದೆ, ಈ ಜನಾಭಿಪ್ರಾಯಕ್ಕೆ ಮನ್ನಣೆ ನೀಡುವುದಿಲ್ಲವೆಂದು ಅಲ್ಲಿನ ಟ್ರೂಡೊ ಸರ್ಕಾರ ಮೋದಿ ಸರ್ಕಾರಕ್ಕೆ ಭರವಸೆ ನೀಡಿದೆ. ಆದ್ರೆ ತೀವ್ರಗಾಮಿ ಸಿಖ್ಖರು ಆಯೋಜಿಸಿದ ಜನಾಭಿಪ್ರಾಯ ಸಂಗ್ರಹವನ್ನು ಟ್ರುಡೊ ಖಂಡಿಸಿರಲಿಲ್ಲ. ಕೆನಡಾದಲ್ಲಿ ಶಾಂತಿಯುತವಾಗಿ ಮತ್ತು ಕಾನೂನುಬದ್ಧವಾಗಿ ಹೋರಾಡಲು, ಅಭಿಪ್ರಾಯಗಳನ್ನು ಒಟ್ಟುಗೂಡಿಸುವ ಮತ್ತು ವ್ಯಕ್ತಪಡಿಸುವ ಹಕ್ಕನ್ನು ಜನರು ಹೊಂದಿದ್ದಾರೆ ಎನ್ನುತ್ತಿದೆ ಅಲ್ಲಿನ ಸರ್ಕಾರ.

ಕೆನಡಾದ ಒಂಟಾರಿಯೊದ ಬ್ರಾಂಪ್ಟನ್‌ನಲ್ಲಿರುವ ಸ್ವಾಮಿನಾರಾಯಣ ಮಂದಿರದಲ್ಲಿ ಇತ್ತೀಚೆಗೆ ವಿಧ್ವಂಸಕ ಕೃತ್ಯ ನಡೆದಿತ್ತು. ಕೆನಡಾವು ಪಂಜಾಬ್‌ನ ಪ್ರತ್ಯೇಕತಾವಾದಿಗಳ ಕೇಂದ್ರವಾಗಿರುವುದರಿಂದ ಈ ಎರಡು ದೇಶಗಳಲ್ಲಿ ಸಂಪೂರ್ಣ ಸಿಖ್ ಆಮೂಲಾಗ್ರ ಚಳುವಳಿಗೆ ಹಣ ಪೂರೈಕೆಯಾಗ್ತಿದೆ. ಭಾರತ ವಿರೋಧಿ ಸಿಖ್ ಮೂಲಭೂತವಾದಿಗಳ ವಿರುದ್ಧ ಕ್ರಮ ಕೈಗೊಳ್ಳದಿರುವುದು ಪ್ರಮಾದ ಎಂಬುದನ್ನು ಭಾರತ, ಬ್ರಿಟನ್‌, ಕೆನಡಾ ಮಾತ್ರವಲ್ಲದೆ ಅಮೆರಿಕಕ್ಕೂ ಸ್ಪಷ್ಟವಾಗಿ ಹೇಳಿದೆ.

𝐂𝐡𝐚𝐧𝐝𝐚𝐧 𝐌𝐑𝐂

𝐃𝐈𝐑𝐄𝐂𝐓𝐎𝐑 -𝐍𝐂𝐈𝐁 𝐓𝐈𝐌𝐄𝐒 𝐌𝐄𝐃𝐈𝐀 𝟐𝟒/𝟕 𝐏𝐕𝐓. 𝐋𝐓𝐃.

Related Articles

Leave a Reply

Your email address will not be published. Required fields are marked *

Back to top button