BIG NEWS: ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ: ಸಚಿವ ಡಾ.ಸಿಎನ್ ಅಶ್ವತ್ಥನಾರಾಯಣ ವಿರುದ್ಧ ಕ್ರಮಕ್ಕೆ ಡಿಸಿಗೆ ಸಿಇಓ ಶಿಫಾರಸ್ಸು.!

ಮಂಡ್ಯ: ದಕ್ಷಿಣ ಪದವೀಧರ ಕ್ಷೇತ್ರದ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದ್ದರೂ, ಇದನ್ನು ಉಲ್ಲಂಘಿಸಿ, ಸಚಿವ ಡಾ.ಸಿಎನ್ ಅಶ್ವತ್ಥನಾರಾಯಣ ಅವರು, ಮಂಡ್ಯದ ವಿವಿಧ ಕಾಲೇಜುಗಳಲ್ಲಿ ಚುನಾವಣಾ ಪ್ರಚಾರ ಸಭೆ ನಡೆಸಿರೋದಾಗಿ ತಿಳಿದು ಬಂದಿದೆ.
ಈ ಎಲ್ಲಾ ದಾಖಲೆಯನ್ನು ಕಲೆ ಹಾಕಿರುವಂತ ಸಿಇಓ, ಅವರ ವಿರುದ್ಧ ನೀತಿ ಸಂಹಿತೆ ಉಲ್ಲಂಘನೆ ಅಡಿಯಲ್ಲಿ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ಶಿಫಾರಸ್ಸು ಮಾಡಿದ್ದಾರೆ.
ಮೇ.16ರಂದು ಉನ್ನತ ಶಿಕ್ಷಣ ಸಚಿವ ಡಾ.ಸಿಎನ್ ಅಶ್ವತ್ಥನಾರಾಯಣ ( Minister Dr CN Ashwathnarayana ) ಅವರು, ದಕ್ಷಿಣ ಪದವೀಧರರ ಕ್ಷೇತ್ರದ ಚುನಾವಣೆ ಹಿನ್ನಲೆಯಲ್ಲಿ, ಮಂಡ್ಯದ ವಿವಿಧ ಕಾಲೇಜುಗಳಲ್ಲಿ ಚುನಾವಣಾ ಪ್ರಚಾರ ನಡೆಸಿರೋದಾಗಿ ತಿಳಿದು ಬಂದಿದೆ. ಬಿಜೆಪಿ ಅಭ್ಯರ್ಥಿ, ಪಕ್ಷದ ಮುಖಂಡರ ಸಮ್ಮುಖದಲ್ಲಿ ಪ್ರಚಾರ ಸಭೆ ಕೂಡ ನಡೆಸಿದ್ದಾರೆ ಎನ್ನಲಾಗಿದೆ.
ಮಂಡ್ಯದ ಮಾಂಡವ್ಯ ಕಾಲೇಜು, ಮಹಿಳಾ ಕಾಲೇಜು, ವೈದ್ಯಕೀಯ ಕಾಲೇಜು, ಮಂಡ್ಯ ವಿಶ್ವವಿದ್ಯಾಲಯ, ಪಿಇಎಸ್ ಕಾಲೇಜುಗಳಲ್ಲಿ ಸರಣಿ ಸಭೆ ನಡೆಸಿರೋ ಅವರು, ಚುನಾವಣಾ ಪ್ರಚಾರ ಸಭೆ ಮೂಲಕ ಮತಯಾಚಿಸಿದ್ದಾರೆ. ರಾಜಕೀಯ ಕೇಂದ್ರಗಳಾದ ವಿದ್ಯಾ ಕೇಂದ್ರಗಳು ಎಂಬುದಾಗಿ ಕಾಂಗ್ರೆಸ್ ಕಾನೂನು ಘಟಕದಿಂದ ಸಚಿವರ ವಿರುದ್ಧ ದೂರು ನೀಡಲಾಗಿತ್ತು.
ಈ ಸಂಬಂಧ ತನಿಖೆ ನಡೆಸಿದಂತ ಜಿಲ್ಲಾ ಪಂಚಾಯ್ತಿ ಉಪ ಕಾರ್ಯದರ್ಶಿಗಳು 3 ಪುಟಗಳ ವಿಸ್ತೃತ ವರದಿಯನ್ನು ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಾಧಿಕಾರಿಗಳಿಗೆ ಸಲ್ಲಿಸಿದ್ದಾರೆ. ಈ ವರದಿಯಲ್ಲಿ ಮೇ.16ರಂದು ಸಚಿವ ಡಾ.ಸಿಎನ್ ಅಶ್ವತ್ಥನಾರಾಯಣ ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿರೋದಾಗಿ ತಿಳಿಸಲಾಗಿದೆ. ಈ ವರದಿಯನ್ನು ಮಂಡ್ಯ ಜಿಲ್ಲಾ ಮಟ್ಟದ ಮಾದರಿ ನೀತಿ ಸಂಹಿತೆ ಮುಖ್ಯಸ್ಥರಾಗಿರುವಂತ ಜಿಲ್ಲಾ ಪಂಚಾಯ್ತಿ ಸಿಇಓ, ಜಿಲ್ಲಾಧಿಕಾರಿಗಳಿಗೆ ಕ್ರಮಕ್ಕೆ ಶಿಫಾರಸ್ಸು ಮಾಡಿದ್ದಾರೆ. ಹೀಗಾಗಿ ಈಗ ಸಚಿವ ಡಾ.ಸಿಎನ್ ಅಶ್ವತ್ಥನಾರಾಯಣಗೆ ಸಂಕಷ್ಟ ಎದುರಾಗಿದೆ.