
ಬೆಂಗಳೂರು : ಚೀನಾ ಮೂಲದ ಲೋನ್ ಆ್ಯಪ್‌ಗಳಿಂದ ಸಾಕಷ್ಟು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಹೀಗಾಗಿ ಸಾಲ ಕೊಡುವ ಚೈನೀಸ್ ಲೋನ್ ಆ್ಯಪ್ಗಳ ಹಾವಳಿ ನಿಯಂತ್ರಿಸಲು ಬೆಂಗಳೂರು ನಗರ ಪೊಲೀಸದು ಮುಂದಾಗಿದ್ದಾರೆ. ಒಂದು ವರ್ಷದಲ್ಲಿ ಅಂದಾಜು 100 ಕೋಟಿ ಹಣ ಫ್ರೀಜ್ ಮಾಡಿದ್ದಾರೆ.
2 ರಿಂದ 7 ಸಾವಿರದವರೆಗೆ ಸಾಲ ಕೊಟ್ಟು ಅದನ್ನ ಮರುಪಾವತಿ ಮಾಡದ ಗ್ರಾಹಕರಿಗೆ ಅಶ್ಲೀಲ ಸಂದೇಶ ಹಾಗೂ ಬೈದು ಕಿರುಕುಳ ನೀಡಲಾಗುತ್ತಿತ್ತು.
ಆನ್‌ಲೈನ್ ಲೋನ್ ಆ್ಯಪ್ಗಳ ಉಪಟಳಕ್ಕೆ ಈಗಾಗಲೇ ದೇಶದಾದ್ಯಂತ ಸಾಕಷ್ಟು ಮಂದಿ ಮೋಸ ಹೋಗಿದ್ದಾರೆ.
ಇದಕ್ಕೆ ಸಿಲಿಕಾನ್ ಸಿಟಿ ಸಹ ಹೊರತಾಗಿಲ್ಲ. ಹೀಗಾಗಿ ಬೆಂಗಳೂರು ಸಿಸಿಬಿ ಹಾಗೂ ನಗರದ ಸೆನ್ ಪೊಲೀಸ್ ಠಾಣೆಯ ಅಧಿಕಾರಿಗಳು ಒಂದು ವರ್ಷದಿಂದ ಲೋನ್ ಆ್ಯಪ್ಗಳ ವಿರುದ್ಧ ನಿರಂತರ ಕಾರ್ಯಾಚರಣೆ ನಡೆಸುತ್ತಿದ್ದಾರೆ.
ಚೈನೀಸ್ ಲೋನ್ ಆ್ಯಪ್ಗಳ ಬೆನ್ನು ಬಿದ್ದಿರುವ ಪೊಲೀಸರು, ಸುಮಾರು ನೂರು ಕೋಟಿ ಪ್ರೀಜ್ ಮಾಡಿದ್ದಾರೆ.
ಚೈನೀಸ್ ಲೋನ್ ಆ್ಯಪ್ ಸೇರಿದಂತೆ ಸೈಬರ್ ಚೋರರ ಪ್ರಕರಣಗಳಿಗೆ ಸಂಬಂಧಿಸಿದಂತೆ ನಗರದ ಸೆನ್ ಠಾಣೆಯ ಪೊಲೀಸರು ಸಾಕಷ್ಟು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದು, ಈಗಾಗಲೇ ಹಲವು ಆರೋಪಿಗಳನ್ನ ಬಂಧಿಸಿದ್ದಾರೆ.
ಕಳೆದ ಒಂದು ವರ್ಷದಲ್ಲಿ ನಗರದ 8 ಸೆನ್ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿರುವ ಪ್ರಕರಣಗಳಿಂದ 40 ಕೋಟಿಗೂ ಅಧಿಕ ಹಾಗೂ ಸಿಸಿಬಿ ತನಿಖೆ ನಡೆಸುತ್ತಿರುವ 18 ಪ್ರಕರಣಗಳಲ್ಲಿ ಅಂದಾಜು 70 ಕೋಟಿ ಹಣವನ್ನು ಆ್ಯಪ್ಗಳಿಗೆ ಸಂಬಂಧಿಸಿದ ವಿವಿಧ ಬ್ಯಾಂಕ್ ಖಾತೆಗಳಿಂದ ಫ್ರೀಜ್ ಮಾಡಲಾಗಿದೆ.
ಸಿಸಿಬಿ ಪೊಲೀಸರು ಭೇದಿಸಿರುವ 18 ಪ್ರಕರಣಗಳಲ್ಲಿ ಪ್ರೀಜ್ ಆದ ಹಣವನ್ನು ಮುಟ್ಟುಗೋಲು ಹಾಕಿಕೊಳ್ಳುವಂತೆ ಜಾರಿ ನಿರ್ದೇಶಾನಾಲಯಕ್ಕೆ (ಇಡಿ) ಶಿಫಾರಸು ಮಾಡಲು ನಿರ್ಧರಿಸಲಾಗಿದೆ ಎಂದು ನಗರ ಅಪರಾಧ ವಿಭಾಗದ ಜಂಟಿ ಪೊಲೀಸ್ ಆಯುಕ್ತ ರಮನ್ ಗುಪ್ತಾ ಹೇಳಿದ್ದಾರೆ.
ಭಾರತದಲ್ಲಿ ಲೋನ್ ಆ್ಯಪ್ಗಳ ಮೂಲಕ ಸಂಪಾದಿಸುವ ಕೋಟ್ಯಾಂತರ ರೂ ಹಣವನ್ನ ಹಾಂಕಾಂಗ್ ಹಾಗೂ ಚೀನಾಗೆ ಟ್ರೇಡಿಂಗ್ ಮೂಲಕ ಹಣ ವರ್ಗಾವಣೆ ಮಾಡಲಾಗುತ್ತಿದೆ.
ಹೀಗಾಗಿ ಭಾರತದಿಂದ ಹೊರ ಹೋಗುತ್ತಿರುವ ಕೋಟ್ಯಾಂತರ ರೂಪಾಯಿ ಹಾಗೂ ಫ್ರೀಜ್ ಆಗಿರುವ ಹಣದ ಬಗ್ಗೆ ಮುಂದೆ ಇಡಿ ತನಿಖೆ ನಡೆಸಲಿದೆ ಎಂದು ಮಾಹಿತಿ ನೀಡಿದ್ದಾರೆ.