9ರಂದು ನಂಜನಗೂಡಿಗೆ ಜೈಭೀಮ್ ಜನ ಜಾಗೃತಿ ಜಾಥಾ

ನಂಜನಗೂಡು: ಬಹುಜನ ಸಮಾಜ ಪಕ್ಷದ ವತಿಯಿಂದ ಸಂವಿಧಾನ ರಕ್ಷಣೆಗಾಗಿ ಕನಾಟಕ ರಾಜ್ಯವ್ಯಾಪಿ ನಡೆಸುತ್ತಿರುವ ಜೈಭೀಮ್ ಜನ ಜಾಗೃತಿ ಜಾಥಾ ಯಾತ್ರೆ ನ.9ರಂದು ನಂಜನಗೂಡು ವಿಧಾನಸಭಾ ಕ್ಷೇತ್ರವನ್ನು ಪ್ರವೇಶಿಸಲಿದೆ ಎಂದು ಬಿಎಸ್ಪಿ ಜಿಲ್ಲಾ ಉಪಾಧ್ಯಕ್ಷ ಶ್ರೀಕಂಠ ಹೇಳಿದರು. ಅವರು ಶನಿವಾರ ನಗರದ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು.
‘ಸಂವಿಧಾನ ರಕ್ಷಣೆಗಾಗಿ ಬಿಎಸ್ಪಿಯಿಂದ ರಾಜ್ಯವ್ಯಾಪಿ ಸೆ. 28ರಿಂದ ಪ್ರಾರಂಭಗೊಂಡು ನ.13ರವರೆಗೆ ನಡೆಯಲಿರುವ ಜೈಭೀಮ್ ಜನ ಜಾಗೃತಿ ಜಾಥಾ ನ.9ರಂದು ಬೆಳಗ್ಗೆ 9 ಗಂಟೆಗೆ ತಾಲೂಕಿನ ಹೆಡಿಯಾಲ ಗ್ರಾಮದ ಮೂಲಕ ನಂಜನಗೂಡನ್ನು ಪ್ರವೇಶಿಸಲಿದ್ದು,
ಬಳಿಕ ಮಡುವಿನಹಳ್ಳಿ, ಹುರ ಹಾಗೂ ಹುಲ್ಲಹಳ್ಳಿ ಮಾರ್ಗದಲ್ಲಿನಂಜನಗೂಡನ್ನು ಪ್ರವೇಶಿಸಲಿದೆ. ಬಳಿಕ ನಗರದ ಪ್ರಮುಖ ರಸ್ತೆಗಳಲ್ಲಿಸಂಚರಿಸಿ ಖಾಸಗಿ ಬಸ್ ನಿಲ್ದಾಣದ ಬಳಿ ಪಕ್ಷದ ಪ್ರಮುಖರು ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಜಾಗೃತಿ ರಥವನ್ನು ತಿ.ನರಸೀಪುರಕ್ಕೆ ಬೀಳ್ಕೊಡಲಿದ್ದಾರೆ” ಎಂದು ಅವರು ಹೇಳಿದರು.
ಬಿಎಸ್ಪಿ ತಾಲೂಕು ಘಟಕದ ಅಧ್ಯಕ್ಷ ಡಿ.ಕೆ. ಶಿವಣ್ಣ ಮಾತನಾಡಿ, ”ಸಂವಿಧಾನಶಿಲ್ಪಿ ಡಾ.ಬಾಬಾ ಸಾಹೇಬ್ ಅವರ ಆಶಯಗಳಿಗೆ ಆಡಳಿತಾರೂಢ ಸರಕಾರಗಳು ಧಕ್ಕೆ ತಂದೊಡ್ಡುವ ಮೂಲಕ ದೇಶವನ್ನು ಅರಾಜಕತೆಯತ್ತ ಕೊಂಡೊಯ್ಯಲು ಮುಂದಾಗಿವೆ.
ಮೀಸಲಾತಿಯನ್ನು ಬಲಹೀನಗೊಳಿಸುವ ಸಂಚು ನಡೆಯುತ್ತಿದ್ದು, ಜೊತೆಗೆ ಸಾರ್ವಜನಿಕ ವಲಯದ ಸೇವೆಗಳನ್ನು ಖಾಸಗೀಕರಣಗೊಳಿಸುವ ಮೂಲಕ ರಾಷ್ಟ್ರದ ಹಿತಕ್ಕೆ ಧಕ್ಕೆತರಲಾಗುತ್ತಿದೆ.
ಇನ್ನು ದೇಶದಲ್ಲಿಪರಿಶಿಷ್ಟ ಜಾತಿ ಮತ್ತು ಪಂಗಡದ ಜನರ ಮೇಲೆ ದೌರ್ಜನ್ಯಗಳು ದಿನೇದಿನೇ ಹೆಚ್ಚಾಗುತ್ತಿವೆ ಹಾಗೂ ಅಲ್ಪಸಂಖ್ಯಾತ ಸಮುದಾಯದ ಜನರ ಮೇಲೆ ದಬ್ಬಾಳಿಕೆ ನಡೆಸಲಾಗುತ್ತಿದೆ.
ಹೀಗಾಗಿ ಸಂವಿಧಾನದ ಆಶಯಗಳಿಗೆ ಧಕ್ಕೆಯುಂಟಾಗುವ ಆತಂಕದಿಂದಾಗಿ ಜೈಭೀಮ್ ಜನ ಜಾಗೃತಿ ಜಾಥಾವನ್ನು ಕೈಗೊಂಡಿದ್ದು, ಜಾಥಾದಲ್ಲಿ ಬಿಎಸ್ಪಿ ರಾಜ್ಯಾಧ್ಯಕ್ಷ ಕೃಷ್ಣಮೂರ್ತಿ ಹಾಗೂ ರಾಜ್ಯ ಸಂಯೋಜಕ ಮಾರಸಂದ್ರ ಮುನಿಯಪ್ಪ ಪಾಲ್ಗೊಂಡು ಜನಜಾಗೃತಿ ಮೂಡಿಸಲಿದ್ದಾರೆ” ಎಂದರು.
ಸುದ್ದಿಗೋಷ್ಠಿಯಲ್ಲಿ ಬಿಎಸ್ಪಿ ಜಿಲ್ಲಾಕಾರ್ಯದರ್ಶಿ ಪುರುಷನಾಥ್, ಚೆನ್ನಬಸವಯ್ಯ, ಸಿದ್ಧರಾಜು, ಜಯಮೂರ್ತಿ, ಮಹದೇವಯ್ಯ, ರಂಗಸ್ವಾಮಿ, ಕೆಂಪಣ್ಣ ಪುಟ್ಟೀರಯ್ಯ ಮತ್ತಿತರರಿದ್ದರು.