80 ಸಾವಿರ ರೂ. ಲಂಚ ಪಡೆದ ರೈಲ್ವೆ ಅಧಿಕಾರಿ ಸೇರಿ ಮೂವರ ಬಂಧನ
CBI arrests 3 RITES officials in bribery case

ಭ್ರಷ್ಟಾಚಾರ ಪ್ರಕರಣದಲ್ಲಿ ಸಿಬಿಐ ಉತ್ತರ ರೈಲ್ವೆ ವಲಯದ ಲಕ್ನೋ ವಿಭಾಗದ ಅಧಿಕಾರಿ ಹಾಗೂ ಮತ್ತಿಬ್ಬರನ್ನು ಶನಿವಾರ ಕೇಂದ್ರ ತನಿಖಾ ದಳ (ಸಿಬಿಐ) ಬಂಧಿಸಿದೆ. ಡೆಪ್ಯುಟಿ ಚೀಫ್ ಮೆಟೀರಿಯಲ್ಸ್ ಮ್ಯಾನೇಜರ್ (ಕ್ಯಾರೇಜ್ ಮತ್ತು ವ್ಯಾಗನ್) ಅಲೋಕ್ ಮಿಶ್ರಾ, ಇತರರಾದ ಅವನೀಶ್ ಮಿಶ್ರಾ ಮತ್ತು ಮಂಜಿತ್ ಸಿಂಗ್ ಎಂಬುವರು 80,000 ರೂಪಾಯಿ ಲಂಚ ಸ್ವೀಕರಿಸಿದ್ದ ವೇಳೆ ಬಂಧಿಸಿರುವುದಾಗಿ ತಿಳಿಸಲಾಗಿದೆ.
ಬಂಧಿತ ಮೂವರೊಂದಿಗೆ ಇತರ ಅಧಿಕಾರಿಗಳು ಹಾಗೂ ಖಾಸಗಿ ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ರೈಲ್ವೆ ಕಾಮಗಾರಿ ಗುತ್ತಿಗೆ ನೀಡಲು ಮತ್ತು ಆ ಕೆಲದ ಬಿಲ್‍ಗಳನ್ನು ಪಾವತಿಸಲು ಆರೋಪಿಗಳು ಲಂಚಕ್ಕೆ ಬೇಡಿಕೆಯಿಟ್ಟಿದ್ದರು ಎಂದು ಆರೋಪಿಸಲಾಗಿದೆ.
ಗುತ್ತಿಗೆದಾರರೊಬ್ಬರ 70 ಲಕ್ಷ ರೂ.ಮೊತ್ತದ ಬಿಲ್ ಪಾವತಿಸಲು ಅಲೋಕ್ ಮಿಶ್ರಾ 80 ಸಾವಿರ ರೂಪಾಯಿ ಲಂಚ ವಸೂಲಿ ಮಾಡುವಂತೆ ಖಾಸಗಿ ವ್ಯಕ್ತಿಗೆ ಸೂಚಿಸಿದ್ದರು. ಮಧ್ಯವರ್ತಿಯಿಂದ ಲಂಚ ಪಡೆಯುವಾಗ ಸಿಬಿಐ ಅಧಿಕಾರಿಗಳು ಬಲೆ ಬೀಸಿ ಬಂಧಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಲಕ್ನೋದ ವಿವಿಧೆಡೆ ಶೋಧ ನಡೆಸಲಾಗಿದೆ. ಅಲೋಕ್ ಮಿಶ್ರಾ ಅವರ ನಿವಾಸದಿಂದ 32.10 ಲಕ್ಷ ರೂಪಾಯಿ ವಶಪಡಿಸಿಕೊಳ್ಳಲಾಗಿದೆ. ಜೊತೆಗೆ ದೋಷಾರೋಪಣೆಯ ದಾಖಲೆಗಳು ಮತ್ತು ಡಿಜಿಟಲ್ ಸಾಧನಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಸಿಬಿಐ ತಿಳಿಸಿದೆ. ಬಂಧಿತ ಆರೋಪಿಗಳನ್ನು ಸಕ್ಷಮ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ.