
ಸದ್ಯ ಪರದೆ ಮೇಲೆ ಓಡುತ್ತಿರುವ ಚಾರ್ಲಿ 777 ಚಿತ್ರ ಮಾದರಿಯ ಘಟನೆಯೊಂದು ಬೆಳಗಾವಿಯಲ್ಲಿಯೂ ನಡೆದಿದ್ದು, ಜನರಿಗೆ ತೀವ್ರ ಮರುಕ ಉಂಟು ಮಾಡಿದೆ. ವ್ಯವಸ್ಥೆಗೆ ಕೈಗನ್ನಡಿಯೆನ್ನುವಂತೆ ರಕ್ತ ಸಿಗದೆ ಆರು ಮರಿಗಳ ತಾಯಿ ಶ್ವಾನ ಅಸು ನೀಗಿದೆ.ಬೆಳಗಾವಿ ತಾಲೂಕಿನ ಕಂಗ್ರಾಳಿ ಗ್ರಾಮದ ಸೋನಿ ತನ್ನ ಮಾಲೀಕನ ಎಡೆಬಿಡದ ಪ್ರಯತ್ನದ ನಂತರವೂ ಕಾಲನ ಕರೆಗೆ ತನ್ನ ಆರು ಮಕ್ಕಳನ್ನು ತೊರೆದು ತೆರಳಿದ್ದಾಳೆ. ತೀವ್ರ ರಕ್ತಹೀನತೆಯ ಅನಾರೋಗ್ಯದಿಂದ ಬಳಲುತ್ತಿದ್ದ ಲ್ಯಾಬ್ರಡಾರ್ ಜಾತಿಯ ಶ್ವಾನ ಸೋನಿಗೆ ರಕ್ತ ಕೊಡಿಸಲು ಸರಕಾರಿ ಆಸ್ಪತ್ರೆ, ಖಾಸಗಿ ಆಸ್ಪತ್ರೆ, ಪಶು ಚಿಕಿತ್ಸಾಲಯಗಳಿಗೆ ತಿರುಗಾಡಿ ಕೊನೆಗೆ ಅದರ ಮಾಲೀಕ ಪಾಟೀಲ ಎಂಬುವವರು ಕೈ ಚೆಲ್ಲಿದ್ದರು.
ಪ್ರಾಣಿಪ್ರಿಯ ವಿನಾಯಕ ಕಾಳಸ್ಕರ್ ಎಂಬುವವರು ಕಷ್ಟಪಟ್ಟು ರಕ್ತ ಸಂಗ್ರಹಿಸಿದರೂ ಅದನ್ನು ಸಾಗಿಸುವ ಪ್ಯಾಕೆಟ್ ಸಿಗದ್ದರಿಂದ ಸೋನಿ ಕೊನೆಯುಸಿರೆಳೆದದ್ದು ಗಮನ ಸೆಳೆದಿದೆ. ಕೃಷಿ ಗುಡಿಕೈಗಾರಿಕೆ ಮೂಲ ಕಸುಬಿನ ಮೇಲೆ ಆರ್ಥಿಕತೆ ಕಟ್ಟಿಕೊಳ್ಳುತ್ತಿರುವ ಭಾರತಕ್ಕೆ ಅಧಿಕಾರಿಶಾಹೀ ಮತ್ತು ಅನಕ್ಷರಸ್ಥ ಗೂಂಡಾ ಸಂಸ್ಕೃತಿಯ ರಾಜಕಾರಣಿಗಳೇ ಶಾಪವಾಗಿದ್ದಾರೆ ಎಂಬುವುದು ವೇದ್ಯವಾಗಿದೆ.
ಪಶುವೈದ್ಯಕೀಯ ಇಲಾಖೆ ಆಧುನೀಕರಣ ಮತ್ತು ಸಶಕ್ತತೆಯ ಹೆಸರಿನಲ್ಲಿ ಕೋಟ್ಯಾಂತರ ಹಣ ನುಂಗಲಾಗಿದೆ ಹೊರತು ಪರಿಸ್ಥಿತಿ ಸುಧಾರಿಸಿಯೇ ಇಲ್ಲ. ಪಶುಸಂಗೋಪನಾ ಇಲಾಖೆಯ ದುಸ್ಥಿತಿಯಿಂದ ಇಂದು ಮುದ್ದಾದ ನಾಯಿಯೊಂದು ಚೇತರಿಸಿಕೊಳ್ಳಲು ಸಮಯವಿದ್ದರೂ ವ್ಯವಸ್ಥೆಯ ನಿರ್ಲಕ್ಷ್ಯಕ್ಕೆ ಅಸುನೀಗಿದೆ.
ಪೆಟ್ಸ್ ಕಣ್ಮರೆಯಾದರೆ ಆಗುವ ನೋವೆಷ್ಟು ಎಂದು ಸ್ವತಃ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ ತಮ್ಮ ಮನೆ ನಾಯಿ ಸತ್ತಾಗ ಭಾವನಾತ್ಮಕವಾಗಿ ಕುಗ್ಗಿದ್ದನ್ನು ನಾವೆಲ್ಲ ಗಮನಿಸಿದ್ದೇವೆ.
ಈ ನಡುವೆ ಇದೇ ಘಟನೆ ಹೋಲುವ ಚಾರ್ಲಿ-777 ಚಲನಚಿತ್ರವೂ ರಾಜ್ಯದಲ್ಲಿ ತೆರೆ ಕಂಡಿದೆ. ಕಾಕತಾಳೀಯ ಎಂಬಂತೆ ಬೆಳಗಾವಿಯ ಸೋನಿ ಯೂ ಕಣ್ಮರೆಯಾಗಿದ್ದಾಳೆ. ಸೋನಿ ಪ್ರಾಣಿಯಾದರೂ ಅವಳದೇ ಕುಟುಂಬ ವ್ಯವಸ್ಥೆಯಲ್ಲಿ ಮಕ್ಕಳು ಮತ್ತು ಮಾಲೀಕರನ್ನು ಅಗಲಿರುವುದು ದುರ್ದೈವ.ಸರಕಾರಿ ವ್ಯವಸ್ಥೆ ಮತ್ತು ಇಲಾಖೆಗಳು ಬದ್ಧತೆಯ ಕಾರ್ಯ ನಿರ್ವಹಣೆ ಮಾಡಿದರೆ ಸಮಾಜ ಉಳಿದೀತು..!