ಆರೋಗ್ಯ

5 ರೂಪಾಯಿ ವೈದ್ಯ ಡಾ.ಶಂಕರೇಗೌಡ ಡಿಸ್ಚಾರ್ಜ್, ‘ವಿಶ್ರಾಂತಿ ಬಳಿಕ ಚಿಕಿತ್ಸೆ ಮುಂದುವರೆಸುವೆ’

ಬೆಂಗಳೂರು: ಹೃದಯಾಘಾತಕ್ಕೆ‌ ಒಳಗಾಗಿ ಫೋರ್ಟಿಸ್ ಆಸ್ಪತ್ರೆಗೆ ದಾಖಲಾಗಿದ್ದ ಮಂಡ್ಯದ 5 ರೂಪಾಯಿ ವೈದ್ಯರೆಂದು ಖ್ಯಾತಿ ಹೊಂದಿರುವ ಡಾ.ಶಂಕರೇಗೌಡ ಅವರನ್ನು ಇಂದು ಫೋರ್ಟಿಸ್ ಆಸ್ಪತ್ರೆಯಿಂದ ಡಿಸ್‌ಚಾರ್ಜ್‌ ಮಾಡಲಾಗಿದೆ.

ಈ ಕುರಿತು ಶುಕ್ರವಾರ ಫೋರ್ಟಿಸ್‌ ಅಸ್ಪತ್ರೆಯಲ್ಲಿ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡಾ.ಶಂಕರೇಗೌಡ, ಒಂದು ತಿಂಗಳ ಹಿಂದೆ ಹೃದಯದಲ್ಲಿ ರಕ್ತದ ನಾಳಗಳು ಬ್ಲಾಕ್‌ ಆಗಿದ್ದ ಕಾರಣ ಹೃದಯಾಘತ ಸಂಭವಿಸಿತ್ತು.

ಕೂಡಲೇ ಮೈಸೂರಿನಲ್ಲಿರುವ ಆಸ್ಪತ್ರೆಗೆ ದಾಖಲಾಗಿದ್ದೆ. ಆದರೆ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಫೋರ್ಟಿಸ್‌ ಆಸ್ಪತ್ರೆಗೆ ವರ್ಗಾವಣೆ ಮಾಡಿದ್ದರು.

ಇಲ್ಲಿನ ಚಿಕಿತ್ಸಾ ವಿಧಾನದಿಂದ ನನ್ನ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದೆ.ಇದಕ್ಕಾಗಿ ಡಾ. ವಿವೇಕ್ ಜವಳಿ ಅವರ ತಂಡ ವಿಶೇಷ ಕಾಳಜಿ ವಹಿಸಿ ನನಗೆ ಚಿಕಿತ್ಸೆ‌ ನೀಡಿದೆ.ನನ್ನ ಆರೋಗ್ಯದ ಬಗ್ಗೆ ಕಾಳಜಿ ವಹಿಸಿದ ಎಲ್ಲಾ ವೈದ್ಯರಿಗೂ ಧನ್ಯವಾದಗಳು.

ಪ್ರತಿಯೊಬ್ಬರು ಹೆಚ್ಚಿನ ಕಾಳಜಿಯಿಂದ ಚಿಕಿತ್ಸೆ ನೀಡಿದ್ದಾರೆ. ಜೊತೆಗೆ ನನ್ನ ಆರೋಗ್ಯದ ಸುಧಾರಣೆಗೆ ಕಾಳಜಿ ವಹಿಸಿದ ಪ್ರತಿಯೊಬ್ಬರಿಗೂ ನಾನು ಋಣಿ ಎಂದರು. ಸದ್ಯ ನಾನು ಸಂಪೂರ್ಣವಾಗಿ ಗುಣವಾಗಿದ್ದು , ವೈದ್ಯರ ಸಲಹೆ ಮೇರೆಗೆ 6 ವಾರಗಳು ವಿಶ್ರಾಂತಿ ಬೇಕಿದೆ.

ವಿಶ್ರಾಂತಿ ಪಡೆದ ಬಳಿಕ, ಹಿಂದಿನಂತೆ 5 ರೂಪಾಯಿ ಚಿಕಿತ್ಸೆ ಮುಂದುವರೆಸುತ್ತೇನೆ ಎಂದಿದ್ದಾರೆ. 42 ವರ್ಷದಿಂದ ಸೇವೆ: ಕಳೆದ 42 ವರ್ಷದಿಂದ ಮಂಡ್ಯದಲ್ಲಿ ಉಚಿತವಾಗಿ ಚಿಕಿತ್ಸೆ ನೀಡುತ್ತಾ ಬಂದಿದ್ದು ನನಗೆ ಆತ್ಮತೃಪ್ತಿ ನೀಡಿದೆ.

ಮುಂದೆಯೂ ಕೂಡ ಈ ವೃತ್ತಿ ಮುಂದುವರೆಸಿಕೊಂಡು ಹೋಗಲಿದ್ದೇನೆ. ಕೇವಲ ವೈದ್ಯನಲ್ಲದೇ ಕೃಷಿಕನಾಗಿಯೂ ನಾನು ದುಡಿದ್ದೇನೆ.

2010 ರಲ್ಲಿ ಜಿಲ್ಲಾ ಪಂಚಾಯತ್ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದೆ. ಆದರೆ ರಾಜಕೀಯಕ್ಕೆ ಕಾಲಿಟ್ಟ ಮೇಲೂ ಜನರಿಗೆ ಉಚಿತವಾಗಿ ಚಿಕಿತ್ಸೆ ನೀಡುವ ಕಸುಬು ಬಿಡಲಿಲ್ಲ.‌ಹಾರ್ಟ್‌ ಅಟ್ಯಾಕ್‌ಗೂ ಮುನ್ನ ನಾನು 200 ಜನರಿಗೆ ಚಿಕಿತ್ಸೆ ನೀಡಿದ್ದೆ ಅದು ಸಂತೋಷ ನೀಡಿದೆ.

ಇನ್ನೂ ಈ ವೇಳೆ ಫ್ರೋಟಿಸ್ ಆಸ್ಪತ್ರೆಯ ಹೃದಯ ತಜ್ಞ ಡಾ. ವಿವೇಕ್ ಜಾವಳಿ ಸೇರಿ ಮತ್ತಿತರರು ಉಪಸ್ಥಿತರಿದ್ದರು.

Basaveshwara M

Crime reporter, Bangalore

Related Articles

Leave a Reply

Your email address will not be published. Required fields are marked *

Back to top button