ರಾಜಕೀಯ

40% ಕಮಿಷನ್ ವಿರುದ್ಧ ಹೋರಾಟಕ್ಕೆ ಪ್ರತಿಪಕ್ಷಗಳ ಹಿಂಜರಿಕೆ

ಸರ್ಕಾರಿ ಕಾಮಗಾರಿ ಗಳಲ್ಲಿ ಶೇ.40ರಷ್ಟು ಕಮಿಷನ್ ದಂಧೆ ನಡೆಯುತ್ತಿದೆ ಎಂಬ ಗುತ್ತಿಗೆದಾರರ ಸಂಘದ ಅರೋಪವನ್ನು ಅಸ್ತ್ರವಾಗಿ ಬಳಸಿಕೊಳ್ಳಲು ಪ್ರತಿಪಕ್ಷಗಳಿಗೆ ಅಳುಕು ಆರಂಭವಾಗಿದೆ. ಮೇಲ್ನೋಟಕ್ಕೆ ಭ್ರಷ್ಟಾಚಾರದ ವಿರುದ್ಧ ರಣಕಹಳೆ ಯಂತೆ ಕಂಡುಬರುವ ಎಲ್ಲಾ ಪಕ್ಷಗಳು ಒಳಗೊಳಗೆ ಹಿಂಜರಿಕೆಯಿಂದ ಬಳಲುತ್ತಿದ್ದಾರೆ.

ಪ್ರಸ್ತುತ ಬಿಜೆಪಿ ಸರ್ಕಾರದಲ್ಲಿ ಶೇ.40ರಷ್ಟು ಕಮೀಷನ್ ಪಡೆಯಲಾಗುತ್ತಿದೆ ಎಂದು ಆರೋಪ ಮಾಡಿರುವ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಈ ಹಿಂದೆ ಆಡಳಿತ ನಡೆಸಿದ ಎಲ್ಲ ಪಕ್ಷಗಳು ಭ್ರಷ್ಟಾಚಾರ ನಡೆಸಿವೆ, ಕಮೀಷನ್ ಪಡೆದಿವೆ ಎಂಬ ಆರೋಪವನ್ನು ಮಾಡಿದ್ದಾರೆ.ಯಾರೂ ಸಾಚಾ ಅಲ್ಲ ಎಲ್ಲ ಕಾಲದಲ್ಲೂ ಭ್ರಷ್ಟಾಚಾರ ಸಾಮಾನ್ಯವಾಗಿತ್ತು.

ಆದರೆ ಕಡಿಮೆ ಪ್ರಮಾಣದಲ್ಲಿತ್ತು. ಕೆಲವರು ಶೇ.5ರಷ್ಟು ಪಡೆದರೆ ಇನ್ನು ಕೆಲವರ ಕಾಲದಲ್ಲಿ ಶೇ.10ರಷ್ಟು ಪಡೆಯಲಾಗುತ್ತಿತ್ತು. ಆಪರೇಷನ್ ಕಮಲದ ಮೂಲಕ ಅಧಿಕಾರಕ್ಕೆ ಬಂದ ಬಿಜೆಪಿ ರಾಜಕೀಯ ಅಸ್ಥಿರತೆಯನ್ನು ಅನುಭವಿಸುತ್ತಲೇ ಅಕಾರ ನಡೆಸಿದೆ. ಹೀಗಾಗಿ ಒಂದಿಷ್ಟು ಕಮೀಷನ್ ಪ್ರಮಾಣವನ್ನು ಹೆಚ್ಚು ಮಾಡಿಕೊಂಡಿದೆ ಎಂಬ ಲೇವಡಿಗಳು ಸಾಮಾನ್ಯವಾಗಿವೆ.

ಕೆಂಪಣ್ಣ ಅವರನ್ನು ಬಿಜೆಪಿ ಕಾಂಗ್ರೆಸ್ ಏಜೆಂಟ್ ಎಂದು ಕಿಡಿಕಾರಿದೆ. ಆದರೆ ಕೆಂಪಣ್ಣ ಕಾಂಗ್ರೆಸ್ ನಾಯಕರ ವಿರುದ್ಧವೂ ಕೂಡ ಭ್ರಷ್ಟಾಚಾರದ ಹಗರಣಗಳನ್ನು ಬಾಯ್ಬಿಟ್ಟಿದ್ದಾರೆ.

ಶೇ.40ರಷ್ಟು ಕಮೀಷನ್ ಕುರಿತು ಪ್ರಧಾನಮಂತ್ರಿ ನರೇಂದ್ರಮೋದಿ ಅವರಿಗೆ ಪತ್ರ ಬರೆದ ಬೆನ್ನಲ್ಲೇ ಗುತ್ತಿಗೆದಾರರ ಸಂಘ ಅದನ್ನು ಕಾಂಗ್ರೆಸ್ ನಾಯಕರಿಗೂ ನೀಡಿತ್ತು ಎನ್ನಲಾಗಿದೆ.

ಆದರೆ ಆರಂಭದಲ್ಲಿ ಗುತ್ತಿಗೆದಾರರ ಆರೋಪವನ್ನು ಉಡಾಫೆಯಾಗಿ ಪರಿಗಣಿಸಿದ ಕಾಂಗ್ರೆಸಿಗರು ಕಂಡರೂ ಕಾಣದಂತಿದ್ದರು.ಪತ್ರ ಮಾಧ್ಯಮಗಳಲ್ಲಿ ಬಹಿರಂಗಗೊಂಡು ವಿವಾದ ಸೃಷ್ಟಿಸಿದ ಬಳಿಕ ಎಚ್ಚೆತ್ತುಕೊಂಡ ನಾಯಕರು ಮತ್ತೊಮ್ಮೆ ಪತ್ರದ ಪ್ರತಿ ನೀಡುವಂತೆ ಕೆಂಪಣ್ಣ ಅವರ ಬೆನ್ನಿಗೆ ಬಿದ್ದಿದ್ದರು.ಕಮೀಷನ್ ಭ್ರಷ್ಟಾಚಾರ ಎಲ್ಲ ಕಾಲದಲ್ಲೂ ಸಾಮಾನ್ಯವಾಗಿತ್ತು.

ಈ ಹಿಂದೆ ಅದು ಕಡಿಮೆ ಇದೆ ಎಂಬ ಕಾರಣಕ್ಕೆ ಗುತ್ತಿಗೆದಾರರು ಸಿಡಿದೆದ್ದಿರಲಿಲ್ಲ. ಬಿಜೆಪಿ ಸರ್ಕಾರದಲ್ಲಿ ಮಿತಿಮೀರಿದಾಗ ಸಹನೆ ಮೀರಿ ಆರೋಪ ಮಾಡಿದ್ದಾರೆ ಎನ್ನಲಾಗಿದೆ.ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಮಾಡಿಕೊಂಡರು. ಬ್ರಹ್ಮಾಂಡ ಭ್ರಷ್ಟಾಚಾರದ ಬಗ್ಗೆ ಪ್ರತಿಪಕ್ಷ ನಿರೀಕ್ಷಿತ ಮಟ್ಟದ ಹೋರಾಟ ನಡೆಸಲಿಲ್ಲ.

ಬದಲಾಗಿ ಕಾಲಾನುಕ್ರಮದಲ್ಲಿ ಬಿಜೆಪಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದ್ದು ಬಿಟ್ಟರೆ ಪ್ರತಿಪಕ್ಷಗಳ ಕೊಡುಗೆ ಶೂನ್ಯ ಎನ್ನಲಾಗಿದೆ.ಕೇವಲ ಗುತ್ತಿಗೆಯಲ್ಲಿ ಮಾತ್ರವಲ್ಲದೆ ಸರ್ಕಾರಿ ಕಚೇರಿಗಳಲ್ಲಿ, ಸರ್ಕಾರದ ಸೇವೆಗಳಲ್ಲಿ ಭ್ರಷ್ಟಾಚಾರ ವಿಪರೀತ ಹೆಚ್ಚಾಗಿದ್ದು, ಜನಸಾಮಾನ್ಯರನ್ನು ಸುಲಿಗೆ ಮಾಡುತ್ತಿವೆ ಎಂಬ ಆರೋಪಗಳಿವೆ.

ಆದರೆ ಪ್ರತಿಪಕ್ಷಗಳು ಭ್ರಷ್ಟಾಚಾರ ಸಾಮಾನ್ಯ ಎಂಬಂತೆ ನಿರ್ಲಕ್ಷ್ಯದಿಂದಲೇ ಪ್ರತಿಕ್ರಿಯಿಸುತ್ತಿವೆ.ವಿವಾದ ಗಂಭೀರ ಸ್ವರೂಪ ಪಡೆದುಕೊಂಡಾಗ ಮಾತ್ರ ಮೈ ಕೊಡವಿ ನಿಲ್ಲುತ್ತವೆ.

ಉಳಿದಂತೆ ಹಳೆಯ ಕತೆ ಎಂಬಂತೆ ತಮ್ಮ ಪಾಡಿಗೆ ತಾವಿರುವುದು ಸಾಮಾನ್ಯವಾಗಿದೆ.ಮುಂದಿನ ತಿಂಗಳು ವಿಧಾನಮಂಡಲದ ಅವೇಶನ ನಡೆಯಲಿದ್ದು, ಅಲ್ಲಿ ಶೇ.40ರಷ್ಟು ಕಮೀಷನ್ ಹಗರಣ ಪ್ರಮುಖ ಚರ್ಚೆಯ ವಸ್ತುವಾಗಲಿದೆ.

ಆದರೆ ಈ ಚರ್ಚೆಯ ಪರಿಣಾಮ ಏನು ಎಂಬುದರ ಬಗ್ಗೆ ಸಾರ್ವಜನಿಕರಲ್ಲಿ ಈಗಾಗಲೇ ಜಿಜ್ಞಾಸೆ ಮೂಡಿದೆ.

Basaveshwara M

Crime reporter, Bangalore

Related Articles

Leave a Reply

Your email address will not be published. Required fields are marked *

Back to top button