4 ಜಿಲ್ಲೆಗಳಲ್ಲಿ ಪ್ರಾಯೋಗಿಕವಾಗಿ ಮೊಬೈಲ್ ಆಸ್ಪತ್ರೆ ಆರಂಭಿಸಲಾಗುವುದು : ಸಿಎಂ

ರಾಜ್ಯದ ನಾಲ್ಕು ಜಿಲ್ಲೆಗಳಲ್ಲಿ ಗಾಲಿಯ ಮೇಲೆ ಆಸ್ಪತ್ರೆ ಎಂಬ ಪರಿಕಲ್ಪನೆಯಡಿ ಸಂಚಾರಿ ಆಸ್ಪತ್ರೆಯನ್ನು ಪ್ರಾಯೋಗಿಕವಾಗಿ ಪ್ರಾರಂಭಿಸಲಿದ್ದು, ಯಶಸ್ವಿಯಾದರೆ ಎಲ್ಲಾ ಜಿಲ್ಲೆಗಳಿಗೂ ವಿಸ್ತರಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ರೋಟರಿ ಬೆಂಗಳೂರು ಹೈಗ್ರೌಂಡ್ಸ್, ಇನೋಸಿಸ್ ಪ್ರತಿಷ್ಠಾನ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ವಿಧಾನಸೌಧದ ಮುಂಭಾಗ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಸಂಚಾರಿ ಪ್ರಯೋಗಾಲಯವನ್ನು ಉದ್ಘಾಟಿಸಿ ಮಾತನಾಡಿದ ಅವರು, ಬಜೆಟ್‍ನಲ್ಲಿ ಘೋಷಣೆ ಮಾಡಿರುವಂತೆ ನಾಲ್ಕು ಜಿಲ್ಲೆಗಳಲ್ಲಿ ಮೊಬೈಲ್ ಆಸ್ಪತ್ರೆಯನ್ನು ಆರಂಭಿಸಲಾಗುವುದು.
ಯಶಸ್ವಿಯಾದರೆ ಇನೋಸಿಸ್ ಮತ್ತಿತರ ಸಂಸ್ಥೆಗಳ ಸಹಕಾರದೊಂದಿಗೆ ಇತರೆ ಜಿಲ್ಲೆಗೂ ಈ ಸೌಲಭ್ಯ ವಿಸ್ತರಿಸುವ ಉದ್ದೇಶವಿದೆ ಎಂದರು.
ಗ್ರಾಮೀಣ ಭಾಗದಲ್ಲಿ ಜನರಿಗೆ ಪ್ರಯೋಗಾಲಯದ ಸೇವೆ ಒದಗಿಸುವ ಉದ್ದೇಶದಿಂದ ಸಂಚಾರಿ ಆಸ್ಪತ್ರೆಯನ್ನು ಇನೋಸಿಸ್ ಮತ್ತು ರೋಟರಿ ಸಂಸ್ಥೆಗಳು ದೇಣಿಗೆಯಾಗಿ ನೀಡಿವೆ.
ಸುಸಜ್ಜಿತವಾದ ಆಸ್ಪತ್ರೆ ಮಾದರಿಯ ಪ್ರಯೋಗಾಲಯ ಇದಾಗಿದ್ದು, ರಕ್ತ, ಆರ್‍ಎನ್‍ಎ ಸೇರಿದಂತೆ ಎಲ್ಲಾ ಪರೀಕ್ಷೆಗಳನ್ನು ಮಾಡಬಹುದಾಗಿದೆ.
ಕೋವಿಡ್ ಸಂದರ್ಭದಲ್ಲಿ ಮೈಸೂರು, ಹುಬ್ಬಳ್ಳಿ, ಧಾರವಾಡ, ಕಲಬುರಗಿ, ಮಂಗಳೂರು ಮಹಾನಗರ ವ್ಯಾಪ್ತಿಯಲ್ಲಿ ಆರೋಗ್ಯ ಇಲಾಖೆ ವತಿಯಿಂದ ಸಂಚಾರಿ ಪ್ರಯೋಗಾಲಯವನ್ನು ಪ್ರಾರಂಭಿಸಲಾಗಿತ್ತು ಎಂದು ಹೇಳಿದರು.
ಇನೋಸಿಸ್ ಪ್ರತಿಷ್ಠಾನವು ಪರಿಸರ, ಶಿಕ್ಷಣ, ಆರೋಗ್ಯ ಕ್ಷೇತ್ರಕ್ಕೆ ದೊಡ್ಡ ಕೊಡುಗೆ ನೀಡಿದೆ. ಜಯದೇವ ಆಸ್ಪತ್ರೆಯಲ್ಲಿ 500 ಹಾಸಿಗೆ ಸಾಮಥ್ರ್ಯದ ಆಸ್ಪತ್ರೆ ನಿರ್ಮಿಸಿದೆ.
ಕಿದ್ವಾಯಿ ಆಸ್ಪತ್ರೆಯಲ್ಲಿ ಧರ್ಮಛತ್ರ ನಿರ್ಮಿಸಿಕೊಟ್ಟಿದೆ ಎಂದು ಸಿಎಂ ಮೆಚ್ಚುಗೆ ವ್ಯಕ್ತಪಡಿಸಿದರು.ಗ್ರಾಮೀಣ ಭಾಗದಲ್ಲಿ ಲ್ಯಾಬ್‍ಗಳ ಕೊರತೆ ಇದ್ದು, ಎಲ್ಲೆಲ್ಲಿ ಕೊರತೆ ಇದೆಯೋ ಅಂತಹ ಕಡೆ ಸರ್ಕಾರ ಮೊಬೈಲ್ ಲ್ಯಾಬ್‍ಗಳನ್ನು ಸದ್ಬಳಕೆ ಮಾಡಿಕೊಳ್ಳಲಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಅನಿಲ್‍ಕುಮಾರ್, ಜಯದೇವ ಆಸ್ಪತ್ರೆಯ ನಿರ್ದೇಶಕ ಡಾ.ಮಂಜುನಾಥ್ ಮತ್ತಿತರರು ಉಪಸ್ಥಿತರಿದ್ದರು.