31 ವರ್ಷ ಜೈಲು ಶಿಕ್ಷೆ ಬಳಿಕ ರಾಜೀವ್ ಗಾಂಧಿ ಹತ್ಯೆ ಆರೋಪಿ ಪೆರಾರಿವಾಲನ್ ಬಿಡುಗಡೆಗೊಳಿಸಿದ ಸುಪ್ರೀಂಕೊರ್ಟ್

ನವದೆಹಲಿ: ಬರೋಬ್ಬರಿ 31 ವರ್ಷಗಳ ಜೈಲು ಶಿಕ್ಷೆಯ ಬಳಿಕ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹತ್ಯೆ ಆರೋಪಿ ಪೆರಾರಿವಾಲನ್‌ನನ್ನು ಬಿಡುಗಡೆ ಮಾಡಿ ಸುಪ್ರೀಂಕೋರ್ಟ್ ಬುಧವಾರ (ಮೇ.18) ಆದೇಶ ಹೊರಡಿಸಿದೆ.ತಮಿಳುನಾಡು ಸರ್ಕಾರದ ಮನವಿ ಮೇರೆಗೆ ಆರೋಪಿ ಪೆರಾರಿವಾಲನ್‌ನನ್ನು ಸುಪ್ರೀಂಕೋರ್ಟ್ ಬಿಡುಗಡೆ ಮಾಡಿದೆ. ಇಂದು ಬಂದಿರುವ ತೀರ್ಪು ನಳಿನಿ ಶ್ರೀಹರನ್ ಮತ್ತು ಆಕೆಯ ಪತಿ ಶ್ರೀಲಂಕಾ ಪ್ರಜೆ ಮುರುಗನ್ ಸೇರಿದಂತೆ ಪ್ರಕರಣದ ಇತರೆ ಆರು ಅಪರಾಧಿಗಳ ಬಿಡುಗಡೆಗೆ ದಾರಿ ಮಾಡಿಕೊಡುವ ಸಾಧ್ಯತೆ ಇದೆ.30 ವರ್ಷಕ್ಕೂ ಹೆಚ್ಚು ಕಾಲ ಸೆರೆವಾಸ ಅನುಭವಿಸಿದ್ದನ್ನು ಗಮನದಲ್ಲಿಟ್ಟುಕೊಂಡು ಮಾರ್ಚ್ 9ರಂದೇ ಪೆರಾರಿವಾಲನ್‌ಗೆ ಉನ್ನತ ನ್ಯಾಯಾಲಯ ಜಾಮೀನು ನೀಡಿದೆ. ಇದಲ್ಲದೆ, ಪೆರೋಲ್ ಮೇಲೆ ಹಲವು ಬಾರಿ ಹೊರಗಡೆ ಹೋಗಿದ್ದ ಆರೋಪಿ ಪೆರಾರಿವಾಲನ್ ವಿರುದ್ಧ ಒಂದೇ ಒಂದು ದೂರು ಸಹ ದಾಖಲಾಗಿರುವ ಇತಿಹಾಸವಿಲ್ಲ.ರಾಜೀವ್ ಗಾಂಧಿ ಹತ್ಯೆಯಾದ ಸಂದರ್ಭದಲ್ಲಿ ಆರೋಪಿ ಪೆರಾರಿವಾಲನ್‌ಗೆ 19 ವರ್ಷ ವಯಸ್ಸಾಗಿತ್ತು. ಹತ್ಯೆ ಹಿಂದಿನ ಮಾಸ್ಟರ್ ಮೈಂಡ್ ಹಾಗೂ ಲಿಬರೇಷನ್ ಟೈಗರ್ಸ್ ಆಫ್ ತಮಿಳು ಏಳಂ (ಎಲ್‌ಟಿಟಿಇ)ನ ನಾಯಕ ಶಿವರಾಸನ್‌ಗೆ 9 ವೋಲ್ಡ್‌ನ ಎರಡು ಬ್ಯಾಟರಿ ಖರೀದಿಸಿ ತಂದ ಆರೋಪ ಪೆರಾರಿವಾಲನ್ ಮೇಲಿದೆ. ಈ ಎರಡು ಬ್ಯಾಟರಿಗಳನ್ನು 1991ರಲ್ಲಿ ನಡೆದ ರಾಜೀವ್ ಗಾಂಧಿ ಹತ್ಯೆಗೆ ಬಳಸಿಕೊಳ್ಳಲಾಯಿತು.