300 ನಾಯಿಗಳಿಗೆ ಆಶ್ರಯ ನೀಡಿದ್ದ 80 ವೃದ್ಧೆಯನ್ನು ಮನೆಯಿಂದ ಹೊರಹಾಕಿದ ಪಾಲಿಕೆ!

ದೆಹಲಿಯಲ್ಲಿ ದೇಹ ಕೊರೆಯುವಷ್ಟು ಚಳಿ ಇದೆ. ಮುಂದಿನ 5 ದಿನ ಶೀತ ಅಲೆ ಇರಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಇಂತಹ ಪರಿಸ್ಥಿತಿಯಲ್ಲಿ ಮಹಾನಗರ ಪಾಲಿಕೆ ಅಮಾನವೀಯವಾಗಿ ನಡೆದುಕೊಂಡಿದೆ.
80 ವರ್ಷದ ವೃದ್ಧೆ ವಾಸವಿದ್ದ ಮನೆಯನ್ನು ಅಕ್ರಮ ಎಂದು ಹೇಳಿ ನಾಶಪಡಿಸಿದೆ. ಹಿರಿಜೀವ ಈಗ ಬೀದಿಗೆ ಬಿದ್ದಿದ್ದು, ಚಳಿಗೆ ಮೈಯೊಡ್ಡಿ ಬದುಕಬೇಕಿದೆ.
ದೆಹಲಿ ಮಹಾಪಾಲಿಕೆಯ ಸಿಬ್ಬಂದಿ, ಶ್ವಾನಪ್ರೇಮಿ ಪ್ರತಿಮಾದೇವಿ ಎಂಬ ಹಿರಿಜೀವದ ಮನೆಯನ್ನು ಒಡೆದು ಹಾಕಿ, ಸಾಮಾನು ಸರಂಜಾಮುಗಳನ್ನು ಅಲ್ಲಿಂದ ತೆಗೆದುಹಾಕಿದ್ದಾರೆ. ಇದರಿಂದ ವೃದ್ಧೆ ಈಗ ನಿರಾಶ್ರಿತರಾಗಿದ್ದಾರೆ.
ಮರದ ಕೆಳಗೆ ಆಕೆ ಬದುಕು ಸವೆಯುವಂತಾಗಿದೆ. ನಾಯಿಗಳ ಮೇಲೆ ಅಪಾರ ಪ್ರೀತಿ ಹೊಂದಿರುವ ವೃದ್ಧೆ 38 ವರ್ಷಗಳಿಂದ ಅವುಗಳ ಆರೈಕೆ ಮಾಡುತ್ತಿದ್ದಾರೆ. 300 ಬೀದಿನಾಯಿಗಳನ್ನು ತಾನು ನಿರ್ಮಿಸಿದ ಚಿಕ್ಕ ಗುಡಿಸಲಿನಲ್ಲಿ ಸಾಕುತ್ತಿದ್ದರು.
ಪಾಲಿಕೆ ಸಿಬ್ಬಂದಿ ಆ ಶೆಲ್ಟರ್ ನೆಲಸಮ ಮಾಡಿದ್ದಾರೆ.ನಾಯಿಗಳು ಕೂಡ ಚಳಿಗೆ ನಡುಗುತ್ತಿವೆ.ಪಾಲಿಕೆಯವರು ನನ್ನ ಚಿಕ್ಕ ಗುಡಿಸಲನ್ನು ಅಕ್ರಮ ಎಂದು ಆರೋಪಿಸಿ ನೆಲಕ್ಕುರುಳಿಸಿದ್ದಾರೆ.
ಇದರಿಂದ ನಾನು ರಸ್ತೆ ಪಕ್ಕದ ಮರದಡಿ ಜೀವನ ನಡೆಸುವಂತಾಗಿದೆ.300 ಬೀದಿನಾಯಿಗಳನ್ನು ಸಾಕಿದ್ದೇನೆ. ಈಗ ಅವುಗಳೂ ಕೂಡ ಆಶ್ರಯ ಕಳೆದುಕೊಂಡಿವೆ. ಪ್ರಾಣಿಗಳ ಬಗ್ಗೆ ನಾನು ಚಿಂತಿತನಾಗಿದ್ದೇನೆ ಎಂದು ವೃದ್ಧ ಜೀವ ಹೇಳಿಕೊಂಡಿದೆ.