
ತಮಿಳುನಾಡಿನ ಶಿವಗಂಗೆ ಜಿಲ್ಲೆಯ ಕಚನಾಥಂ ಗ್ರಾಮದಲ್ಲಿ ೨೦೧೮ರಲ್ಲಿ ನಡೆದಿದ್ದ ಮೂವರು ದಲಿತರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ತಡೆಗಟ್ಟುವಿಕೆ ಕಾಯಿದೆ) ವಿಶೇಷ ನ್ಯಾಯಾಲಯ ೨೭ ಜನರಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ.
ವಿಶೇಷ ನ್ಯಾಯಾಲಯ ಆಗಸ್ಟ್ ೧ ರಂದು ಎಲ್ಲಾ ೨೭ ಆರೋಪಿಗಳನ್ನು ತಪ್ಪಿತಸ್ಥರೆಂದು ಘೋಷಿಸಿತ್ತು. ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಜಿ ಮುತ್ತುಕುಮಾರನ್ ಅವರು ಎಲ್ಲಾ ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿತ್ತು.
೨೦೧೮ ರ ಮೇ ೨೮ ರಾತ್ರಿ ಶಿವಗಂಗೈ ಜಿಲ್ಲೆಯ ತಿರುಪ್ಪಚೆಟ್ಟಿ ಬಳಿಯ ಕಚನಂತಂ ಗ್ರಾಮದ ಪರಿಶಿಷ್ಟ ಜಾತಿಗೆ ಸೇರಿದ ಮೂವರು ಪುರುಷರಾದ ಅರುಮುಗಂ (೬೫), ಷಣ್ಮುಗನಾಥನ್ (೩೧) ಮತ್ತು ಚಂದ್ರಶೇಖರ್ (೩೪) ಅವರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿತ್ತು.
ದೇವಸ್ಥಾನದ ಉತ್ಸವದಲ್ಲಿ ಹರಕೆ ತೀರಿಸುವ ವಿಚಾರದಲ್ಲಿ ನಡೆದ ವೈಷಮ್ಯದಲ್ಲಿ ಹತ್ಯೆ ಮಾಡಲಾಗಿತ್ತು. ದಾಳಿಯಲ್ಲಿ ಇನ್ನೂ ಐವರು ದಲಿತರಿಗೆ ಗಾಯಗಳಾಗಿದ್ದವು, ಗಾಯಾಳುಗಳ ಪೈಕಿ ಠಾಣಶೇಖರನ್ (೩೨) ಘಟನೆ ನಡೆದು ಒಂದೂವರೆ ವರ್ಷದ ಬಳಿಕ ಮೃತಪಟ್ಟಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರಂಗಾಡು ಗ್ರಾಮದ ಸುಮನ್, ಅರುಣಕುಮಾರ್, ಚಂದ್ರಕುಮಾರ್, ಅಗ್ನಿರಾಜ್, ರಾಜೇಶ್ ಸೇರಿದಂತೆ ೩೩ ಜನರ ವಿರುದ್ಧ ಪೊಲೀಸರು ದೋಷಾರೋಪ ಪಟ್ಟಿ ಸಲ್ಲಿಸಿದ್ದರು.
ನಾಲ್ವರು ಆರೋಪಿಗಳು ಅಪ್ರಾಪ್ತರಾಗಿದ್ದರೆ ಅವರಲ್ಲಿ ಇಬ್ಬರು ವಿಚಾರಣೆಯ ಸಮಯದಲ್ಲಿ ಸಾವನ್ನಪ್ಪಿದ್ದಾರೆ ಮತ್ತು ಒಬ್ಬರು ತಲೆಮರೆಸಿಕೊಂಡಿದ್ದಾರೆ.ನ್ಯಾಯಾಲಯದ ಆದೇಶದ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತಾ ಕ್ರಮವಾಗಿ ನ್ಯಾಯಾಲಯದ ಆವರಣದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.