
ವಿಶ್ವ ಪ್ರತಿಷ್ಠಿತ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಕ್ರಿಕೆಟ್ ಸೇರ್ಪಡೆ ಮಾಡುವ ಕೂಗು ಮತ್ತೊಮ್ಮೆ ಎದ್ದಿದೆ.ಕಳೆದ ರಿಯೋ ಒಲಿಂಪಿಕ್ಸ್‍ನಲ್ಲೇ ಕ್ರಿಕೆಟ್ ಅನ್ನು ಸೇರ್ಪಡೆ ಮಾಡಲಾಗುತ್ತದೆ ಎಂದು ಅಂದಾಜಿಸಲಾಗಿತ್ತಾದರೂ ಈಗ 2028ರಲ್ಲಿ ಲಾಸ್ ಏಂಜಲೀಸ್‍ನಲ್ಲಿ ನಡೆಯಲಿರುವ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಕ್ರಿಕೆಟ್ ಅಧಿಕೃತವಾಗಿ ಸೇರ್ಪಡೆಯಾಗಲಿದೆ ಎಂದು ಐಸಿಸಿ ಅಧ್ಯಕ್ಷ ಗ್ರೆಗ್ ಬ್ಲಾರ್ಕೆ ಅವರು ತಿಳಿಸಿದ್ದಾರೆ.
ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಈ ಹಿಂದೆ ಕ್ರಿಕೆಟ್ ಆಟವೂ ಒಂದು ಭಾಗವಾಗಿತ್ತಾದರೂ ನಂತರ ಹೆಚ್ಚು ಸಮಯ ಬೇಕಾಗಿರುವುದರಿಂದ ಅದನ್ನು ಕೈಬಿಡಲಾಗಿತ್ತು. ಒಲಿಂಪಿಕ್ಸ್‍ನಲ್ಲಿ ಕ್ರಿಕೆಟ್ ಅನ್ನು ಸೇರ್ಪಡೆ ಮಾಡುವ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಬ್ಲಾರ್ಕೆ, ನಾವು ಈಗಾಗಲೇ ಒಂದು ಸುತ್ತಿನ ಮಾತುಕತೆ ನಡೆಸಿದ್ದು ಒಲಿಂಪಿಕ್ಸ್‍ನಲ್ಲಿ ಕ್ರಿಕೆಟ್ ಸೇರ್ಪಡೆಯಾದರೆ ಅದನ್ನು ಯಾವ ಮಾದರಿಯಲ್ಲಿ ಆಡಿಸಬೇಕೆಂಬುದರ ರೂಪುರೇಷೆಗಳನ್ನು ರಚಿಸುವುದು ಮುಖ್ಯವಾಗಿದೆ.
2028ರಲ್ಲಿ ಲಾಸ್ ಏಂಜಲೀಸ್‍ನಲ್ಲಿ ನಡೆಯಲಿರುವ ಒಲಿಂಪಿಕ್ಸ್‍ನಲ್ಲಿ ಆರ್ಚರಿ, ಅಥ್ಲೇಟಿಕ್ಸ್, ಬ್ಯಾಡ್ಮಿಂಟನ್, ಬ್ಯಾಸ್ಕೆಟ್‍ಬಾಲ್ ಸೇರಿದಂತೆ 28 ಗ್ಲೋಬಲ್ ಮಟ್ಟದ ಆಟಗಳು ಸೇರ್ಪಡೆಯಾಗಿದೆ, ಒಂದು ವೇಳೆ ಒಲಿಂಪಿಕ್ಸ್‍ನಲ್ಲಿ ಕ್ರಿಕೆಟ್ ಸೇರ್ಪಡೆಯಾಗಬೇಕಾದರೆ ಅದು ಕೂಡ ವಿಶ್ವಮಟ್ಟದಲ್ಲಿ ಪ್ರಚುಲತಕ್ಕೆ ಬರಬೇಕು ಅದಕ್ಕಾಗಿ ಅನೇಕ ಕ್ರಮಗಳನ್ನು ಐಸಿಸಿ ಕಮಿಟಿಯು ತೆಗೆದುಕೊಳ್ಳಲು ಸಿದ್ಧತೆ ನಡೆಸುತ್ತಿದೆ.
ಅಮೇರಿಕಾದಲ್ಲೂ ಕೂಡ ಕ್ರಿಕೆಟ್ ಅನ್ನು ಪ್ರಚುರಪಡಿಸುವ ಸಲುವಾಗಿ 2024 ಚುಟುಕು ವಿಶ್ವಕಪ್ ಅನ್ನು ನಡೆಸಲು ಚಿಂತಿಸುತ್ತಿವೆ. ಆಸ್ಟ್ರೇಲಿಯಾ, ವೆಸ್ಟ್‍ಇಂಡೀಸ್ ನಡುವಿನ ಸರಣಿ ಅಲ್ಲದೆ, ಬರುವ ಆಗಸ್ಟ್‍ನಲ್ಲಿ ಭಾರತ ಹಾಗೂ ವೆಸ್ಟ್‍ಇಂಡೀಸ್ ನಡುವೆ ಟ್ವೆಂಟಿ-20 ಸರಣಿಯನ್ನು ನಡೆಸಲು ಐಸಿಸಿ ಚಿಂತಿಸಿದೆ.
ಐಸಿಸಿಯು ಟ್ವೆಂಟಿ-20 ಮಾದರಿ ಕ್ರಿಕೆಟ್‍ಗೆ ಹೆಚ್ಚು ಒತ್ತು ಕೊಡುತ್ತಿರುವುದರಿಂದ ಒಂದು ವೇಳೆ ಒಲಿಂಪಿಕ್ಸ್‍ನಲ್ಲಿ ಕ್ರಿಕೆಟ್ ಸೇರ್ಪಡೆ ಆದರೆ ಐಪಿಎಲ್‍ನಂತೆ ಟ್ವೆಂಟಿ-20 ಮಾದರಿಯ ಕ್ರಿಕೆಟ್ ನಡೆಯಬಹುದು ಎಂದು ಅಭಿಮಾನಿಗಳು ಲೆಕ್ಕಾಚಾರ ಹಾಕತೊಡಗಿದ್ದಾರೆ.