200 ಭ್ರಷ್ಟ ರಾಜಕಾರಣಿಗಳಿಗೆ ಸಿಬಿಐ ಡ್ರಿಲ್

ಕಳೆದ ೧೮ ವರ್ಷಗಳ ಅವಧಿಯಲ್ಲಿ ಯುಪಿಎ ಮತ್ತು ಎನ್‌ಡಿಎ ಸರ್ಕಾರದ ಆಡಳಿತಾವಧಿಯಲ್ಲಿ ೨೦೦ ಪ್ರಮುಖ ರಾಜಕಾರಣಿಗಳು ಕೇಂದ್ರೀಯ ತನಿಖಾ ದಳ (ಸಿಬಿಐ) ಗಾಳಕ್ಕೆ ಸಿಕ್ಕಿ ಬಂಧನಕ್ಕೊಳಗಾಗಿ ವಿಚಾರಣೆ ಎದುರಿಸಿದ್ದಾರೆ.ಯುಪಿಎ ಆಡಳಿತದಲ್ಲಿ ಶೇ.
೬೦ ರಷ್ಟು ಹಾಗೂ ಬಿಜೆಪಿ ನೇತೃತ್ವದ ಎನ್‌ಡಿಎ ಆಡಳಿತದಲ್ಲಿ ಶೇ. ೯೫ ರಷ್ಟು ನಾಯಕರು ಸಿಬಿಐ ತನಿಖೆ ಎದುರಿಸಿದ್ದಾರೆ.ಈ ಪೈಕಿ ಶೇ. ೮೦ರಷ್ಟು ನಾಯಕರು ವಿರೋಧ ಪಕ್ಷದವರಾಗಿದ್ದಾರೆ.
ಈ ರಾಜಕೀಯ ನಾಯಕರನ್ನು ಸಿಬಿಐ ತನಿಖೆಗೆ ಒಪ್ಪಿಸಿರುವ ಪ್ರಕರಣಗಳ ಸಂಖ್ಯೆ ಕೇಂದ್ರದಲ್ಲಿ ಎನ್‌ಡಿಎ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಿದೆ.ಸಿಬಿಐ ತನಿಖೆಯ ನ್ಯಾಯಾಲಯದ ಮಾಹಿತಿ, ಅಧಿಕೃತ ದಾಖಲೆಗಳನ್ನು ಸಂಗ್ರಹಿಸಿ ಹಾಗೂ ತನಿಖಾ ಸಂಸ್ಥೆಯ ವರದಿಗಳನ್ನಾಧರಿಸಿ ಈ ಅಂಕಿ-ಅಂಶ ಬಿಡುಗಡೆ ಮಾಡಲಾಗಿದೆ.ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದಲ್ಲಿ ಕನಿಷ್ಢ ೭೨ ಮಂದಿ ನಾಯಕರನ್ನು ಸಿಬಿಐ ತನಿಖೆಗೆ ಒಳಪಡಿಸಲಾಗಿದೆ.
ಈ ಪೈಕಿ ೪೩ ಮಂದಿ ವಿರೋಧ ಪಕ್ಷಕ್ಕೆ ಸೇರಿದವರಾಗಿದ್ದಾರೆ. ಅದೇ ರೀತಿ ಎನ್‌ಡಿಎ ಸರ್ಕಾರದ ಅವಧಿಯಲ್ಲಿ ೧೨೪ ಮಂದಿ ಪ್ರಮುಖ ನಾಯಕರನ್ನು ಸಿಬಿಐ ತನಿಖೆಗೆ ಒಳಪಡಿಸಿದ್ದು, ಈ ಪೈಕಿ ೧೧೮ ಮಂದಿ ಪ್ರತಿಪಕ್ಷದವರಾಗಿದ್ದಾರೆ. ಎನ್‌ಡಿಎ ಅವಧಿಯಲ್ಲಿ ಈ ಪ್ರಕರಣಗಳ ಸಂಖ್ಯೆ ಶೇ.
೯೫ ರಷ್ಟಾಗಿದೆ.ಯುಪಿಎ ಅವಧಿಯಲ್ಲಿ ೭೨, ಎನ್‌ಡಿಎ ಆಡಳಿತದಲ್ಲಿ ೧೨೪ ನಾಯಕರ ಪಟ್ಟಿಯನ್ನು ಖಾಸಗಿ ಮಾಧ್ಯಮವೊಂದು ಬಿಡುಗಡೆ ಮಾಡಿದ್ದು, ಇವರೆಲ್ಲರೂ ರಾಜಕೀಯ ಪಕ್ಷಕ್ಕೆ ಸೇರಿದವರಾಗಿದ್ದಾರೆ.
ಇವರೆಲ್ಲರ ವಿರುದ್ಧವೂ ಕ್ರಮ ಕೈಗೊಳ್ಳಲಾಗಿದೆ.ಯುಪಿಎ ಅಧಿಕಾರಾವಧಿಯಲ್ಲಿ ೨-ಜಿ ಸ್ಪೆಕ್ಟ್ರಂ, ಕಾಮನ್‌ವೆಲ್ತ್ ಗೇಮ್ ಮತ್ತು ಕಲ್ಲಿದ್ದಲು ಹಗರಣದಲ್ಲಿ ೭೨ ಪ್ರಮುಖ ನಾಯಕರನ್ನು ಸಿಬಿಐ ವಿಚಾರೆಣೆಗೆ ಗುರಿಪಡಿಸಿದೆ.ಯುಪಿಎ ಅವಧಿಯಲ್ಲಿ ಗುಜರಾತ್‌ನಲ್ಲಿ ಗೃಹ ಸಚಿವರಾಗಿದ್ದ ಅಮಿತ್ ಶಾ, ಸೋರಾಬುದ್ದೀನ್ ಶೇಖ್ ಎನ್‌ಕೌಂಟರ್ ಪ್ರಕರಣದಲ್ಲಿ ಬಂಧಿಸಲಾಗಿತ್ತು.
ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ, ಬಳ್ಳಾರಿಯ ಗಣಿ ದೊರೆ ಗಾಲಿ ಜನಾರ್ಧನ ರೆಡ್ಡಿ, ರಕ್ಷಣಾ ಸಚಿವರಾಗಿದ್ದ ಜಾರ್ಜ್ ಫರ್ನಾಂಡೀಸ್, ಬಿಜೆಪಿ ನಾಯಕ ಪ್ರಮೋದ್ ಮಹಾಜನ್ ನಿಧನದ ನಂತರವೂ ಅವರ ವಿರುದ್ಧ ತನಿಖೆ ನಡೆಸಲಾಗಿತ್ತು.೨೦೧೪ ರಿಂದ ಎನ್‌ಡಿಎ ಅಧಿಕಾರಾವಧಿಯಲ್ಲಿ ಟಿಎಂಸಿಯ ೩೦, ಕಾಂಗ್ರೆಸ್‌ನ ೨೬ ಮಂದಿಯನ್ನು ಸಿಬಿಐ ವಿಚಾರಣೆ ನಡೆಸಿದೆ.
ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾಗಾಂಧಿ, ರಾಜಸ್ತಾನ ಮುಖ್ಯಮಂತ್ರಿ ಅಶೋಕ್ ಗೆಲ್ಹೋಟ್, ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಕಮಲ್‌ನಾಥ್, ಪಂಜಾಬ್ ಮಾಜಿ ಮುಖ್ಯಮಂತ್ರಿ ಕ್ಯಾಪ್ಟನ್ ಅಮರೀಂದರ್‌ಸಿಂಗ್ ತನಿಖೆಗೊಳಪಟ್ಟ ಪ್ರಮುಖ ನಾಯಕರಾಗಿದ್ದಾರೆ.