
೨೦೦ ಫೈವ್ ಸ್ಟಾರ್ ಹೋಟೆಲ್‌ಗಳ ರೂಂ, ಆಹಾರದ ಬಿಲ್ ಪಾವತಿಸದೆ ವಂಚಿಸಿ ಪರಾರಿಯಾಗುತ್ತಿದ್ದವನನ್ನು ಕೇರಳದ ಕೊಲ್ಲಂ ಪೊಲೀಸರು ಬಂಧಿಸಿದ್ದಾರೆ.
ತಮಿಳುನಾಡಿನ ವಿನ್ಸೆಂಟ್ ಜಾನ್(63) ಬಂಧಿತ. ಐಷಾರಾಮಿ ಪಂಚತಾರಾ ಹೋಟೆಲ್‌ಗಳಲ್ಲಿ ತಂಗುತ್ತಿದ್ದ ಬಿಲ್ ಪಾವತಿಸುತ್ತಿರಲಿಲ್ಲ. ಹೋಟೆಲ್‌ವೊಂದರಲ್ಲಿ ಲ್ಯಾಪ್‌ಟಾಪ್ ಕಳ್ಳತನ ಮಾಡಿ ಪರಾರಿಯಾಗಿದ್ದ.
ಈತನ ವಿರುದ್ಧ ಕೊಲ್ಲಂನ ಹೋಟೆಲ್ ದೂರು ದಾಖಲಿಸಿತ್ತು.ಚೆನ್ನಗಿ ಇಂಗ್ಲಿಷ್‌ನಲ್ಲಿ ಮಾತನಾಡುತ್ತಿದ್ದ ಈತ ಮುಂಗಡ ಪಾವತಿಸದೆ ಕೋಣೆ ಪಡೆಯುತ್ತಿದ್ದ. ದುಬಾರಿ ಮದ್ಯ, ಆಹಾರಗಳನ್ನು ಆರ್ಡರ್ ಮಾಡಿ ತರಿಸಿಕೊಂಡಿದ್ದ.
ಕಾರ್ಯಕ್ರಮದ ನೆಪ ಹೇಳಿ ಹೊಟೇಲ್‌ನಿಂದಲೇ ಲ್ಯಾಪ್‌ಟಾಪ್ ಎರವಲು ಪಡೆದುಕೊಂಡು ಪರಾರಿಯಾಗಿದ್ದ. ಕೆಲವು ಗಂಟೆಗಳ ಬಳಿಕ ತಾವು ಮೋಸ ಹೋಗಿರುವುದು ಹೋಟೆಲ್ ಸಿಬ್ಬಂದಿಗೆ ತಿಳಿದು ದೂರು ದಾಖಲಿಸಿದ್ದಾರೆ.
ಮೊಬೈಲ್ ಸಿಗ್ನಲ್ ಜಾಡು ಹಿಡಿದ ಪೊಲೀಸರು ಕೊಲ್ಲಂ ರೈಲ್ವೆ ನಿಲ್ದಾಣದಲ್ಲಿ ಆತನನ್ನು ಬಂಧಿಸಿದ್ದಾರೆ. 2019ರಲ್ಲಿಯೂ ಮತ್ತೊಂದು ಹೋಟೆಲ್‌ಗೆ ವಂಚಿಸಿದ್ದ ಎಂದು ಪೊಲೀಸರು ಹೇಳಿದ್ದಾರೆ. ಈತನ ವಿರುದ್ಧ ದೇಶದಾದ್ಯಂತ ಇದೇ ರೀತಿ 200ಕ್ಕೂ ಅಧಿಕ ವಂಚನೆ ಪ್ರಕರಣಗಳಿವೆ.
ಪಂಚತಾರಾ ಹೋಟೆಲ್‌ಗಳು ಬೆಟ್ಟಿಂಗ್ ಸಿಂಡಿಕೇಟ್‌ಗಳು ಸೇರಿದಂತೆ ಗರಿಷ್ಠ ಅನೈತಿಕ ಕಾರ್ಯಾಚರಣೆಗಳು ನಡೆಯುವ ಸ್ಥಳಗಳಾಗಿವೆ. ಅವರಿಗೆ ಪಾಠ ಕಲಿಸಲು ತಾನು ಹೀಗೆ ಮಾಡುತ್ತಿರುವೆ ಎಂದು ಆರೋಪಿ ಹೇಳಿದ್ದಾನೆ.