ರಾಷ್ಟ್ರಿಯ

20 ರೂಪಾಯಿಗಾಗಿ ಕಾನೂನು ಹೋರಾಟ: 22 ವರ್ಷಗಳ ಬಳಿಕ ರೈಲ್ವೆ ಇಲಾಖೆ ವಿರುದ್ಧ ಗೆದ್ದ ವ್ಯಕ್ತಿ

ಆಗ್ರಾ: 1999ರಲ್ಲಿ 20 ರೂಪಾಯಿ ಹೆಚ್ಚು ಶುಲ್ಕ ವಸೂಲಿ ಮಾಡಿದ್ದಕ್ಕೆ ಭಾರತೀಯ ರೈಲ್ವೆ ವಿರುದ್ಧ 22 ವರ್ಷಗಳ ಸುದೀರ್ಘ ಕಾನೂನು ಹೋರಾಟ ನಡೆಸಿದ್ದ ಮಥುರಾ ಮೂಲದ ವ್ಯಕ್ತಿಯೊಬ್ಬರು ಕೊನೆಗೂ ಗೆಲುವಿನ ನಗೆ ಬೀರಿದ್ದಾರೆ.

ರೈಲ್ವೆ ಇಲಾಖೆಯು ಮಥುರಾದ 66 ವರ್ಷದ ತುಂಗನಾಥ್ ಚತುರ್ವೇದಿ ಅವರಿಗೆ ವರ್ಷಕ್ಕೆ ಶೇ 12ರ ಬಡ್ಡಿದರದಲ್ಲಿ ಹಣ ಪಾವತಿ ಮಾಡಬೇಕಾಗಿದೆ. ಬಾಕಿ ಮೊತ್ತವನ್ನು ಮುಂದಿನ 30 ದಿನಗಳಲ್ಲಿ ಅದು ಪಾವತಿ ಮಾಡದೆ ಇದ್ದರೆ, ಬಡ್ಡಿದರವನ್ನು ಶೇ 15ಕ್ಕೆ ಪರಿಷ್ಕರಣೆ ಮಾಡಲಾಗುತ್ತದೆ ಎಂದು ಜಿಲ್ಲಾ ಗ್ರಾಹಕರ ವೇದಿಕೆ ಆದೇಶದಲ್ಲಿ ಸೂಚಿಸಿದೆ.

ಇದಲ್ಲದೆ, ತುಂಗನಾಥ್ ಅವರ ಹಣಕಾಸು ಮತ್ತು ಮಾನಸಿಕ ನೋವು ಹಾಗೂ ಕಾನೂನು ಹೋರಾಟದ ವೆಚ್ಚವಾಗಿ 15,000 ರೂಪಾಯಿ ಪರಿಹಾರವನ್ನು ಕೂಡ ಪಾವತಿಸುವಂತೆ ರೈಲ್ವೇಸ್‌ಗೆ ನಿರ್ದೇಶನ ನೀಡಲಾಗಿದೆ.

1999ರ ಡಿಸೆಂಬರ್ 25ರಂದು ನಡೆದ ಘಟನೆಗೆ ಸಂಬಂಧಿಸಿದಂತೆ ಈ ಪ್ರಕರಣ ದಾಖಲಾಗಿತ್ತು. “ಮೊರಾದಾಬಾದ್‌ಗೆ ಟಿಕೆಟ್ ಖರೀದಿಸಲು ನನ್ನ ಸ್ನೇಹಿತನ ಜತೆಗೆ ನಾನು ಮಥುರಾ ಕಂಟೋನ್ಮೆಂಟ್ ರೈಲ್ವೆ ನಿಲ್ದಾಣಕ್ಕೆ ತೆರಳಿದ್ದೆ.

ಟಿಕೆಟ್ ಗವಾಕ್ಷಿಯಲ್ಲಿ 100 ರೂ ನೋಟನ್ನು ನೀಡಿದ್ದೆ. ಆದರೆ ಟೆಕೆಟ್ ನೀಡುವಾತ 70 ರೂಪಾಯಿ ಬದಲು 90 ರೂಪಾಯಿ ತೆಗೆದುಕೊಂಡಿದ್ದ. ಜಾಸ್ತಿ ಹಣ ತೆಗೆದುಕೊಂಡಿದ್ದೀರಿ ಎಂದು ಕ್ಲರ್ಕ್‌ಗೆ ಹೇಳಿದ್ದರೂ, ನನ್ನ ಹಣ ವಾಪಸ್ ಸಿಕ್ಕಿರಲಿಲ್ಲ” ಎಂದು ತುಂಗನಾಥ್ ತಿಳಿಸಿದ್ದಾರೆ.

ಪ್ರಯಾಣ ಮುಗಿಸಿದ ಬಳಿಕ, ಈಶಾನ್ಯ ರೈಲ್ವೇಸ್ (ಗೋರಖ್‌ಪುರ) ಜನರಲ್ ಮ್ಯಾನೇಜರ್, ಮಥುರಾ ಕಂಟೋನ್ಮೆಂಟ್ ರೈಲ್ವೆ ನಿಲ್ದಾಣ ಮತ್ತು ಟಿಕೆಟ್ ಬುಕಿಂಗ್ ಕ್ಲರ್ಕ್ ವಿರುದ್ಧ ಜಿಲ್ಲಾ ಗ್ರಾಹಕ ವೇದಿಕೆಯಲ್ಲಿ ದೂರು ದಾಖಲಿಸಿದ್ದೆ. ಸರ್ಕಾರವನ್ನು ಕೂಡ ಪ್ರತಿವಾದಿಯನ್ನಾಗಿ ಮಾಡಿದ್ದೆ. ನಾನು 20 ರೂಪಾಯಿಗಾಗಿ ಈ ಪ್ರಕರಣದಲ್ಲಿ ಹೋರಾಟ ಮಾಡಲಿಲ್ಲ, ಆದರೆ ಸಾರ್ವಜನಿಕ ಹಿತಾಸಕ್ತಿಗಾಗಿ ಮಾಡಿದ್ದೆ” ಎಂದು ಹೇಳಿದ್ದಾರೆ.

ರಾಜಿಗೆ ಒಪ್ಪದ ಚತುರ್ವೇದಿ120ಕ್ಕೂ ಹೆಚ್ಚು ಬಾರಿ ವಿಚಾರಣೆ ಬಳಿಕ ಆಗಸ್ಟ್ 5ರಂದು ತೀರ್ಪು ಪ್ರಕಟವಾಗಿದೆ. “ತಮ್ಮ ವಿರುದ್ಧದ ದೂರುಗಳನ್ನು ವಿಶೇಷ ಅಹವಾಲು ನ್ಯಾಯಮಂಡಳಿಯಲ್ಲಿ ವಿಚಾರಣೆ ನಡೆಸಬೇಕೇ ವಿನಾ ಗ್ರಾಹಕ ನ್ಯಾಯಾಲಯದಲ್ಲಿ ಅಲ್ಲ ಎಂದು ರೈಲ್ವೆ ಇಲಾಖೆಯು ಪ್ರಕರಣವನ್ನು ವಜಾಗೊಳಿಸಲು ಪ್ರಯತ್ನಿಸಿತ್ತು.

ಆದರೆ ಗ್ರಾಹಕ ನ್ಯಾಯಾಲಯದಲ್ಲಿಯೇ ಇದರ ವಿಚಾರಣೆ ನಡೆಯಬೇಕು ಎಂದು ನಾವು 2021ರ ಸುಪ್ರೀಂಕೋರ್ಟ್ ತೀರ್ಪನ್ನು ಬಳಸಿಕೊಂಡೆವು. ಈ ಪ್ರಕರಣವನ್ನು ನ್ಯಾಯಾಲಯದ ಆಚೆ ಬಗೆಹರಿಸಿಕೊಳ್ಳಲು ರೈಲ್ವೆ ಅಧಿಕಾರಿಗಳು ನನ್ನ ತಂದೆಯನ್ನು ಸಂಪರ್ಕಿಸಿದ್ದರು. ಆದರೆ ಅವರು ಸಾರಾಸಗಟಾಗಿ ತಿರಸ್ಕರಿಸಿದ್ದರು” ಎಂದು ತುಂಗನಾಥ್ ಅವರ ಮಗ, ವಕೀಲ ರವಿಕಾಂತ್ ಚತುರ್ವೇದಿ.

ಭ್ರಷ್ಟಾಚಾರದ ವಿರುದ್ಧದ ಹೋರಾಟಕಳೆದ ಆರು ವರ್ಷಗಳಿಂದ ಸಂಧಿವಾತದಿಂದ ಬಳಲುತ್ತಿರುವ ಚತುರ್ವೇದಿ ಅವರು ತಮ್ಮ ಗೆಲುವಿಗೆ ಸಂತಸ ವ್ಯಕ್ತಪಡಿಸಿದ್ದಾರೆ. “ಇದು ಸುದೀರ್ಘ ಮತ್ತು ಹೈರಾಣಾಗಿಸಿದ ಕಾನೂನು ಹೋರಾಟ. ಸೂಕ್ತ ಪುರಾವೆ ಇದ್ದರೂ, ರೈಲ್ವೆ ಕಡೆಯಿಂದ ಉಂಟಾದ ತಪ್ಪನ್ನು ಸಾಬೀತುಪಡಿಸಲು ನಾನು 120 ವಿಚಾರಣೆಗಳಲ್ಲಿ ಹಾಜರಾಗಬೇಕಾಯಿತು.

ಪ್ರಕರಣದಿಂದ ಹಿಂದೆ ಸರಿಯುವಂತೆ ನನ್ನ ಸ್ನೇಹಿತರು ಮತ್ತು ಕುಟುಂಬದವರು ಅನೇಕ ಬಾರಿ ತಡೆಯಲು ಪ್ರಯತ್ನಿಸಿದರು. ಇದು ಸಮಯದ ವ್ಯರ್ಥ ಎಂದು ಹೇಳಿದ್ದರು. ಆದರೆ ನಾನು ಮುಂದುವರಿದೆ. ಇದು ಹಣದ ವಿಷಯವಲ್ಲ. ಇದು ಭ್ರಷ್ಟಾಚಾರದ ವಿರುದ್ಧದ ಹೋರಾಟ” ಎಂದು ಹೇಳಿದ್ದಾರೆ.

Antony Raju A

Ncibtimesmedia Web Portal Director & national executive officer Contact:9482289151 Gmail: antonyraju166@gmail.com

Related Articles

Leave a Reply

Your email address will not be published. Required fields are marked *

Back to top button