2.70 ಕೋಟಿ ಮೌಲ್ಯದ ಚರಸ್-ಎಂಡಿಎಂಎ ವಶ

– ಡಿಜಿ ಹಳ್ಳಿ ಪೊಲೀಸರು ಮೂರು ಪ್ರಕರಣಗಳನ್ನು ಭೇದಿಸಿ ನಾಲ್ವರು ಆರೋಪಿಗಳನ್ನು ಬಂಧಿಸಿ ಸುಮಾರು 2.10 ಕೋಟಿ ರೂ. ಮೌಲ್ಯದ 6 ಕೆಜಿ ಚರಸ್ ಮತ್ತು 60 ಲಕ್ಷ ಮೌಲ್ಯದ 1.1 ಕೆಜಿ ಎಂಡಿಎಂಎ ಮಾದಕ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಚಾಕಲೇಟ್ ಕವರ್‍ನಲ್ಲಿ ಚರಸ್:ಮಾದಕ ವಸ್ತು ಚರಸ್ ಅನ್ನು ಚಾಕಲೇಟ್ ಕವರ್‍ಗಳಲ್ಲಿಟ್ಟು ನಗರದ ಪ್ರತಿಷ್ಠಿತ ಶಾಲೆ ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ, ಸಾಫ್ಟ್‍ವೇರ್ ಉದ್ಯೋಗಿಗಳಿಗೆ, ಉದ್ಯಮಿಗಳಿಗೆ ಮಾರಾಟ ಮಾಡುತ್ತಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.ಡಿಜಿ ಹಳ್ಳಿಯ ಮುನಿವೀರಪ್ಪ ಬ್ಲಾಕ್ ನಿವಾಸಿ ಮೊಹಮ್ಮದ್ ಸೂಫೀಯಾನ್ ಹುಸೇನ್(26) ಬಂಧಿತ ಆರೋಪಿ.
ಈತ ನೇಪಾಳ ಮೂಲದ ಆಕಾಶ್ ಎಂಬಾತನಿಂದ ಮಾದಕ ವಸ್ತು ಚರಸ್‍ನ್ನು ಖರೀದಿಸಿಕೊಂಡು ನಗರಕ್ಕೆ ತಂದು ಮಾರಾಟ ಮಾಡುತ್ತಿದ್ದಾಗ ಶ್ಯಾಂಪುರ ಮುಖ್ಯರಸ್ತೆಯ ಆಟದ ಮೈದಾನದ ಬಳಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ.ಆರೋಪಿಯಿಂದ 1.39 ಕೋಟಿ ರೂ. ಬೆಲೆ ಬಾಳುವ 4 ಕೆಜಿ 500 ಗ್ರಾಂ ತೂಕದ ಚರಸ್ ವಶಪಡಿಸಿಕೊಂಡಿದ್ದಾರೆ.
ಮತ್ತೊಂದು ಪ್ರಕರಣದಲ್ಲಿ ಕೇರಳ ರಾಜ್ಯದಿಂದ ಮಾದಕ ವಸ್ತು, ಚರಸ್ ಖರೀದಿಸಿ ನಗರಕ್ಕೆ ತಂದು ಮಾರಾಟ ಮಾಡುತ್ತಿದ್ದ ಆರೋಪಿಯನ್ನು ಶ್ಯಾಂಪುರ ಮುಖ್ಯರಸ್ತೆಯ ರೈಲ್ವೆ ಗೇಟ್ ಬಳಿ ಡಿಜಿ ಹಳ್ಳಿ ಠಾಣೆ ಪೊಲೀಸರು ಬಂಧಿಸಿ 70 ಲಕ್ಷ ರೂ. ಬೆಲೆಬಾಳುವ 2 ಕೆಜಿ ತೂಕದ ಚರಸ್ ವಶಪಡಿಸಿಕೊಂಡಿದ್ದಾರೆ.
ಆರೋಪಿಯು ಗೋವಿಂದಪುರದ ಬರ್ಕತ್ ಎಂಬಾತನೊಂದಿಗೆ ಸೇರಿಕೊಂಡು ಚರಸ್‍ನ್ನು ಕೇರಳ ರಾಜ್ಯದಿಂದ ಖರೀದಿಸಿಕೊಂಡು ಬಂದು ತಮಗೆ ತಿಳಿದ ಗಿರಾಕಿಗಳಿಗೆ ಮತ್ತು ಸಾರ್ವಜನಿಕರಿಗೆ ಹೆಚ್ಚಿನ ಬೆಲೆಗೆ ಮಾರಾಟ ಮಾಡಿ ಸುಲಭವಾಗಿ ಹಣ ಗಳಿಸುತ್ತಿರುವುದು ವಿಚಾರಣೆಯಿಂದ ತಿಳಿದುಬಂದಿದೆ.ಎಂಡಿಎಂಎ ವಶ:ಮೋದಿ ಮುಖ್ಯರಸ್ತೆಯ ಉರ್ದು ಶಾಲೆ ಬಳಿ ಆರೋಪಿಯನ್ನು ಪೊಲೀಸರು ಬಂಧಿಸಿ 60.
60 ಲಕ್ಷ ರೂ. ಬೆಲೆಬಾಳುವ 1 ಕೆಜಿ 10 ಗ್ರಾಂ ತೂಕದ ಎಂಡಿಎಂಎ ಮಾದಕವಸ್ತುವನ್ನು ವಶಪಡಿಸಿ ಕೊಂಡಿದ್ದಾರೆ. ಆರೋಪಿಯು ಮಾದಕ ವಸ್ತುಗಳನ್ನು ಈ ಹಿಂದೆ ಡಿಜೆ ಹಳ್ಳಿ ಮತ್ತು ಹೆಣ್ಣೂರು ಪೊಲೀಸ್ ಠಾಣೆಯ ಪ್ರಕರಣದಲ್ಲಿ ಭಾಗಿಯಾಗಿರುವುದು ವಿಚಾರಣೆಯಿಂದ ಗೊತ್ತಾಗಿದೆ.
ನೈಜೀರಿಯಾ ದೇಶದ ಪ್ರಜೆ ಕೇಲ್ವಿನ್ ಜೇಮ್ಸ್ ಮುಖಾಂತರ ಮತ್ತೊಬ್ಬ ಪ್ರಜೆ ಐಗಿ ಆನ್‍ವೂಕ ಆಕ್ಪಾ ಎಂಬಾತನಿಂದ ಖರೀದಿಸಿ ತನ್ನ ಸಹಚರರೊಂದಿಗೆ ಸೇರಿಕೊಂಡು ತನಗೆ ಪರಿಚಯವಿರುವ ಗಿರಾಕಿಗಳಿಗೆ ಶಾಲೆ ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ, ಉದ್ಯೋಗಿಗಳಿಗೆ ಹೆಚ್ಚಿನ ಬೆಲೆಗೆ ಮಾರಾಟ ಮಾಡಿ ಹಣ ಗಳಿಸುತ್ತಿದ್ದನು.
ನಾಲ್ವರು ನೈಜೀರಿಯಾ ಪ್ರಜೆಗಳಾದ ಕೇಲ್ವಿನ್ ಜೇಮ್ಸ್, ಐಗಿ ಆನ್‍ವೂಕ ಆಕ್ಪಾ, ಕೈಜ್ ಮತ್ತು ತೈಫ್‍ನ ಮಾಹಿತಿ ಕಲೆ ಹಾಕಿದ್ದು, ಪತ್ತೆ ಕಾರ್ಯಾ ಕೈಗೊಳ್ಳಲಾಗಿದೆ.ಕೆಜಿಹಳ್ಳಿ ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತ ಜಗದೀಶ್ ಮಾರ್ಗದರ್ಶನದಲ್ಲಿ ಇನ್ಸ್‍ಪೆಕ್ಟರ್ ಪ್ರಕಾಶ್ ಅವರನ್ನೊಳಗೊಂಡ ಸಿಬ್ಬಂದಿ ತಂಡ ಈ ಕಾರ್ಯಾಚರಣೆಯನ್ನು ಕೈಗೊಂಡು ಆರೋಪಿಗಳನ್ನು ಬಂಧಿಸಿ ಮಾಲನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.
ಅಧಿಕಾರಿ ಮತ್ತು ಸಿಬ್ಬಂದಿಗಳ ಈ ಕಾರ್ಯವನ್ನು ಹಿರಿಯ ಅಧಿಕಾರಿಗಳು ಶ್ಲಾಘಿಸಿದ್ದಾರೆ.