
ತಮಿಳು ಧಾರಾವಾಹಿಗಳಲ್ಲಿ ಬಾಲನಟನಾಗಿ ಬಣ್ಣ ಹಚ್ಚಿದ್ದ ನಟ ಲೋಕೇಶ್ ರಾಜೇಂದ್ರನ್ ( 34 ) ಅವರು ಮಂಗಳವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ತಮಿಳು ಕಿರುತೆರೆಯಲ್ಲಿ ‘ಮರ್ಮದೇಸಂ’ ಧಾರಾವಾಹಿಯಲ್ಲಿ ರಾಸು ಎಂಬ ಪಾತ್ರವನ್ನು ಲೋಕೇಶ್ ( Lokesh Rajendran ) ನಿಭಾಯಿಸಿದ್ದರು. 1996ರ ಸಮಯದಲ್ಲಿ ಈ ಸೀರಿಯಲ್ ಎಪಿಸೋಡ್ ಪ್ರಸಾರವಾಗುತ್ತಿತ್ತು.
ಲೋಕೇಶ್ ತಂದೆಯ ಪ್ರಕಾರ ಅವರು 150 ಧಾರಾವಾಹಿ, 15 ಸಿನಿಮಾಗಳಲ್ಲಿ ನಟಿಸಿದ್ದಾರೆ. ವಿಜಯಕಾಂತ್, ಪ್ರಭು ಮುಂತಾದವರ ಜೊತೆ ಲೋಕೇಶ್ ತೆರೆ ಹಂಚಿಕೊಂಡಿದ್ದಾರೆ. ಲೋಕೇಶ್ ಅವರಿಗೆ ಮದುವೆಯಾಗಿದ್ದು, ಇಬ್ಬರು ಮಕ್ಕಳಿವೆ.
ಲೋಕೇಶ್ ತಂದೆ ಮಾತನಾಡಿ, “ಲೋಕೇಶ್ ಹಾಗೂ ಅವನ ಪತ್ನಿ ಮಧ್ಯೆ ಭಿನ್ನಾಭಿಪ್ರಾಯ ಇದೆ ಎಂದು ಒಂದು ತಿಂಗಳ ಹಿಂದೆ ಗೊತ್ತಾಯ್ತು. 4 ದಿನದ ಹಿಂದೆ ಪತ್ನಿ ಲೀಗಲ್ ನೋಟಿಸ್ ನೀಡಿದ್ದಳು. ಲೋಕೇಶ್ ಬೇಸರ ಮಾಡಿಕೊಂಡಿದ್ದನು.
ಶುಕ್ರವಾರ ಕೊನೆಯ ಬಾರಿ ನಾನು ಅವನನ್ನು ನೋಡಿದೆ. ದುಡ್ಡು ಬೇಕು ಅಂತ ಅವನು ಕೇಳಿದ್ದಕ್ಕೆ ಕೊಟ್ಟೆ. ಎಡಿಟರ್ ಆಗಿ ಕೆಲಸ ಮಾಡುವೆ ಅಂತ ಅವನು ಅಂದ” ಎಂದು ಮಾಹಿತಿ ನೀಡಿದ್ದಾರೆ.
ಕೌಟುಂಬಿಕ ಸಮಸ್ಯೆಗಳಿಂದಾಗಿ ಲೋಕೇಶ್ ಅವರು ಮದ್ಯವ್ಯಸನಿಯಾಗಿದ್ದರು ಎನ್ನಲಾಗಿದೆ. ಚೆನ್ನೈನ ಬಸ್‌ಸ್ಟ್ಯಾಂಡ್‌ನಲ್ಲಿ ಆಗಾಗ ಅವರು ಮಲಗುತ್ತಿದ್ದರು ಎಂಬ ಮಾತು ಕೇಳಿಬಂದಿದೆ.
ಸೋಮವಾರ ಬಸ್ಟ್‌ಸ್ಟ್ಯಾಂಡ್‌ನಲ್ಲಿ ಲೋಕೇಶ್ ಅವರಿಗೆ ಏನೋ ಸಮಸ್ಯೆಯಾಗಿದೆ ಎಂದು ಅಲ್ಲಿದ್ದ ಪ್ರಯಾಣಿಕರೊಬ್ಬರು 108ಕ್ಕೆ ಫೋನ್ ಮಾಡಿ ಆಂಬುಲೆನ್ಸ್ ಕರೆಸಿಕೊಂಡಿದ್ದಾರೆ, ಅಷ್ಟೇ ಅಲ್ಲದೆ ಪೊಲೀಸ್‌ರಿಗೂ ಮಾಹಿತಿ ನೀಡಿದ್ದಾರೆ.
ಆ ವೇಳೆ ಲೋಕೇಶ್ ಅವರನ್ನು ಸರ್ಕಾರಿ ಕಿಲ್‌ಪೌಕ್ ಮೆಡಿಕಲ್ ಕಾಲೇಜ್, ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಮಂಗಳವಾರ ರಾತ್ರಿ ಲೋಕೇಶ್ ಅವರು ಕೊನೆಯುಸಿರೆಳೆದಿದ್ದಾರೆ” ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದು, ಸೆಕ್ಷನ್ 174 ಅಡಿಯಲ್ಲಿ ದೂರು ದಾಖಲಾಗಿದೆ.