
ದೆಹಲಿಯ ಆಮ್ ಆದ್ಮಿ ಪಕ್ಷದ 12ಕ್ಕೂ ಹೆಚ್ಚು ಶಾಸಕರು ಸಂಪರ್ಕಕ್ಕೆ ಸಿಗದೇ ಇರುವುದು ಸಂಚಲನಕ್ಕೆ ಕಾರಣವಾಗಿದ್ದು, ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಇಂದು ಎಲ್ಲಾ ಶಾಸಕರ ಜತೆ ತುರ್ತು ಸಭೆ ನಡೆಸಿದ್ದಾರೆ.
ಬಿಜೆಪಿ ದೆಹಲಿ ಸರ್ಕಾರವನ್ನು ಪತನಗೊಳಿಸಲು ಪ್ರಯತ್ನ ನಡೆಸುತ್ತಿದ್ದು, ತಲಾ ಶಾಸಕರಿಗೆ 20 ಕೋಟಿ ಮತ್ತು ಸಚಿವ ಸ್ಥಾನದ ಆಮಿಷ ಒಡ್ಡಿದೆ ಎಂಬ ಗಂಭೀರ ಆರೋಪಗಳು ಕೇಳಿ ಬಂದಿವೆ.
ಇದರ ಬೆನ್ನಲ್ಲೇ ಇಂದಿನ ಸಭೆಗೆ 12ಕ್ಕೂ ಹೆಚ್ಚು ಶಾಸಕರು ಗೈರು ಹಾಜರಾಗಿದ್ದು, ಕೆಲವರು ಅಜ್ಞಾತ ಸ್ಥಳಕ್ಕೆ ತೆರಳಿರುವ ಮಾಹಿತಿ ಇದೆ. ಹೀಗಾಗಿ ದೆಹಲಿ ಸರ್ಕಾರದ ಭವಿಷ್ಯ ಕೂಡ ಇಕ್ಕಟ್ಟಿಗೆ ಸಿಲುಕಿದೆ.
ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ನೇತೃತ್ವದ ಅಮ್ ಆದ್ಮಿ ಪಕ್ಷ ದೆಹಲಿಯಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿಯ ಪಾರುಪತ್ಯವನ್ನು ಭೇದಿಸಿ 62 ಶಾಸಕರನ್ನು ಗೆಲ್ಲಿಸಿಕೊಳ್ಳುವ ಮೂಲಕ ಸರ್ಕಾರವನ್ನು ರಚಿಸಿತ್ತು. ನಂತರದ ಚುನಾವಣೆಯಲ್ಲಿ ಪಂಜಾಬ್‍ನಲ್ಲೂ ಆಮ್‍ಆದ್ಮಿ ಪೂರ್ಣ ಪ್ರಮಾಣದ ಬಹುಮತದೊಂದಿಗೆ ಸರ್ಕಾರ ರಚಿಸಿದೆ.
ಮುಂದೆ ನಡೆಯುವ ಗುಜರಾತ್ ಹಾಗೂ ಇತರ ರಾಜ್ಯಗಳ ಮೇಲೂ ಕಣ್ಣಿಟ್ಟಿರುವ ಆಮ್‍ಆದ್ಮಿ, ಸರಣಿ ಸಭೆಗಳ ಮೂಲಕ ಪಕ್ಷ ಬಲವರ್ಧನೆಗೆ ಮುಂದಾಗಿತ್ತು.
ಈ ನಡುವೆ ಸಿಬಿಐ ದೆಹಲಿಯ ಉಪಮುಖ್ಯಮಂತ್ರಿ ಮನೀಶ್‍ಸಿಸೋಡಿಯಾ ಅವರ ಮನೆ ಹಾಗೂ ಇತರ ಸ್ಥಳಗಳ ಮೇಲೆ ದಾಳಿ ನಡೆಸಿತ್ತು. ಅಬಕಾರಿ ನೀತಿ ಜಾರಿಯಲ್ಲಿ ಅಕ್ರಮಗಳು ನಡೆದಿವೆ ಎಂಬ ಆರೋಪಗಳು ಕೇಳಿ ಬಂದಿದ್ದವು.
ಈ ದಾಳಿಗೂ ಮುನ್ನ ಬಿಜೆಪಿಯ ಕೆಲ ನಾಯಕರು ಮನೀಶ್ ಸಿಸೋಡಿಯಾ ಅವರನ್ನು ಸಂಪರ್ಕ ಮಾಡಿ ಎಎಪಿಯನ್ನು ವಿಭಜನೆ ಮಾಡಿ ಬಿಜೆಪಿಗೆ ಬನ್ನಿ.
ನಿಮ್ಮ ವಿರುದ್ಧ ಯಾವ ತನಿಖೆಗಳೂ ಇರುವುದಿಲ್ಲ. ಸಿಬಿಐ, ಜಾರಿನಿರ್ದೇಶನಾಲಯ ಸೇರಿದಂತೆ ಎಲ್ಲ ಪ್ರಕರಣಗಳನ್ನು ಮುಕ್ತಾಯಗೊಳಿಸಲಾಗುತ್ತದೆ ಎಂಬ ಸಂದೇಶ ರವಾನಿಸಿದ್ದರು ಎಂದು ಹೇಳಲಾಗಿದೆ.
ಅದರ ಬೆನ್ನಲ್ಲೇ ಆಮ್‍ಆದ್ಮಿ ಪಕ್ಷದ ಮುಖಂಡ ಶೌರಭ್ ಬಾರಧ್ವಜ್ ಪತ್ರಿಕಾಗೋಷ್ಠಿ ನಡೆಸಿ 20 ಕೋಟಿ ರೂ. ಕೊಟ್ಟು ಶಾಸಕರನ್ನು ಖರೀದಿಸಿ ಸರ್ಕಾರವನ್ನು ಪತನಗೊಳಿಸುವ ಯತ್ನಗಳು ನಡೆಯುತ್ತಿವೆ ಎಂದು ಕಿಡಿಕಾರಿದ್ದಾರೆ.
ಆರೋಪಗಳ ಬೆನ್ನಲ್ಲೇ ಎಎಪಿಯ ಕೆಲ ಶಾಸಕರು ಸಂಪರ್ಕಕಕ್ಕೆ ಸಿಗದೇ ಇರುವುದು ಆತಂಕ ಮೂಡಿಸಿದೆ. ನಿನ್ನೆ ಪಕ್ಷದ ರಾಜಕೀಯ ವ್ಯವಹಾರಗಳ ಸಮಿತಿ ಸಭೆ ನಡೆಸಿದ್ದು, ಮನೀಶ್ ಸಿಸೋಡಿಯಾ ಮೇಲಿನ ದಾಳಿಯನ್ನು ಖಂಡಿಸಿತ್ತು.
ಪಕ್ಷದ ಶಾಸಕರನ್ನು ಸೆಳೆಯಲು ಬಿಜೆಪಿ ಯತ್ನ ನಡೆಸಿತ್ತು. ಮಹಾರಾಷ್ಟ್ರ, ಕರ್ನಾಟಕ, ಮಧ್ಯಪ್ರದೇಶ ಹಾಗೂ ಇತರ ರಾಜ್ಯಗಳಂತೆ ಯಾಮಾರದೆ ತುರ್ತು ಕ್ರಮ ಕೈಗೊಳ್ಳಲು ನಿರ್ಧರಿಸಲಾಗಿದೆ.
ಈ ಹಿನ್ನೆಲೆಯಲ್ಲಿ ಇಂದು ತುರ್ತು ಸಭೆ ಕರೆಯಲಾಗಿದ್ದು, ನಿನ್ನೆ ಸಂಜೆ ಎಲ್ಲಾ ಶಾಸಕರಿಗೂ ಆಹ್ವಾನ ನೀಡಿ ಈ ಬಗ್ಗೆ ಸಭೆಗೆ ಹಾಜರಾಗುವಂತೆ ಸೂಚಿಸಲಾಗಿತ್ತು. ಸಭೆಗೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕರಾದ ಅತಿಶಿ, ನಾವು ಎಲ್ಲರೂ ಒಟ್ಟಾಗಿದ್ದೇವೆ, ಪಕ್ಷದಲ್ಲೇ ಇದ್ದೇವೆ ಎಂದು ತಿಳಿಸಿದ್ದಾರೆ.