
ನಕ್ಷತ್ರ ಆಮೆಗಳನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ ನಾಲ್ವರನ್ನು ಆರ್ಎಂಸಿಯಾರ್ಡ್ ಠಾಣೆ ಪೊಲೀಸರು ಬಂಧಿಸಿ, 1132 ಜೀವಂತ ನಕ್ಷತ್ರ ಆಮೆಗಳನ್ನು ರಕ್ಷಿಸಿದ್ದಾರೆ.
ಶಿಡ್ಲಘಟ್ಟ ತಾಲ್ಲೂಕಿನ ಅಕ್ಕಿಪಿಕ್ಕಿ ಜನಾಂಗದ ರಾಜ್ಪತ್ರ, ಕಲ್ಯಾಣ್, ಸಿಂಹಾದ್ರಿ, ಇಸಾಕ್ ಬಂಧಿತ ಆರೋಪಿಗಳು.
ಆರ್ಎಂಸಿಯಾರ್ಡ್ ಪೊಲೀಸ್ ಠಾಣೆ ವ್ಯಾಪ್ತಿಯ ತುಮಕೂರು ರಸ್ತೆ, ಗೊರಗುಂಟೆಪಾಳ್ಯ, ಟ್ರೆಡೆಂಟ್ ಹುಂಡೈ ಕಾರ್ ಶೋರೂಂ ಮುಂಭಾಗದ ಬಸ್ ನಿಲ್ದಾಣದ ಬಳಿ ಮೂವರು ನಕ್ಷತ್ರ ಆಮೆಗಳನ್ನು ಅಕ್ರಮವಾಗಿ ಬ್ಯಾಗ್ಗಳಲ್ಲಿ ಇಟ್ಟುಕೊಂಡು ಸಾರ್ವಜನಿಕರಿಗೆ ಮಾರಾಟ ಮಾಡಲು ಯತ್ನಿಸಿದ್ದರು.ಈ ಬಗ್ಗೆ ಇನ್ಸ್ಪೆಕ್ಟರ್ ಪ್ರಕಾಶ್ ಅವರಿಗೆ ಮಾಹಿತಿ ಬಂದಿದೆ.
ತಕ್ಷಣ ಇನ್ಸ್ಪೆಕ್ಟರ್ ಅವರು ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ಹೋಗಿ ಮಾಹಿತಿ ಖಚಿತಪಡಿಸಿಕೊಂಡು ಅನುಮಾನಾಸ್ಪದವಾಗಿ ನಿಂತಿದ್ದ ಮೂವರನ್ನು ವಶಕ್ಕೆ ಪಡೆದು ಅವರ ಬಳಿ ಇದ್ದ ಬ್ಯಾಗ್ಗಳನ್ನು ಪರಿಶೀಲಿಸಿದಾಗ ಅದರಲ್ಲಿ ನಕ್ಷತ್ರ ಆಮೆಗಳು ಇರುವುದು ಕಂಡುಬಂದಿದೆ.
ಈ ಮೂವರನ್ನು ಠಾಣೆಗೆ ಕರೆದೊಯ್ದು ಬಂಧಿಸಿ ಅವರ ಬಳಿ ಇದ್ದ 960 ನಕ್ಷತ್ರ ಆಮೆಗಳನ್ನು ವಶಪಡಿಸಿಕೊಂಡಿದ್ದಾರೆ.
ಮೊದಲನೇ ಆರೋಪಿಯನ್ನು ಹೆಚ್ಚಿನ ವಿಚಾರಣೆಗೊಳಪಡಿಸಿದಾಗ, ಈ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಮತ್ತೊಬ್ಬ ಆರೋಪಿಯನ್ನು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಪೆಮ್ಮಗಾರಿಪಲ್ಲಿಯಲ್ಲಿ ಬಂಧಿಸಿ ಆತನ ಮನೆಯಲ್ಲಿ ಸಂಗ್ರಹಿಸಿಡಲಾಗಿದ್ದ 172 ನಕ್ಷತ್ರ ಆಮೆಗಳನ್ನು ವಶಪಡಿಸಿಕೊಂಡಿದ್ದಾರೆ.
ಆರೋಪಿಗಳಿಂದ ವಶಪಡಿಸಿಕೊಳ್ಳ ಲಾದ ಒಟ್ಟ 1132 ನಕ್ಷತ್ರ ಆಮೆಗಳನ್ನು ವಶಪಡಿಸಿಕೊಂಡು ಬನ್ನೇರುಘಟ್ಟ ಉದ್ಯಾನದಲ್ಲಿರುವ ಸಂರಕ್ಷಣಾ ಕೇಂದ್ರಕ್ಕೆ ನೀಡುವಲ್ಲಿ ಆರ್ಎಂಸಿಯಾರ್ಡ್ ಪೊಲೀಸರು ಯಶಸ್ವಿಯಾಗಿದ್ದಾರೆ.
ಆರೋಪಿಗಳು ನಕ್ಷತ್ರ ಆಮೆಗಳನ್ನು ಎಲ್ಲಿಂದ ತರುತ್ತಿದ್ದರು, ಎಲ್ಲಿಗೆ ಸಾಗಾಟ ಮಾಡುತ್ತಿದ್ದರು ಎಂಬ ಬಗ್ಗೆ ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.
ಯಶವಂತಪುರ ಉಪವಿಭಾಗದ ಎಸಿಪಿ ಅರುಣ್ ನಾಗೇಗೌಡ ಅವರ ಮಾರ್ಗದರ್ಶನದಲ್ಲಿ ಇನ್ಸ್ಪೆಕ್ಟರ್ ಪ್ರಕಾಶ್ ಅವರ ನೇತೃತ್ವದ ಸಿಬ್ಬಂದಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.