11 ಬಹುಮಹಡಿ ಕಟ್ಟಡ ತೆರವಿಗೆ ಬಿಬಿಎಂಪಿ ನೋಟಿಸ್..

ವಿಮಾನ ಸುರಕ್ಷತಾ ದೃಷ್ಟಿಯಿಂದ ಎತ್ತರ ಮಿತಿಯನ್ನು ಮೀರಿರುವ 11 ಖಾಸಗಿ ಕಟ್ಟಡವನ್ನು ತೆರವುಗೊಳಿಸಬೇಕೆಂದು ಬಿಬಿಎಂಪಿ ನೋಟಿಸ್ ನೀಡಿದೆ.
ವೈಮಾನಿಕ ತರಬೇತಿ ಶಾಲೆಯ ಚಟುವಟಿಕೆಗಳನ್ನು ಪ್ರಾರಂಭಿಸಲು ವಿಮಾನಗಳ ಸುರಕ್ಷತಾ ದೃಷ್ಟಿಯಿಂದ ನೋ ಫ್ಲೈಯಿಂಗ್ ಝೋನ್ ವ್ಯಾಪ್ತಿಯಲ್ಲಿ ಈಗಾಗಲೇ ನಿರ್ಮಿಸಲಾಗಿರುವ ಕಟ್ಟಡಗಳಿಗೆ ಸಂಬಂಧಿಸಿದಂತೆ ನಿಗದಿತ ಕಡಿಮೆ ಎತ್ತರದ ಕಟ್ಟಡ ನಕಾಶೆಗೆ ಬಿಬಿಎಂಪಿ ವತಿಯಿಂದ ಅನುಮೋದನೆ ಪಡೆದು 5 ಕಿ.ಮೀ ವ್ಯಾಪ್ತಿಯಲ್ಲಿ ಅನುಮತಿಸಲಾಗಿರುವ ಕಟ್ಟಡಗಳ ಎತ್ತರಕ್ಕೆ ನೀಡಿರುವ ಎನ್‍ಒಸಿಗೆ ವಿರುದ್ಧವಾಗಿ ಎತ್ತರದ ಮಿತಿಯನ್ನು ಮೀರಿರುವ 11 ಖಾಸಗಿ ಕಟ್ಟಡಗಳನ್ನು ತೆರವುಗೊಳಿಸಲು ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಬಿಬಿಎಂಪಿಗೆ ಸೂಚನೆ ನೀಡಿರುವ ಹಿನ್ನೆಲೆಯಲ್ಲಿ 11 ಕಟ್ಟಡಗಳ ಮಾಲೀಕರಿಗೆ ನೋಟಿಸ್ ನೀಡಲಾಗಿದೆ.
ಪಾಲಿಕೆ ವತಿಯಿಂದ ನಕ್ಷೆ ಮಂಜೂರಾತಿ, ಪ್ರಾರಂಭಿಕ ಪ್ರಮಾಣಪತ್ರ, ಕೆಲವೊಂದು ಕಟ್ಟಡಕ್ಕೆ ಸ್ವಾೀನ ಪ್ರಮಾಣಪತ್ರ ಮತ್ತು ಭಾಗಶಃ ಪ್ರಮಾಣಪತ್ರವನ್ನು ನೀಡಲಾಗಿರುವುದರಿಂದ ಅಭಿವೃದ್ಧಿದಾರರು ಕಟ್ಟಡ ಮಾಲೀಕರುಗಳಿಗೆ ಎನ್‍ಒಸಿ ಪತ್ರದಲ್ಲಿ ಪಡೆದಿರುವುದಕ್ಕಿಂತ ಹೆಚ್ಚುವರಿಯಾಗಿ ಕಟ್ಟಡ ನಿರ್ಮಿಸಿರುವ ಬಗ್ಗೆ ಸೂಕ್ತ ವಿವರಣೆ ಮತ್ತು ಸಮಜಾಯಿಷಿ ನೀಡಬೇಕೆಂದು ನೋಟಿಸ್‍ನಲ್ಲಿ ಉಲ್ಲೇಖಿಸಲಾಗಿದೆ.