ರಾಜ್ಯ

100 ಹಳೆ ಬಸ್‌ಗಳನ್ನು ಮಾರಾಟ ಮಾಡಿದ ಬಿಎಂಟಿಸಿ, ತಲಾ 1 ಲಕ್ಷ ರೂ. ದರಕ್ಕೆ

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ)ಯು ಸುಸ್ಥಿತಿಯಲ್ಲಿರುವ 100 ಹಳೆಯ ಬಸ್‌ಗಳನ್ನು ತಲಾ ಒಂದು ಲಕ್ಷ ರೂ.ನಂತೆ ವಾಯುವ್ಯ ಸಾರಿಗೆ ನಿಗಮಕ್ಕೆ ಮಾರಾಟ ಮಾಡುತ್ತಿದೆ. ಈ ಸಂಬಂಧ ಒಪ್ಪಂದ ಮಾಡಿಕೊಳ್ಳಲಾಗಿದೆ.

ಬಿಎಂಟಿಸಿ ಮತ್ತು ವಾಯುವ್ಯ ಸಾರಿಗೆ ಸಂಸ್ಥೆ ನಡುವಿನ ಒಡಂಬಡಿಕೆಯಂತೆ ಈಗಾಗಲೇ ಬಿಎಂಟಿಸಿಯು 30 ಬಸ್‌ಗಳನ್ನು ವಾಯುವ್ಯ ಸಾರಿಗೆ ನಿಗಮಕ್ಕೆ ಹಸ್ತಾಂತರಿಸಿದೆ. ಬೆಂಗಳೂರು ನಗರದಲ್ಲಿ ಸಂಚರಿಸುತ್ತಿದ್ದ ಬಸ್‌ಗಳ ಪೈಕಿ 8.5 ಲಕ್ಷದಿಂದ 9.5 ಲಕ್ಷ ಕಿ.ಮೀ. ಕ್ರಮಿಸಿರುವ ಬಸ್‌ಗಳನ್ನು ಮಾರಾಟ ಮಾಡಲಾಗುತ್ತಿದೆ.

ಈ ಬಸ್‌ಗಳು ಸುಸ್ಥಿತಿಯಲ್ಲಿದ್ದು, ಪ್ರಯಾಣಿಕರನ್ನು ಕರೆದೊಯ್ಯಲು ಯೋಗ್ಯವಾಗಿವೆ.ಈ ಕುರಿತು ಪ್ರತಿಕ್ರಿಯಿಸಿರುವ ವಾಯುವ್ಯ ಸಾರಿಗೆ ನಿಗಮದ ವ್ಯವಸ್ಥಾಪಕ ನಿರ್ದೇಶಕ ಭರತ್‌, ”ವಾಯುವ್ಯ ಸಾರಿಗೆ ನಿಗಮದ ತಾಂತ್ರಿಕ ಸಿಬ್ಬಂದಿ ತಂಡಗಳು ಬಿಎಂಟಿಸಿ ಕಾರ್ಯಾಗಾರಕ್ಕೆ ಭೇಟಿ ಕೊಟ್ಟು, ಬಸ್‌ಗಳು ಕಾರ್ಯಾಚರಣೆಗೆ ಯೋಗ್ಯವಾಗಿವೆಯೇ ಎಂಬುದನ್ನು ಪರಿಶೀಲಿಸಿ, ಪ್ರಮಾಣ ಪತ್ರ ಪಡೆಯಲಿವೆ.

ಆನಂತರ ಬಸ್‌ಗಳನ್ನು ಪಡೆದುಕೊಳ್ಳಲಾಗುವುದು,” ಎಂದರು.ಬಿಎಂಟಿಸಿಯಲ್ಲಿ 6,700 ಬಸ್‌ಗಳಿವೆ. ಇಷ್ಟು ಬಸ್‌ಗಳ ಕಾರ್ಯಾಚರಣೆಗೆ ಸಾಕಾಗುವಷ್ಟು ಚಾಲಕರು ಮತ್ತು ನಿರ್ವಾಹಕರಿಲ್ಲ. ಹಾಲಿ ಇರುವ ಸಿಬ್ಬಂದಿಯನ್ನೇ ಬಳಸಿಕೊಂಡು 5600 ಬಸ್‌ಗಳನ್ನು ಕಾರ್ಯಾಚರಣೆ ಮಾಡಲಾಗುತ್ತಿದೆ.

ಉಳಿದ ಬಸ್‌ಗಳು ಡಿಪೊಗಳಲ್ಲೇ ನಿಂತಿವೆ. ಬಸ್ಸುಗಳು ಸಂಚರಿಸದಿದ್ದರೆ ದುರಸ್ತಿಗೆ ಬರುವ ಆತಂಕವಿದೆ. ಹೀಗಾಗಿ ಕೆಲ ಬಸ್‌ಗಳನ್ನು ವಾಯುವ್ಯ ಸಾರಿಗೆ ನಿಗಮಕ್ಕೆ ಹಸ್ತಾಂತರಿಸಲಾಗುತ್ತಿದೆ,” ಎಂದು ಬಿಎಂಟಿಸಿ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.ಕಳೆದ ವರ್ಷ 550 ಹೊಸ ಬಸ್‌ಗಳನ್ನು ಖರೀದಿಸಲಾಗಿತ್ತು.

ಈ ವರ್ಷವೂ ಬಸ್‌ ಖರೀದಿಸಲು ಸರಕಾರ ಅನುಮತಿ ನೀಡಿದ್ದು, ಶೀಘ್ರದಲ್ಲೇ ಹೊಸ ಬಸ್‌ಗಳನ್ನು ಖರೀದಿಸಲಾಗುವುದು. ಹಾಗಾಗಿ, ಬಿಎಂಟಿಸಿಗೆ ಬಸ್‌ಗಳ ಕೊರತೆ ಎದುರಾಗುವುದಿಲ್ಲ,” ಎಂದು ಅವರು ಹೇಳಿದರು.ಕೋವಿಡ್‌ನಿಂದಾಗಿ ವಾಯುವ್ಯ ಸಾರಿಗೆ ನಿಗಮ ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕಿತ್ತು.

ಇದರ ಬೆನ್ನಲ್ಲೇ ತೈಲ ಬೆಲೆ ಏರಿಕೆ ನಿಗಮಕ್ಕೆ ಹೊರೆಯಾಗಿ ಪರಿಣಮಿಸಿದೆ. ಹೀಗಾಗಿ ಸುಸ್ಥಿತಿಯಲ್ಲಿರುವ ಹಳೆಯ ಬಸ್‌ಗಳನ್ನು ಉಚಿತವಾಗಿ ನೀಡುವಂತೆ ವಾಯುವ್ಯ ಸಾರಿಗೆ ನಿಗಮ ಬಿಎಂಟಿಸಿಗೆ ಪ್ರಸ್ತಾವನೆ ಸಲ್ಲಿಸಿತ್ತು. ಸುಸ್ಥಿತಿಯಲ್ಲಿರುವ ಬಸ್‌ಗಳನ್ನು ತಲಾ 1 ಲಕ್ಷ ರೂ.ಗೆ ಮಾರಾಟ ಮಾಡಲು ಸಿದ್ಧವಿರುವುದಾಗಿ ಬಿಎಂಟಿಸಿ ತಿಳಿಸಿತ್ತು. ಅದರಂತೆ ಒಪ್ಪಂದ ನಡೆದಿದೆ.

ವಾಯುವ್ಯ ಸಾರಿಗೆ ನಿಗಮದಿಂದ ತಾಂತ್ರಿಕ ತಂಡ ಬಿಎಂಟಿಸಿಯ ಹಳೆಯ ಬಸ್‌ಗಳನ್ನು ಪರೀಕ್ಷೆಗೊಳಪಡಿಸಲಿದೆ. ನೂರು ಬಸ್‌ಗಳನ್ನು ಖರೀದಿಸಲು ಮುಂದಾಗಿದ್ದೇವೆ. ಈಗಾಗಲೇ 30 ಬಸ್‌ಗಳನ್ನು ಬಿಎಂಟಿಸಿ ವಾಯುವ್ಯ ಸಾರಿಗೆ ನಿಗಮಕ್ಕೆ ಬಿಬಿಎಂಪಿ ಹಸ್ತಾಂತರಿಸಿದೆ.

ಈ ಬಸ್‌ಗಳು ಸಮರ್ಪಕವಾಗಿ ಸೇವೆ ನೀಡುತ್ತಿವೆ ಎಂದು ವಾಯುವ್ಯ ಸಾರಿಗೆ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ ಭರತ್‌ ಹೇಳಿದ್ದಾರೆ.ಹೊಸ ಮಾರ್ಗಗಳಲ್ಲಿ ಬಸ್‌ಗಳನ್ನು ಬಿಡುವಂತೆ ನಾಗರಿಕರಿಂದ ಬೇಡಿಕೆ ಬರುತ್ತಿವೆ. ಇವುಗಳ ಕಾರ್ಯಾಚರಣೆಗೆ ಸುಮಾರು 3,000 ನೌಕರರ ಅಗತ್ಯವಿದೆ.

ಈ ಸಂಬಂಧ ಸರಕಾರದ ಗಮನಕ್ಕೂ ತರಲಾಗಿದೆ. ತಾತ್ಕಾಲಿಕವಾಗಿ ಹೊರಗುತ್ತಿಗೆ ಆಧಾರದ ಮೇಲೆ ಸಿಬ್ಬಂದಿ ನೇಮಕ ಮಾಡಿಕೊಳ್ಳುವಂತೆ ಸರಕಾರ ಸೂಚಿಸಿದೆ. ಅದರಂತೆ ಹೊರಗುತ್ತಿಗೆ ಆಧಾರದ ಮೇಲೆ ಸಿಬ್ಬಂದಿ ನೇಮಕ ಮಾಡಿಕೊಳ್ಳಲಾಗುತ್ತಿದೆ,” ಎಂದು ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕ ಸೂರ್ಯಸೇನ್‌ ಹೇಳಿದರು.

Basaveshwara M

Crime reporter, Bangalore

Related Articles

Leave a Reply

Your email address will not be published. Required fields are marked *

Back to top button