ಅಪರಾಧ

1 ಕೋಟಿ ಖೋಟಾ ನೋಟು ನೀಡಿ ವಂಚಿಸಿದ್ದ ಮೂವರ ಬಂಧನ

ಸಂಕಷ್ಟಕ್ಕೆ ಸಿಲುಕಿದ್ದ ಗುತ್ತಿಗೆದಾರರೊಬ್ಬರಿಗೆ ಸಾಲ ಕೊಡಿಸುವುದಾಗಿ ನಂಬಿಸಿ ಒಂದು ಕೋಟಿ ಖೋಟಾ ನೋಟುಗಳನ್ನು ನೀಡಿ ವಂಚಿಸಿದ್ದ ಖತರ್ನಾಕ್ ಮೂವರು ಆರೋಪಿಗಳನ್ನು ಜಯನಗರ ಪೊಲೀಸರು ಬಂಧಿಸಿದ್ದಾರೆ.ಆರ್‍ಟಿನಗರ, ದಿಣ್ಣೂರು ಮುಖ್ಯರಸ್ತೆ, ವಿಕೇರ್ ಆಸ್ಪತ್ರೆ ಬಳಿಯ ನಿವಾಸಿ ಮನ್ನಾಶರಣ(35), ವಿಷ್ಣು ರಾಜನ್.

ಆರ್ ಅಲಿಯಾಸ್ ವಿಷ್ಣು (26) ಹಾಗೂ ರಾಮಮೂರ್ತಿನಗರ ಮಂಜುನಾಥನಗರದ 8ನೇ ಕ್ರಾಸ್‍ನ ನಿವಾಸಿ ಪ್ರವೀಣ್‍ಕುಮಾರ್(40) ಎಂಬುವರನ್ನು ಬಂಧಿಸಿದ್ದು ಇನ್ನು ಮೂವರು ಆರೋಪಿಗಳು ತಲೆಮರೆಸಿಕೊಂಡಿದ್ದಾರೆ.

ಜಯನಗರ 4ನೇ ಟಿಬ್ಲಾಕ್‍ನ 34ನೇ ಕ್ರಾಸ್‍ನಲ್ಲಿರುವ ಜೆಎನ್ ಪ್ರಾಜೆಕ್ಟ್‍ನ ಪಾಲುದಾರರಾಗಿದ್ದ ಪಾರ್ಥಸಾರಥಿ.ಎನ್ ಅವರು ಬಾಣಸವಾಡಿಯಲ್ಲಿರುವ ಎನ್.ಐ.ಸಿ.ಎಚ್.ಎಫ್.ಎಲ್ ಬ್ಯಾಂಕ್‍ನಲ್ಲಿ 1.75 ಕೋಟಿ ಸಾಲ ಪಡೆದುಕೊಂಡಿದ್ದರು.ಕೋವಿಡ್ ನಂತರ ಕಾರಣಾಂತರಗಳಿಂದ ಸಾಲವನ್ನು ಮರುಪಾವತಿ ಮಾಡಲು ಸಾಧ್ಯವಾಗದೆ ಅವರು ಎನ್‍ಪಿಎ ಆಗಿದ್ದರು.

ಇದನ್ನು ಅರಿತು ಆರೋಪಿಗಳಾದ ಮನ್ನಾಶರಣ , ವಿಷ್ಣು, ಆಶಲತಾ ರಾವ್, ಲಕ್ಷ್ಮಣ್ ರಾವ್, ತುಷಾರ್ ಎಂಬುವರೊಂದಿಗೆ ಸುಲಭವಾಗಿ ಪಾರ್ಥಸಾರಥಿ ಅವರಿಗೆ ಸಾಲ ಕೊಡಿಸುವುದಾಗಿ ದಾಖಲೆಗಳನ್ನು ಮತ್ತು ಚೆಕ್‍ಗಳನ್ನು ಪಡೆದಿದ್ದರು.ನಂತರ ತನ್ನ ಬಳಿ 13 ಕೋಟಿ ರೂ.

ಗಳಿದ್ದು ಈ ಹಣವನ್ನು ಪೂರ್ತಿಯಾಗಿ ಪಡೆದುಕೊಂಡರೆ ಶೇ.5ರಷ್ಟು ರಿಯಾಯ್ತಿ ನೀಡುವುದಾಗಿ ನಂಬಿಸಿ ಅದಕ್ಕೆ ಶೇ.2ರಷ್ಟು ಸ್ಟ್ಯಾಂಪ್‍ಡ್ಯೂಟಿ ಕಟ್ಟಬೇಕೆಂದು 27 ಲಕ್ಷ ಹಣ ಪಡೆದಿದ್ದರು.ಇದಕ್ಕೆ ಪ್ರತಿಯಾಗಿ ಅವರಿಗೆ ಒಂದು ಕೋಟಿ ಮೌಲ್ಯದ ಖೋಟಾ ನೋಟುಗಳನ್ನು ನೀಡಿ ನಂಬಿಕೆ ಬರುವಂತೆ ನಾಟಕವಾಡಿ ಮೋಸ ಮಾಡಿದ್ದರು.

ಈ ಬಗ್ಗೆ ಪಾರ್ಥಸಾರಥಿ ಅವರು ಜಯನಗರ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿ ಕಳೆದ ಡಿ.22ರಂದು ಆರೋಪಿಗಳನ್ನು ಬಂಧಿಸಿ ಅವರಿಂದ ಮಹೇಂದ್ರ ಕಾರು, ಒಂದು ಜಾಗ್ವಾರ್ ಕಾರು, 6 ಕೆಜಿ ಚಿನ್ನದಂತಿರುವ ಬಿಸ್ಕೆತ್‍ಗಳು, ಸುಮಾರು ಒಂದು ಕೋಟಿ ಮೌಲ್ಯದ ಖೋಟಾನೋಟು, 20 ಲಕ್ಷ ನಗದು, ಕತ್ತಿ ಹಾಗೂ ನಕಲಿ ಬುಲೆಟ್‍ಗಳನ್ನು ವಶಪಡಿಸಿಕೊಂಡಿದ್ದಾರೆ.

ತಲೆಮರೆಸಿಕೊಂಡಿರುವ ಇತರೆ ಆರೋಪಿಗಳಾದ ಆಶಾಲತಾ ರಾವ್, ಲಕ್ಷ್ಮಣ್ ರಾವ್ ಮತ್ತು ತುಷಾರ್ ಅವರ ಪತ್ತೆಗೆ ಕಾರ್ಯಾಚರಣೆ ಮುಂದುವರೆಸಿದ್ದಾರೆ.

ದಕ್ಷಿಣ ವಿಭಾಗದ ಡಿಸಿಪಿ ಕೃಷ್ಣಕಾಂತ್ ಅವರ ಮಾರ್ಗದರ್ಶನದಲ್ಲಿ ಜಯನಗರ ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತ ಕೆ.ವಿ.ಶ್ರೀನಿವಾಸ್ ಅವರ ನೇತೃತ್ವದಲ್ಲಿ ಜಯನಗರ ಠಾಣೆ ಇನ್‍ಸ್ಪೆಕ್ಟರ್ ಮಂಜುನಾಥ್, ಪಿಎಸ್‍ಐ ಚಂದನ್ ಕಾಳೆ, ಎಎಸ್‍ಐ ಲಕ್ಷ್ಮಣಚಾರ್ ಮತ್ತವರ ಸಿಬ್ಬಂದಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದು, ಇವರ ಕಾರ್ಯವನ್ನು ಮೇಲಾಧಿಕಾರಿಗಳು ಪ್ರಶಂಸಿಸಿದ್ದಾರೆ.

Basaveshwara M

Crime reporter, Bangalore

Related Articles

Leave a Reply

Your email address will not be published. Required fields are marked *

Back to top button