
ಮಂಡ್ಯ: ಐದು ರೂಪಾಯಿಯ ವೈದ್ಯರು ಎಂದೇ ಪ್ರಖ್ಯಾತಿ ಗಳಿಸಿರುವ ಮಂಡ್ಯದ ಡಾ.ಎಸ್‌ಸಿ ಶಂಕರೇಗೌಡರನ್ನು ಮತ್ತೊಂದು ರಾಷ್ಟ್ರ ಮಟ್ಟದ ಪ್ರಶಸ್ತಿ ಅರಸಿಕೊಂಡು ಬಂದಿದೆ.
ತನ್ನ ಕ್ಲಿನಿಕ್‌ಗೆ ಬರುವ ರೋಗಿಗಳಿಗೆ ಯಾವುದೇ ಕಾಯಿಲೆ ಇದ್ದರೂ ಕೇವಲ ಐದು ರೂಪಾಯಿ ಶುಲ್ಕ ಪಡೆದು ಚಿಕಿತ್ಸೆ ನೀಡುತ್ತಿರುವ ವೈದ್ಯ ಶಂಕರೇಗೌಡರ ಸಾಮಾಜಿಕ ಬದ್ಧತೆ ಮತ್ತು ಸೇವಾಕೈಂಕರ್ಯಕ್ಕೆ ಎಲ್ಲೆಡೆಯಿಂದ ಶ್ಲಾಘನೆ ವ್ಯಕ್ತವಾಗಿತ್ತು.
ಅಲ್ಲದೇ ಇವರ ಸೇವೆ ಗುರುತಿಸಿ ಹಲವು ಸಂಘಸಂಸ್ಥೆಗಳು ಸನ್ಮಾನವನ್ನೂ ಮಾಡಿದ್ದವು. ಇದೀಗ ಇವರ ಮಡಿಲಿಗೆ ಮತ್ತೊಂದು ರಾಷ್ಟ್ರೀಯ ಪ್ರಶಸ್ತಿ ಸೇರಿದೆ.
ಸಿಎನ್‌ಎನ್ ನ್ಯೂಸ್18 ಸಂಸ್ಥೆ ವತಿಯಿಂದ ನೀಡಲಾಗುವ ಈ ಬಾರಿಯ ‘ಇಂಡಿಯನ್ ಆಫ್ ದಿ ಇಯರ್-2022’ ಇದರ ಸಾಮಾಜಿಕ ಬದಲಾವಣೆ ವಿಭಾಗದಲ್ಲಿ 5 ರೂಪಾಯಿ ವೈದ್ಯ ಡಾ.ಶಂಕರೇಗೌಡರಿಗೆ ಪ್ರಶಸ್ತಿ ಲಭಿಸಿದೆ.
ದಿಲ್ಲಿಯಲ್ಲಿ ಆಯೋಜಿಸಿದ್ದ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ಪ್ರಶಸ್ತಿ ಪ್ರದಾನ ಮಾಡಿದರು.
ಸರ್ಕಾರದ ವಿವಿಧ ಆರೋಗ್ಯ ಯೋಜನೆಗಳನ್ನು ತಳಮಟ್ಟದ ಹಿಂದುಳಿದ ಸಮುದಾಯಗಳಿಗೆ ತಲುಪಿಸುವಲ್ಲಿ ಸಹಾಯ ಮಾಡುತ್ತಿರುವ ಆಶಾ ಕಾರ್ಯಕರ್ತರು, ಕೋವಿಡ್ ಎರಡನೇ ಅಲೆಯ ಸಮಯದಲ್ಲಿ ಸಾವಿರಾರು ಜನರು ಜೀವವನ್ನು ಉಳಿಸಲು ಭರವಸೆಯ ಬೆಳಕಾಗಿ ಶ್ರಮಿಸಿದ ಗುರುಗ್ರಾಂ ಮೂಲದ ಎನ್‌ಜಿಓ ಹೇಮಕುಂಟ್ ಫೌಂಡೇಶನ್, 2016 ಮತ್ತು 2021ರಲ್ಲ ಎರಡು ಬಾರಿ ವಿಶ್ವ ಕಿಕ್‌ಬಾಕ್ಸಿಂಗ್ ಚಾಂಪಿಯನ್ ಆಗಿ ಹೊರಹೊಮ್ಮಿದ 13 ವರ್ಷದ ಕಾಶ್ಮೀರಿ ಹುಡುಗಿ ತಜಮುಲ್ ಇಸ್ಲಾಂ ಮತ್ತು ನಮ್ಮ ರಾಜ್ಯದ 5 ರೂಪಾಯಿ ಡಾಕ್ಟರ್ ಎಂದು ಖ್ಯಾತಿ ಹೊಂದಿದ್ದ ಡಾ.ಶಂಕರೇಗೌಡರು ಈ ಪ್ರಶಸ್ತಿಗೆ ನಾಮ ನಿರ್ದೇಶಿತಗೊಂಡಿದ್ದರು.
ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರಿಂದ ‘ಇಂಡಿಯನ್ ಆಫ್ ದಿ ಇಯರ್-2022’ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ವೈದ್ಯ ಡಾ.ಶಂಕರೇಗೌಡ, ದೇಶದ ಗ್ರಾಮೀಣ ಭಾಗಗಳಲ್ಲಿ ಕೈಗೆಟಕುವ ದರದಲ್ಲಿ ವೈದ್ಯಕೀಯ ಸೇವೆ ದೊರಕದೆ ಇರುವುದರ ಬಗ್ಗೆ ಪ್ರಸ್ತಾಪಿಸಿದರು.
‘ನಾನು 1982ರಿಂದ ಅಭ್ಯಾಸ ಮಾಡುತ್ತಿದ್ದೇನೆ. ಅಂದಿನಿಂದ ಇಂದಿನವರೆಗೆ 40 ವರ್ಷಗಳಿಂದ 5 ರೂಪಾಯಿ ಶುಲ್ಕ ಹಾಕುತ್ತೇನೆ. ನಮ್ಮಲ್ಲಿ ಯಾವ ಜ್ಞಾನವಿದೆಯೋ ಅದನ್ನು ಎಲ್ಲರಿಗೂ ಸಮಾನವಾಗಿ ನೀಡಬೇಕು.
ಹಾಗಾಗಿ ನನ್ನ ಜ್ಞಾನವನ್ನು ನನ್ನ ಶಿಕ್ಷಣಕ್ಕೆ ಕಾರಣರಾದ ನನ್ನ ಜನರಿಗೆ ನೀಡಬೇಕು ಎನ್ನುವ ಉದ್ದೇಶದಿಂದ ಪದವಿ ಪಡೆದ ನಂತರ ನನ್ನ ಊರಿನಲ್ಲಿ ಅಭ್ಯಾಸ ಮಾಡಲು ಪ್ರಾರಂಭಿಸಿದೆ ಎಂದು ಹೇಳಿದರು.
ಅಲ್ಲದೇ, ‘ಇತ್ತೀಚಿನ ದಿನಗಳಲ್ಲಿ ಸಾಕಷ್ಟು ವೈದ್ಯರಿದ್ದಾರೆ. ಆದರೆ ಗ್ರಾಮೀಣ ಪ್ರದೇಗಳಲ್ಲಿ ವೈದ್ಯರ ಕೊರತೆಯಿದೆ. ಹಾಗಾಗಿ ಸರ್ಕಾರವು ವೈದ್ಯರಿಗೆ ಕಡ್ಡಾಯವಾಗಿ ಒಂದು ವರ್ಷ ಗ್ರಾಮೀಣ ಪ್ರದೇಶದಲ್ಲಿ ಅಭ್ಯಾಸ ಮಾಡಬೇಕು’ ಎಂದರು.
ಐದು ರೂಪಾಯಿ ಡಾಕ್ಟರ್ ಶಂಕರೇಗೌಡರು ಚರ್ಮರೋಗ ತಜ್ಞರಾಗಿದ್ದು, ತನ್ನ ಕ್ಲಿನಿಕ್ ಬರುವ ರೋಗಿಗಳಿಗೆ 5 ರೂಪಾಯಿ ಶುಲ್ಕ ವಿಧಿಸೋದು ಮಾತ್ರವಲ್ಲದೇ, ರೋಗಿಗಳಿಗೆ ಕೈಗೆಟಕುವ ದರದ ಔಷಧಿಗಳನ್ನು ಶಿಫಾರಸು ಮಾಡಿ ಅದರಲ್ಲಿ ಯಶಸ್ಸನ್ನು ಗಳಿಸಿದ್ದಾರೆ.
ಇವರ ಈ ನಿಸ್ವಾರ್ಥ ಸೇವೆಯ ಕಾರಣಕ್ಕೆ ಶಂಕರೇಗೌಡರು ಕರ್ನಾಟಕ ವಿವಿಧ ಮೂಲೆಗಳಿಂದ ರೋಗಿಗಳನ್ನು ಆಕರ್ಷಿಸಲು ಯಶಸ್ವಿಯಾಗಿದ್ದಾರೆ.