೭ ಜಿಲ್ಲೆಗಳಲ್ಲಿ ಗಾಂಧಿಭವನ ನಿರ್ಮಾಣ

ಕರ್ನಾಟಕ ಸರಕಾರದ ವತಿಯಿಂದ ಈಗಾಗಲೇ ೨೩ ಜಿಲ್ಲೆಗಳಲ್ಲಿ ಗಾಂಧಿಭವನ ನಿರ್ಮಿಸಲಾಗಿದ್ದು, ಇನ್ನೂ ಏಳು ಜಿಲ್ಲೆಗಳಲ್ಲಿ ನಿರ್ಮಾಣವಾಗಬೇಕಿದೆ. ಈ ಏಳು ಜಿಲ್ಲೆಗಳಲ್ಲಿ ಒಂದು ವರ್ಷದೊಳಗೆ ನಿರ್ಮಾಣ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಿಳಿಸಿದರು.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಕರ್ನಾಟಕ ಗಾಂಧಿಸ್ಮಾರಕ ನಿಧಿ ಸಂಯುಕ್ತ ಆಶ್ರಯದಲ್ಲಿ ನಗರದ ಗಾಂಧಿಭವನದ ಮಹಾದೇವ ದೇಸಾಯಿ ಸಭಾಂಗಣದಲ್ಲಿ ಭಾನುವಾರ ನಡೆದ ಮಹಾತ್ಮಗಾಂಧಿ ಜಯಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಸುಪ್ರಸಿದ್ಧ ಮನೋರೋಗ ತಜ್ಞ ಡಾ.ಸಿ.ಆರ್.ಚಂದ್ರಶೇಖರ್ ಅವರಿಗೆ ರಾಜ್ಯ ಸರಕಾರದ ಪ್ರತಿಷ್ಠಿತ ೨೦೨೨ ನೇ ದಿನದರ್ಶೀ ವರ್ಷದ ಮಹಾತ್ಮ ಗಾಂಧಿ ಸೇವಾ ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡಿ,ಈ ಜಿಲ್ಲೆಗಳಲ್ಲಿ ಗಾಂಧಿಭವನ ನಿರ್ಮಾಣಕ್ಕೆ ಬೇಕಾದ ನಿವೇಶನ ಮತ್ತು ಅನುದಾನ ಒದಗಿಸಲು ಕ್ರಮವಹಿಸಲಾಗುವುದು ಎಂದು ಅವರು ಹೇಳಿದರು.
ಖಾದಿ ,ಗ್ರಾಮೀಣ ಕೈಗಾರಿಕೆಗೆ ಹೆಚ್ಚಿನ ಒತ್ತು ನೀಡುವ ನಿಟ್ಟಿಲ್ಲಿ ವಿಶೇಷ ಕ್ರಮಗಳನ್ನು ಕೈಗೊಳ್ಳಲಾಗುವುದು;ಈ ಮೂಲಕ ಮಾರುಕಟ್ಟೆ ಒದಗಿಸಲಾಗುವುದು ಎಂದು ಹೇಳಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸುಪ್ರಸಿದ್ಧ ಮನೋರೋಗ ತಜ್ಞ ಡಾ.ಸಿ.ಆರ್.ಚಂದ್ರಶೇಖರ್ ಅವರಿಗೆ ಬಂದಿರುವುದರಿಂದ ಪ್ರಶಸ್ತಿಗೆ ಮೌಲ್ಯ ಬಂದಿದೆ.
ಅವರ ಸೇವೆಯನ್ನು ನಮ್ಮ ಸರಕಾರ ಬಳಸಿಕೊಳ್ಳಲಿದೆ ಎಂದರು.ಗ್ರಾಮಗಳ ಅಭಿವೃದ್ಧಿ ಬಹಳ ಮುಖ್ಯವಾಗಿದ್ದು, ಕರ್ನಾಟಕ ಈ ವಿಷಯದಲ್ಲಿ ಬಹಳ ಮುಂದೆ ಇದೆ.ಹಳ್ಳಿಗಳಲ್ಲಿ ಕೂಡ ಡಿಜಿಟಲ್ ಕ್ರಾಂತಿಯಿಂದ ಬಹಳಷ್ಟು ಅನುಕೂಲಗಳಾಗ್ತಿವೆ.
ತಂತ್ರಜ್ಞಾನ ಕ್ರಾಂತಿಯಿಂದ ಹಳ್ಳಿಗಳಲ್ಲಿ ಸರಕಾರದ ಅನೇಕ ಸೇವೆಗಳನ್ನು ಒದಗಿಸುತ್ತಿದ್ದು,ಇನ್ನಷ್ಟು ಸೇವೆಗಳನ್ನು ಒದಗಿಸಲು ಕ್ರಮವಹಿಸಲಾಗುವುದು ಎಂದರು.ಜನರ ಸುತ್ತಲು ಅಭಿವೃದ್ಧಿಯಾಗಬೇಕು;ಅಭಿವೃದ್ಧಿ ಸುತ್ತಲೂ ಜನ ಸುತ್ತಬಾರದು ಎನ್ನುವ ದೃಷ್ಟಿಕೋನದಿಂದ ನಮ್ಮ ಸರಕಾರ ಕರ್ತವ್ಯ ನಿರ್ವಹಿಸುತ್ತಿದೆ ಎಂದರು.
ಪ್ರಶಸ್ತಿ ಹಣ ನಿಮ್ಹಾನ್ಸ್ ಗೆ ನೀಡಿಕೆ: ಮಹಾತ್ಮಗಾಂಧಿ ಸೇವಾ ಪ್ರಶಸ್ತಿಯಿಂದ ಬಂದ ನಗದನ್ನು ನಿಮ್ಹಾನ್ಸ್ ಗೆ ನೀಡಲಾಗುವುದು ಎಂದು ಪ್ರಶಸ್ತಿ ಪುರಸ್ಕೃತ ಸುಪ್ರಸಿದ್ಧ ಮನೋರೋಗ ತಜ್ಞ ಡಾ.ಸಿ.ಆರ್.ಚಂದ್ರಶೇಖರ್ ಅವರು ಘೋಷಿಸಿದರು.
ನನ್ನ ನಿವೃತ್ತಿಯಿಂದ ನಂತರ ಬಂದ ೧.೦೯ಕೋಟಿ ಮತ್ತು ನನ್ನ ಎರಡು ಮನೆಗಳು ಮತ್ತು ನಿವೇಶನಗಳ ಹಣ ಸಹ ನಿಮ್ಹಾನ್ಸ್ ಗೆ ಒದಗಿಸಲಾಗುವುದು.ಮಾನಸಿಕ ಆರೋಗ್ಯ ಕ್ಷೇತ್ರ ಅತ್ಯಂತ ನಿರ್ಲಕ್ಷಿತ ಕ್ಷೇತ್ರವಾಗಿದ್ದು,ಇದಕ್ಕೆ ವಿಶೇಷ ಒತ್ತು ನೀಡುವ ಕೆಲಸವಾಗಬೇಕು ಎಂದು ಹೇಳಿದ ಅವರು ಮಾನಸಿಕ ಆರೋಗ್ಯ ಸೇವೆಗಳಲ್ಲಿ ಇಡೀ ದೇಶಕ್ಕೆ ಕರ್ನಾಟಕವೇ ಮಾದರಿಯಾಗಿದೆ ಎಂದರು.
ಗಾಂಧಿಭವನ ಪ್ರಕಾಶನದಿಂದ ಹೊರತರಲಾದ ೫ಪುಸ್ತಕಗಳನ್ನು ಹಾಗೂ ಮನೋರೋಗ ತಜ್ಞ ಡಾ.ಸಿ.ಆರ್.ಚಂದ್ರಶೇಖರ್ ಅವರ ಸ್ಕೀಲ್ಸ್ ಫಾರ್ ಸ್ಟೂಡೆಂಟ್ಸ್ ಪುಸ್ತಕವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಈ ಸಂದರ್ಭದಲ್ಲಿ ಬಿಡುಗಡೆ ಮಾಡಿದರು.ಹಲವು ಮಹನೀಯರಿಗೆ ಕರ್ನಾಟಕ ಗಾಂಧಿ ಸ್ಮಾರಕ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಜಲಸಂಪನ್ಮೂಲ ಸಚಿವರಾದ ಗೋವಿಂದ ಕಾರಜೋಳ, ಗೃಹ ಸಚಿವರಾದ ಆರಗ ಜ್ಞಾನೇಂದ್ರ, ಪೌರಾಡಳಿತ ಮತ್ತು ಸಣ್ಣಕೈಗಾರಿಕಾ ಸಚಿವರಾದ ಎಂ.ಟಿ.ಬಿ.ನಾಗರಾಜ,ಶಾಸಕರಾದ ರಾಜೀವ್ ಕುಡಚಿ, ರಾಜ್ಯಸಭಾ ಸದಸ್ಯರಾದ ಡಾ.ಎಲ್.ಹನುಮಂತಯ್ಯ, ಮಾಜಿ ರಾಜ್ಯಸಭಾ ಸದಸ್ಯರಾದ ಎಚ್.ಹನುಮಂತಪ್ಪ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಆಯುಕ್ತರಾದ ಡಾ.ಪಿ.ಎಸ್.ಹರ್ಷ ಸೇರಿದಂತೆ ಕರ್ನಾಟಕ ಗಾಂಧಿಸ್ಮಾರಕ ನಿಧಿಯ ಗೌರವ ಕಾರ್ಯದರ್ಶಿ ಇಂದಿರಾ ಕೃಷ್ಣಪ್ಪ, ಅಧ್ಯಕ್ಷ ವೂಡೇ ಪಿ. ಕೃಷ್ಣ ಮತ್ತಿತರರು ಉಪಸ್ಥಿತರಿದ್ದರು.