ರಾಜ್ಯ

೬೫೦ ಹೊಸ ಬಸ್‌ಗಳ ಖರೀದಿ

ಪ್ರಯಾಣಿಕರಿಗೆ ಹೆಚ್ಚಿನ ಸೌಲಭ್ಯ ಕಲ್ಪಿಸಲು ಸಾರಿಗೆ ಸಂಸ್ಥೆಗೆ ೬೫೦ ಹೊಸ ಬಸ್‌ಗಳನ್ನು ಖರೀದಿಸಲಾಗುತ್ತಿದೆ ಎಂದು ಸಾರಿಗೆ ಸಚಿವ ಬಿ. ಶ್ರೀರಾಮುಲು ವಿಧಾನಸಭೆಯಲ್ಲಿಂದು ಹೇಳಿದರು.

ಪ್ರಶ್ನೋತ್ತರ ಅವಧಿಯಲ್ಲಿ ಕಾಂಗ್ರೆಸ್‌ನ ಈಶ್ವರ್ ಖಂಡ್ರೆ ಪ್ರಶ್ನೆಗೆ ಉತ್ತರಿಸಿದ ಸಚಿವರು, ಕಲ್ಯಾಣ ಕರ್ನಾಟಕ ಭಾಗದಲ್ಲಿ ಶಾಲಾ-ಕಾಲೇಜು ಮಕ್ಕಳಿಗೆ ಸಮರ್ಪಕ ಬಸ್ ವ್ಯವಸ್ಥೆಯನ್ನು ಒದಗಿಸಲು ಕ್ರಮ ಕೈಗೊಂಡಿದ್ದೇವೆ. ಕೋವಿಡ್ ಪೂರ್ವದಲ್ಲಿ ಇದ್ದಂತೆ ಬಸ್‌ಗಳ ಕಾರ್ಯಾಚರಣೆಯನ್ನು ಮಾಡಲಾಗುವುದು ಎಂದರು.ಕಲ್ಯಾಣ ಕರ್ನಾಟಕ ಭಾಗದಲ್ಲಿ ೧೭೯೭ ವಾಹನಗಳು ೯ ಲಕ್ಷ ಕಿ.ಮೀ.

ಗಿಂತ ಹೆಚ್ಚಿನ ಕಿಲೋ ಮೀಟರ್ ಕ್ರಮಿಸಿದ್ದು, ಈ ಬಸ್‌ಗಳನ್ನು ಬದಲಿಸಿ ಹೊಸ ಬಸ್‌ಗಳನ್ನು ನೀಡಲಾಗುವುದು. ಸಂಸ್ಥೆಯ ಆರ್ಥಿಕ ಸ್ಥಿತಿ ಅಷ್ಟೇನು ಉತ್ತಮವಾಗಿಲ್ಲ. ಎಲ್ಲವನ್ನು ಗಮನದಲ್ಲಿಟ್ಟುಕೊಂಡು ಹೊಸ ಬಸ್‌ಗಳನ್ನು ಒದಗಿಸಲಾಗುವುದು ಎಂದರು.ಪ್ರಸ್ತುತ ಸಾರಿಗೆ ಸಂಸ್ಥೆಗೆ ೬೫೦ ಹೊಸ ಬಸ್‌ಗಳ ಖರೀದಿಗೆ ಟೆಂಡರ್ ಕರೆದಿದ್ದೇವೆ.

ಟೆಂಡರ್ ಪ್ರಕ್ರಿಯೆ ಮುಗಿದು ಹೊಸ ಬಸ್‌ಗಳು ಲಭ್ಯವಾದ ನಂತರ ಕಲ್ಯಾಣ ಕರ್ನಾಟಕ ಭಾಗಕ್ಕೂ ಹೊಸ ಬಸ್‌ಗಳನ್ನು ನೀಡುವುದಾಗಿ ಅವರು ಹೇಳಿದರು.ಇದಕ್ಕೂ ಮೊದಲು ಪ್ರಶ್ನೆ ಕೇಳಿದ್ದ ತುಕಾರಾಮ್ ನರಸಿಂಹನಾಯಕ್ ಅವರು ಬಳ್ಳಾರಿ ಹಾಗೂ ಕಲ್ಯಾಣ ಕರ್ನಾಟಕ ಭಾಗದಲ್ಲಿ ಶಾಲಾ-ಕಾಲೇಜು ಮಕ್ಕಳಿಗೆ ತೊಂದರೆಯಾಗದಂತೆ ಬಸ್ ವ್ಯವಸ್ಥೆ ಮಾಡಿ, ಬಸ್‌ಗಳಿಲ್ಲದೆ ಮಕ್ಕಳು ತೊಂದರೆಗೆ ಸಿಲುಕಿದ್ದಾರೆ ಎಂದು ಹೇಳಿದ್ದರು.

ಈ ಸಂದರ್ಭದಲ್ಲಿ ಹಲವು ಸದಸ್ಯರು ಎದ್ದುನಿಂತು ಕಲ್ಯಾಣ ಕರ್ನಾಟಕ ಭಾಗದಲ್ಲಿ ಮಾತ್ರವಲ್ಲ, ಬೆಂಗಳೂರು ಮಹಾನಗರ ಸೇರಿದಂತೆ ಎಲ್ಲಾ ಜಿಲ್ಲೆಗಳಲ್ಲೂ ಸಾರಿಗೆ ಸಂಸ್ಥೆ ಬಸ್‌ಗಳ ಓಡಾಟ ಸಮರ್ಪಕವಾಗಿಲ್ಲ. ಎಲ್ಲಾ ಕಡೆ ಬಸ್‌ಗಳ ತೊಂದರೆಯಿದೆ ಎಂದು ಹೇಳಿದ್ದರು.

ಇದರಿಂದ ಸದನದಲ್ಲಿ ಗೊಂದಲದ ವಾತಾವರಣ ಮೂಡಿತ್ತು.ಸಾರಿಗೆ ಸಚಿವರ ಉತ್ತರದ ನಂತರ ಪರಿಸ್ಥಿತಿ ತಿಳಿಯಾಗಿ ಸಭಾಧ್ಯಕ್ಷರು ಮುಂದಿನ ಪ್ರಶ್ನೋತ್ತರವನ್ನು ಕೈಗೆತ್ತಿಕೊಂಡರು.

Basaveshwara M

Crime reporter, Bangalore

Related Articles

Leave a Reply

Your email address will not be published. Required fields are marked *

Back to top button