ಅಪಘಾತ

೨ ಅಪಘಾತ ೫ ಸಾವು ೩೦ ವಿದ್ಯಾರ್ಥಿಗಳಿಗೆ ಗಾಯ

ತುಮಕೂರು ಸಮೀಪ ಹಾಗೂ ಬೆಳಗಾವಿ ಜಿಲ್ಲೆಯ ಅಥಣಿ ಹೊರವಲಯದಲ್ಲಿ ಸಂಭವಿಸಿದ ಪ್ರತ್ಯೇಕ ರಸ್ತೆ ಅಪಘಾತದಲ್ಲಿ ೫ ಮಂದಿ ಮೃತಪಟ್ಟು ೩೦ಕ್ಕೂ ಹೆಚ್ಚು ವಿದ್ಯಾರ್ಥಿಗಳು ಗಾಯಗೊಂಡಿರುವ ಧಾರುಣ ಘಟನೆ ನಡೆದಿದೆ.ಮುಂದೆ ಚಲಿಸುತ್ತಿದ್ದ ವಾಹನದ ಹಿಂಬದಿಗೆ ಕಾರು ಅಪ್ಪಳಿಸಿದ ಪರಿಣಾಮ ತಂದೆ,

ಮಗಳು ಸೇರಿ ಮೂರು ಮಂದಿ ಸಾವನ್ನಪ್ಪಿರುವ ಘಟನೆ ಸಿರಾ ತಾಲ್ಲೂಕು ಕಳ್ಳಂಬೆಳ್ಳಂ ಪೊಲೀಸ್ ಠಾಣೆ ಸರಹದ್ದಿನಲ್ಲಿ ತಡರಾತ್ರಿ ನಡೆದಿದ್ದರೆ, ಬೆಳಗಾವಿ ಜಿಲ್ಲೆಯ ಅಥಣಿಯಲ್ಲಿ ಶಾಲಾ ಬಸ್ ಹಾಗೂ ಕ್ಯಾಂಟರ್ ಮುಖಾಮುಖಿ ಡಿಕ್ಕಿ ಎರಡು ವಾಹನಗಳ ಚಾಲಕರು ಸ್ಥಳದಲ್ಲಿ ಮೃತಪಟ್ಟು ೩೦ಕ್ಕೂ ಹೆಚ್ಚು ವಿದ್ಯಾರ್ಥಿಗಳು ಗಾಯಗೊಂಡಿದ್ದು ಇದರಲ್ಲಿ ೧೦ ವಿದ್ಯಾರ್ಥಿಗಳು ತೀವ್ರವಾಗಿ ಗಾಯಗೊಂಡಿದ್ದಾರೆ.

ಸಿರಾ ತಾಲ್ಲೂಕು ಕಡವಿಗೆರೆ ಗ್ರಾಮದ ರಾಜಣ್ಣ ಎಂಬುವರ ಪುತ್ರ ಹಾಗೂ ಲಾರಿ ಚಾಲಕ ಅವಿನಾಶ್ (೨೮), ಈತನ ಪುತ್ರಿ ಪ್ರಣತಿ (೫) ಹಾಗೂ ಸಂಬಂಧಿಕರಾದ ಕಾಟಯ್ಯ ಎಂಬುವರ ಪುತ್ರಿ ಸೌಖ್ಯ (೪) ಮೃತಪಟ್ಟಿರುವ ದುರ್ದೈವಿಗಳು.ಅವಿನಾಶ್ ಕಾರಿನಲ್ಲಿ ತನ್ನ ಪುತ್ರಿ ಹಾಗೂ ಸಂಬಂಧಿಕರ ಪುತ್ರಿಯನ್ನು ಕರೆದುಕೊಂಡು ತಡರಾತ್ರಿ ತುಮಕೂರು ಕಡೆಗೆ ಕಾರಿನಲ್ಲಿ ಬರುತ್ತಿದ್ದರು.

ಮಾರ್ಗಮಧ್ಯೆ ತರೂರು ಗೇಟ್ ಬಳಿ ಕಾರು ಚಾಲಕನ ನಿಯಂತ್ರಣ ತಪ್ಪಿ ಮುಂದೆ ಚಲಿಸುತ್ತಿದ್ದ ಅಪರಿಚಿತ ವಾಹನದ ಹಿಂಬದಿಗೆ ಅಪ್ಪಳಿಸಿದ್ದರಿಂದ ಅವಿನಾಶ್ ಮತ್ತು ಪುತ್ರಿ ಪ್ರಣತಿ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.

ತೀವ್ರವಾಗಿ ಗಾಯಗೊಂಡಿದ್ದ ಸೌಖ್ಯಳನ್ನು ಚಿಕಿತ್ಸೆಗಾಗಿ ತುಮಕೂರು ಆಸ್ಪತ್ರೆಗೆ ಕೊಂಡೊಯ್ಯುವ ಮಾರ್ಗಮಧ್ಯೆ ಅಸುನೀಗಿದ್ದಾಳೆ.ಕಾರು ಅಪರಿಚಿತ ವಾಹನದ ಹಿಂಬದಿಗೆ ಅಪ್ಪಳಿಸಿದ ರಭಸಕ್ಕೆ ಸಂಪೂರ್ಣ ನಜ್ಜುಗುಜ್ಜಾಗಿದೆ.ಈ ಸಂಬಂಧ ಕಳ್ಳಂಬೆಳ್ಳ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಅಥಣಿ ವರದಿಶಾಲಾ ವಿದ್ಯಾರ್ಥಿಗಳಿದ್ದ ಬಸ್ ಹಾಗೂ ಸರಕು ಸಾಗಣೆಯ ಕ್ಯಾಂಟರ್ ಮಧ್ಯೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಎರಡು ವಾಹನಗಳ ಇಬ್ಬರ ಚಾಲಕರು ಸ್ಥಳದಲ್ಲಿ ಮೃತಪಟ್ಟು ೧೦ಕ್ಕೂ ವಿದ್ಯಾರ್ಥಿಗಳು ತೀವ್ರವಾಗಿ ಗಾಯಗೊಂಡಿದ್ದಾರೆ.

ಆಥಣಿ ಹೊರವಲಯದಲ್ಲಿ ವಿದ್ಯಾರ್ಥಿಗಳನ್ನು ಶಾಲೆಗೆ ಕರೆದೊಯ್ಯತ್ತಿದ್ದ ಶಾಲಾ ಬಸ್ ಹಾಗೂ ಕ್ಯಾಂಟರ್ ಮುಖಾಮುಖಿ ಡಿಕ್ಕಿ ಹೊಡೆದ ರಭಸಕ್ಕೆ ವಾಹನಗಳು ತೀವ್ರ ಜಖಂಗೊಂಡಿದ್ದು ಎರಡು ವಾಹನಗಳ ಚಾಲಕರು ಸ್ಥಳದಲ್ಲಿ ಅಸುನೀಗಿದ್ದಾರೆ.

ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ೫೦ ವಿದ್ಯಾರ್ಥಿಗಳ ಪೈಕಿ ೧೦ ವಿದ್ಯಾರ್ಥಿಗಳು ಗಂಭೀರವಾಗಿ ಗಾಯಗೊಂಡಿದ್ದರೆ, ೨೦ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಸಣ್ಣಪುಟ್ಟ ಗಾಯಗಳಾಗಿವೆ.

ಗಾಯಗೊಂಡ ವಿದ್ಯಾರ್ಥಿಗಳನ್ನು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ ಎಂದು ಬೆಳಗಾವಿ ಜಿಲ್ಲಾ ಎಸ್.ಪಿ. ಡಾ. ಸಂಜೀವ ಪಾಟೀಲ್ ರವರು ತಿಳಿಸಿದ್ದಾರೆ.ಅಪಘಾತದಿಂದ ಭಯ-ಭೀತರಾದ ವಿದ್ಯಾರ್ಥಿಗಳ ಆಕ್ರಂದನ ಮುಗಿಲು ಮುಟ್ಟಿದೆ.

ಕಣ್ಣೇದುರಿಗೆ ಎರಡು ವಾಹನಗಳ ಚಾಲಕರು ಅಸುನೀಗಿ ಗಾಯಗೊಂಡ ವಿದ್ಯಾರ್ಥಿಗಳ ನರಳಾಟ ಕಂಡು ವಿದ್ಯಾರ್ಥಿಗಳು ಕಣ್ಣೀರು ಸುರಿಸಿ ಗೋಳಾಡುತ್ತಿದದ್ದು ಕಂಡು ಬಂತು.ಬಸ್‌ನಲ್ಲಿ ಸಿಲುಕಿದ್ದ ವಿದ್ಯಾರ್ಥಿಗಳನ್ನು ಸ್ಥಳೀಯರ ಸಹಾಯದಿಂದ ಪೊಲೀಸರು ಕೆಳಗಿಳಿಸಿದ್ದಾರೆ.

ಅಪಘಾತದ ಸುದ್ದಿ ತಿಳಿಯುತ್ತಿದ್ದಂತೆ ವಿದ್ಯಾರ್ಥಿಗಳ ಪೋಷಕರು ದಾವಂತದಿಂದ ಸ್ಥಳಕ್ಕೆ ಆಗಮಿಸಿದ ತಮ್ಮ ಮಕ್ಕಳ ಯೋಗಕ್ಷೇಮ ವಿಚಾರಿಸಿ, ಗಾಯಗೊಂಡ ವಿದ್ಯಾರ್ಥಿಗಳ ಪರಿಸ್ಥಿತಿ ಕಂಡು ಕಣ್ಣೀರು ಸುರಿಸಿದರು.

ಅಪಘಾತ ನಡೆದ ಸ್ಥಳದಲ್ಲಿ ಜನಜಂಗುಳಿ ಸೇರಿದ್ದು ಜನರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ನಡೆಸಿದರು.

Basaveshwara M

Crime reporter, Bangalore

Related Articles

Leave a Reply

Your email address will not be published. Required fields are marked *

Back to top button