ರಾಜ್ಯ

೧೫ ದಿನ ಹಾಸನಾಂಬದೇವಿ ದರ್ಶನ

ಪ್ರತಿ ವರ್ಷದಂತೆ ಈ ವರ್ಷವೂ ಪ್ರಸಿದ್ಧ ಹಾಸನಾಂಬ ದೇವಿ ವರ್ಷಕೊಮ್ಮೆ ಮಾತ್ರ ಭಕ್ತರಿಗೆ ದರ್ಶನ ಭಾಗ್ಯಕ್ಕೆ ಅವಕಾಶವಿರುತ್ತದೆ.ವರ್ಷಕೊಮ್ಮೆ ದರ್ಶನ ನೀಡುವ ಇತಿಹಾಸ ಪ್ರಸಿದ್ಧ ಹಾಸನಾಂಬ ದೇವಿ ಜಾತ್ರಾ ಮಹೋತ್ಸವಕ್ಕೆ ಕ್ಷಣಗಣನೆ ಆರಂಭವಾಗಿದ್ದು , ಈ ಬಾರಿ ೧೫ ದಿನಗಳ ದರ್ಶನ ಭಾಗ್ಯ ಭಕ್ತರಿಗೆ ಲಭ್ಯವಾಗಲಿದೆ.

ಮಹಾಮಾರಿ ಕೊರೊನಾ ಹಿನ್ನೆಲೆಯಲ್ಲಿ ಕಳೆದ ಮೂರು ವರ್ಷಗಳಿಂದ ಸರಳವಾಗಿ ನಡೆದಿದ್ದ ಹಾಸನಾಂಬ ಜಾತ್ರೆ ಈ ಬಾರಿ ಅದ್ಧೂರಿಯಾಗಿ ನಡೆಸಲು ನಿರ್ಧಾರಿಸಲಾಗಿದೆ.ಆಶ್ವಿಜ ಮಾಸದ ಶುಕ್ಲ ಪಕ್ಷದ ಮೊದಲ ಗುರುವಾರದಂದು ಹಾಸನಾಂಬೆಯ ಬಾಗಿಲು ತೆರೆದು ಬಲಿಪಾಡ್ಯಮಿಯ ಮಾರನೇ ದಿನ ಶಾಸ್ತ್ರೋಕ್ತವಾಗಿ ಗರ್ಭಗುಡಿಗೆ ಬಾಗಿಲು ಹಾಕಲಾಗುತ್ತದೆ.

ಈ ಬಗ್ಗೆ ಮಾತನಾಡಿದ ಶಾಸಕ ಪ್ರೀತಂ ಜೆ. ಗೌಡ,ಈ ಬಾರಿ ೧೫ ದಿನಗಳ ಕಾಲ ದೇವಾಲಯದ ಬಾಗಿಲು ತೆರೆಯಲಿದೆ. ಅಕ್ಟೋಬರ್ ೧೩ರ ಮೊದಲ ದಿನ, ಅ. ೨೫ರ ಸೂರ್ಯ ಗ್ರಹಣದ ದಿನ ಮತ್ತು ೨೭ನೇ ಕೊನೆಯ ದಿನದಂದು ಸಾರ್ವಜನಿಕರಿಗೆ ದರ್ಶನ ಭಾಗ್ಯ ಇರುವುದಿಲ್ಲ. ಇನ್ನುಳಿದಂತೆ, ಭಕ್ತರಿಗೆ ಯಾವ ರೀತಿಯಲ್ಲೂ ಅಡಚಣೆಯಾಗದಂತೆ ನಿಗಾ ವಹಿಸಲಾಗುವುದು.

ಮುಖ್ಯ ಅತಿಥಿಗಳು, ಗಣ್ಯರು ಬಂದಾಗಲೂ ಯಾವುದೇ ಸಮಸ್ಯೆ ಆಗದಂತೆ ಸಾರ್ವಜನಿಕರಿಗೆ ದರ್ಶನ ಭಾಗ್ಯ ನೀಡುವ ವ್ಯವಸ್ಥೆ ಮಾಡಲಾಗುತ್ತದೆ” ಎಂದರು.ಮುಂದಿನ ಎರಡು ಮೂರು ದಿನಗಳಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ ಸೇರಿದಂತೆ ಜಿಲ್ಲೆಯ ಶಾಸಕರು ಹಾಗೂ ಜನಪ್ರತಿನಿಧಿಗಳ ನೇತೃತ್ವದಲ್ಲಿ ಸಲಹೆ ಮತ್ತು ಮಾರ್ಗದರ್ಶನ ಪಡೆದುಕೊಂಡು ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಒಳಗೊಂಡಂತೆ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಹಾಗೂ ಕಾಂಗ್ರೆಸ್-ಜೆಡಿಎಸ್ ಪಕ್ಷದ ನಾಯಕರು ಸೇರಿ ಎಲ್ಲಾ ಜನಪ್ರತಿನಿಧಿಗಳನ್ನು ಜಿಲ್ಲಾಡಳಿತದ ಪರವಾಗಿ ಆಹ್ವಾನಿಸಲಾಗುವುದು ಎಂದು ಮಾಹಿತಿ ನೀಡಿದರು.ಜಿಲ್ಲಾಧಿಕಾರಿ ಅರ್ಚನಾ ಮಾತನಾಡಿ, ಈ ಹಿಂದೆ ಸಾರ್ವಜನಿಕರಿಗೆ ಕೆಲ ಸಮಸ್ಯೆ ಆಗಿದ್ದು ಈ ವರ್ಷ ಮೊದಲೇ ಸಭೆ ಮಾಡಲಾಗಿದೆ.

ಹಾಸನಾಂಬ ದೇವಿ ದರ್ಶನದಲ್ಲಿ ಯಾವುದೇ ಲೋಪಬಾರದಂತೆ ಏನೇನು ತಯಾರಿ ಮಾಡಿಕೊಳ್ಳಬಹುದು ಎಂಬ ಬಗ್ಗೆ ಚರ್ಚಿಸಲಾಗಿದೆ. ಇದೇ ಸೋಮವಾರದಿಂದಲೇ ನಮ್ಮ ಆಡಳಿತಾಧಿಕಾರಿಗಳು ಎಲ್ಲಾ ತಯಾರಿ ಪ್ರಾರಂಭಿಸಲಿದ್ದಾರೆ.

ಶನಿವಾರ ದೇವಾಲಯದ ವೀಕ್ಷಣೆ ಮಾಡಿ ಮಾಹಿತಿ ಪಡೆದಿದ್ದು, ಜನಸಂದಣೆ ಹೆಚ್ಚಾಗುವುದರಿಂದ ತೊಂದರೆ ಆಗದಂತೆ ದೇವರ ದರ್ಶನ ನೀಡುವುದು ನಮ್ಮ ಉದ್ದೇಶ ಎಂದಿದ್ದಾರೆ.

Basaveshwara M

Crime reporter, Bangalore

Related Articles

Leave a Reply

Your email address will not be published. Required fields are marked *

Back to top button