ಹೊಸ ವರ್ಷಾಚರಣೆ ಎಲ್ಲೆಡೆ ಖಾಕಿ ಕಣ್ಗಾವಲು

ಕೊರೊನ ಮಹಾಮಾರಿ ಹಿನ್ನಲೆಯಲ್ಲಿ ಎರಡು ವರ್ಷಗಳ ಬಳಿಕ ನಗರದಲ್ಲಿ ಹೊಸ ವರ್ಷದ ಸಂಭ್ರಮಾಚರಣೆಗೆ ದಿನಗಣನೆ ಆರಂಭಗೊಂಡಿರುವ ಬೆನ್ನಲ್ಲೇ ಭದ್ರತಾ ಹೊಣೆಯನ್ನು ಹೆಚ್ಚುವರಿ ಪೊಲೀಸ್ ಆಯಕ್ತರು,ಡಿಸಿಪಿ,ಎಸಿಪಿ ಹಾಗೂ ಇನ್ಸ್‌ಪೆಕ್ಟರ್‌ಗಳಿಗೆ ನಗರ ಪೊಲೀಸ್ ಆಯುಕ್ತಪ್ರತಾಪ್ ರೆಡ್ಡಿ ಅವರು ನೀಡಿದ್ದಾರೆ.
ಹೊಸ ವರ್ಷದ ಹೊಸವರ್ಷದ ಸಂಭ್ರಮಾಚರಣೆ ವೇಳೆ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲು ೩೫ ಅಂಶಗಳನ್ನು ಒಳಗೊಂಡ ಪಟ್ಟಿಯನ್ನು ಕೆಳಹಂತದ ಅಧಿಕಾರಿಗಳಿಗೆ ನೀಡಿದ್ದಾರೆ.
ಆಯಾ ವಲಯ, ವಿಭಾಗದ ಬಂದೂಬಸ್ಥ್ ಗೆ ರೂಪಿಸಿರುವ ಪಟ್ಟಿಯಲ್ಲಿನ ೩೫ ಅಂಶಗಳನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ.ಉಪ ಪೊಲೀಸ್ ಆಯುಕ್ತರುಗಳು ತಮ್ಮ ಅಧೀನದ ಎಲ್ಲಾ ಪೊಲೀಸ್ ಠಾಣೆಗಳಿಗೆ ಇಲಾಖಾ ವತಿಯಿಂದ ಹಂಚಿಕೆಯಾಗಿರುವ ಎಲ್ಲಾ ದ್ವಿ-ಚಕ್ರ ವಾಹನಗಳನ್ನು ಮೊಬೈಲ್ ಪೆಟ್ರೋಲಿಂಗ್ ವಾಹನಗಳನ್ನಾಗಿ ಉಪಯೋಗಿಸಿ ಸೂಕ್ತ ಗಸ್ತು ನಿರ್ವಹಿಸುವ ಬಗ್ಗೆ ಕ್ರಮ ಕೈಗೊಳ್ಳಬೇಕು.
ಉಪ ಪೊಲೀಸ್ ಆಯುಕ್ತರುಗಳು ಹೊಸ ವರ್ಷಾಚರಣೆ ಬಂದೋಬಸ್ತ್ ಯೋಜನೆಯಲ್ಲಿ ವಲಯವಾರು ಬಂದೋಬಸ್ತ್ ಮತ್ತು ಸೆಕ್ಟರ್ ಮೊಬೈಲ್‌ಗಳನ್ನು ಕರ್ತವ್ಯಕ್ತಿ ನಿಯೋಜಿಸಿ, ಅವುಗಳಿಗೆ ನಿಗದಿತ ಸಮಯ ಹಾಗೂ ನಿಗದಿತ ರೂಟ್ ಅನ್ನು ಕೊಟ್ಟು, ಸೆಕ್ಟರ್ ಪೆಟ್ರೋಲಿಂಗ್ ಅನ್ನು ವ್ಯವಸ್ಥಿತವಾಗಿ ಏರ್ಪಡಿಸಲು ಸೂಚಿಸಲಾಗಿದೆ.ಹೊಸ ವರ್ಷಾಚರಣೆಯನ್ನು ವಿರೋಧಿಸುವ ಸಂಘ ಸಂಸ್ಥೆಗಳ ಬಗ್ಗೆ ಮುಂಗಡವಾಗಿ ಮಾಹಿತಿ ಸಂಗ್ರಹಿಸಿ ಅಂತಹ ಸಂಘ ಸಂಸ್ಥೆಗಳ ಚಲನವಲನಗಳ ಬಗ್ಗೆ ಗುಪ್ತ ಮಾಹಿತಿ ಸಂಗ್ರಹಿಸಿ, ಅಗತ್ಯ ಮುನ್ನೆಚ್ಚಕ ಕ್ರಮಗಳನ್ನು ಕೈಗೊಳ್ಳುವುದು.ಉಪ ಪೊಲೀಸ್ ಆಯುಕ್ತರುಗಳು ಎಲ್ಲಾ ಮಾಲ್‌ಗಳ ವ್ಯವಸ್ಥಾಪಕರಿಗೆ ಲಿಖಿತವಾದ ಸೂಚನೆ ನೀಡಿ, ಅವರುಗಳು ಮಾಲ್‌ಗಳಿಗೆ ಒಳಬರುವ ವ್ಯಕ್ತಿಗಳ ವೈಯಕ್ತಿಕ ಶೋಧನೆ ಹಾಗೂ ಅವರುಗಳ ಲಗೇಜುಗಳ ಪರಿಶೀಲನೆಯನ್ನು ಹೆಚ್.ಹೆಚ್.ಎಂಡಿ/ಡಿ.ಎಫ್.ಎಂ.ಡಿ. ಇವುಗಳನ್ನು ಅಳವಡಿಸಿ ಪರಿಶೀಲನೆ ಮಾಡುವ ಅಗತ್ಯತೆ ಬಗ್ಗೆ ಮತ್ತೊಮ್ಮೆ ತಿಳಿಸುವುದು.
ಮಾಲ್‌ಗಳಲ್ಲಿ ಅಳವಡಿಸಿರುವ ಸಿ.ಸಿ.ಕ್ಯಾಮೆರಾಗಳು ಸುಸ್ಥಿತಿಯಲ್ಲಿರುವ ಬಗ್ಗೆ, ಮಾಲ್‌ಗಳಿಗೆ ಆಗಮಿಸುವ ವಾಹನಗಳನ್ನೂ ಸಹ ಸೂಕ್ತವಾಗಿ ಪರಿಶೀಲಿಸಿದ ನಂತರ ಒಳಪ್ರವೇಶಿಸಲು ಅನುಮತಿ ನೀಡುವ ಬಗ್ಗೆ ಸಂಬಂಧಪಟ್ಟ ಮಾಲ್‌ಗಳ ಮಾಲೀಕರುಗಳಿಗೆ ಸೂಕ್ತ ತಿಳುವಳಿಕೆ ನೀಡುವುದು.ಎಲ್ಲಾ ಪಿಐರವರುಗಳು ತಮ್ಮ ಠಾಣಾ ವ್ಯಾಪ್ತಿಯಲ್ಲಿ ಡಿ.೩೧ ರಂದು ರಾತ್ರಿ ಸೂಕ್ತ ಬಂದೋಬಸ್ತ್ ವ್ಯವಸ್ಥೆ ಮಾಡಿಕೊಂಡು ಮೇಲುಸ್ತುವಾರಿ ವಹಿಸುವುದು.
ಬಂದೋಬಸ್ತ್‌ಗೆ ನೇಮಕವಾದ ಸಿಬ್ಬಂದಿ ಮೇಲಾಧಿಕಾರಿಗಳ ಆದೇಶವಿಲ್ಲದೆ ಸ್ಥಳವನ್ನು ಬಿಡಬಾರದು.ಠಾಣಾ ವ್ಯಾಪ್ತಿಯಲ್ಲಿ ಪ್ರಮುಖ ಸ್ಥಳಗಳಲ್ಲಿ ವಾಹನ ತಪಾಸಣಾ ಪಾಯಿಂಟ್/ಪಿಕೆಟಿಂಗ್ ಪಾಯಿಂಟ್ ಸಿಬ್ಬಂದಿ ನಿಯೋಜಿಸುವುದು.ಬಂದೋಬಸ್ತ್‌ಗೆ ನೇಮಕ ಮಾಡಿದ ಎಲ್ಲಾ ಅಧಿಕಾರಿಗಳು ಸರ್ವೀಸ್ ರಿವಾಲ್ವಾರ್ ಹೊಂದಿರತಕ್ಕದ್ದು ಹಾಗೂ ಸಿಬ್ಬಂದಿ ಹೆಲೈಟ್ ಮತ್ತು ಲಾಠಿಗಳನ್ನು ಹೊಂದಿರತಕ್ಕದ್ದು.
ಎಲ್ಲಾ ಸಿಬ್ಬಂದಿ, ಅಧಿಕಾರಿಗಳು ಜೆರ್ಸಿ ಹಾಗೂ ರೈನ್ ಕೋಟ್ ಹೊಂದಿರತಕ್ಕದ್ದು.ರಾತ್ರಿ ಸಮಯದಲ್ಲಿ ಸಾರ್ವಜನಿಕರು ಮದ್ಯಪಾನ ಸೇವಿಸಿ ಬರುವ ಸಂಭವವಿರುವುದರಿಂದ ಅಧಿಕಾರಿ ಮತ್ತು ಸಿಬ್ಬಂದಿ ಸೌಜನ್ಯದಿಂದ ವರ್ತಿಸಿ ಯಾವುದೇ ಅಹಿತಕರ ಘಟನೆಗಳು ಜರುಗದಂತೆ ಕಟ್ಟೆಚ್ಚರ ವಹಿಸುವುದು.ಪ್ರಮುಖವಾಗಿ ಎಂ.ಜಿ.ರಸ್ತೆ ಹಾಗೂ ಬ್ರಿಗೇಡ್ ರಸ್ತೆಗಳಲ್ಲಿ ಹೆಚ್ಚಿನ ಜನಸಂದಣಿ ಇರುತ್ತದೆ.
ಇಂತಹ ಸಮಯದಲ್ಲಿ ಕಿಸೆ ಕಳ್ಳತನ, ಸರ ಅಪಹರಣ ಇತ್ಯಾದಿಗಳು ನಡೆಯುವ ಸಾಧ್ಯತೆಗಳಿರುವುದರಿಂದ ಅಧಿಕಾರಿ ಮತ್ತು ಸಿಬ್ಬಂದಿ, ಸಂಶಯಾಸ್ಪದ ವ್ಯಕ್ತಿಗಳ ಮೇಲೆ ತೀವ್ರ ನಿಗಾವಹಿಸುವುದು ಮತ್ತು ಸಾರ್ವಜನಿಕರ ಜೊತೆ ಸೌಜನ್ಯದಿಂದ ವರ್ತಿಸುವುದು.ಹೆಣ್ಣು ಮಕ್ಕಳನ್ನು ಚುಡಾಯಿಸುವವರ ವಿರುದ್ಧ ಕೂಡಲೇ ಗಮನಹರಿಸಿ ಕಾನೂನಿನಡಿಯಲ್ಲಿ ಬಂಧನಕ್ಕೆ ಒಳಗಾಗಿಸುವುದು.ಕುಡಿದು ರಸ್ತೆಗಳ ಮೇಲೆ ಬಾಟಲಿಗಳನ್ನು ಹೊಡೆದು/ಎಸೆದು ದಾಂಧಲೆ ಮಾಡುವವರನ್ನು ಕೂಡಲೇ ವಶಕ್ಕೆ ಪಡೆದು ಅಗತ್ಯ ಕಾನೂನು ಕ್ರಮ ಜರುಗಿಸುವುದು.
ಮದ್ಯ ಮಾರಾಟ ಮಾಡುವ ಎಲ್ಲಾ ಸ್ಥಳಗಳ ಮಾಲೀಕರಿಗೆ ಕಲಂ.೨೧ ಕರ್ನಾಟಕ ಅಬಕಾರಿ ಕಾಯ್ದೆ ಅಡಿಯಲ್ಲಿ ನೋಟಿಸ್ ಅನ್ನು ಜಾರಿ ಮಾಡುವುದು. ಸದರಿ ಅಂಗಡಿಗಳಲ್ಲಿ/ ಅದರ ಸಮೀಪದಲ್ಲಿ ಆಗುವ ಗಲಾಟೆ, ದೊಂಬಿ, ಮಹಿಳೆಯರನ್ನು ಚುಡಾಯಿಸುವುದು, ಬಾಟಲಿಗಳನ್ನು ಎಸೆಯುವುದು ಇತ್ಯಾದಿಗಳು ನಡೆದರೆ ಅವರನ್ನೇ ಹೊಣೆಗಾರರೆಂದು ಮಾಡಲಾಗುವುದು ಎಂದು ತಿಳಿಸತಕ್ಕದ್ದು.
ಜನರು ಸೇರುವ ರಸ್ತೆಗಳನ್ನು ಮತ್ತು ಪ್ರದೇಶಗಳನ್ನು ಗುರುತಿಸಿ ರಾತ್ರಿ ವೇಳೆಯಲ್ಲಿ ರೆಕಾರ್ಡ್ ಆಗುವಂತಹ ಸಿಸಿಟಿವಿ. ಕ್ಯಾಮೆರಾಗಳನ್ನು ಅಳವಡಿಸುವುದು.ಎಲ್ಲಾ ರಸ್ತೆಗಳಲ್ಲಿ ವಿದ್ಯುತ್ ದೀಪಗಳು ಕೆಲಸ ಮಾಡುವಂತೆ ಖಚಿತಪಡಿಸಿಕೊಳ್ಳುವುದು ಮತ್ತು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳನ್ನು ಸಂಪರ್ಕಿಸಿ ಅಗತ್ಯ ಕ್ರಮ ಕೈಗೊಳ್ಳುವುದು.ಡಿ.೩೧ ರಂದು ಸಂಜೆ ೬ ಗಂಟೆಯಿಂದ ಮರುದಿನ ಜ.೧ರ ವರೆಗೆ ಬೆಳಗ್ಗೆ ೬ ಗಂಟೆವರೆಗೆ ಎಲ್ಲಿಯೂ ವಿದ್ಯುತ್ ಕಡಿತವಾಗದಂತೆ ಬೆಸ್ಕಾಂ ಅಧಿಕಾರಿಗಳೊಂದಿಗೆ ಸಮಾಲೋಚಿಸುವುದು.
ಜನ ಹೆಚ್ಚಿಗೆ ಸೇರುವ ರಸ್ತೆಗಳಾದ ಬ್ರಿಗೇಡ್ ರಸ್ತೆ, ಚರ್ಚ್ ಸ್ಟ್ರೀಟ್, ಎಂ.ಜಿ.ರಸ್ತೆ ಮತ್ತು ಇತರೆ ರಸ್ತೆಗಳಲ್ಲಿ ಸ್ಥಳಾವಕಾಶಕ್ಕನುಗುಣವಾಗಿ ಜನರ ಆಗಮನ ಮತ್ತು ನಿರ್ಗಮಿಸಬೇಕೆಂದು ಪ್ರತಾಪ್ ರೆಡ್ಡಿ ಸೂಚಿಸಿದ್ದಾರೆ.