ಹೊಸ ವರ್ಷಾಚರಣೆಗೆ 1 ಲಕ್ಷ ಸಿಸಿಟಿವಿ ಹದ್ದಿನ ಕಣ್ಣು

ಹೊಸ ವರ್ಷಾಚರಣೆಗೆ ಬೆಂಗಳೂರು ಮಹಾನಗರ ಸಿದ್ದಗೊಂಡಿದ್ದು, ನಗರದಾದ್ಯಂತ ಒಂದು ಲಕ್ಷಕ್ಕೂ ಹೆಚ್ಚು ಸಿಸಿ ಟಿವಿಗಳನ್ನು ಅಳವಡಿಸಿ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದಾರೆ. ವರ್ಷಾಚರಣೆ ಸಂದರ್ಭದಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಬಂದೋಬಸ್ತ್‍ಗಾಗಿ ಅಧಿಕಾರಿಗಳು ಸೇರಿದಂತೆ 10 ಸಾವಿರಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
ನಗರದಲ್ಲಿ ರಾತ್ರಿ ಹಲವೆಡೆ ಜನಸಂದಣಿ ಹೆಚ್ಚಾಗಲಿದ್ದು, ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸರು ಕಟ್ಟೆಚ್ಚರವಹಿಸಲಾಗಿದ್ದು, ಸೂಕ್ಷ್ಮವಾಗಿ ಎಲ್ಲವನ್ನು ಗಮನಿಸಲಿದ್ದಾರೆ. ಇಡೀ ನಗರವನ್ನು ಸಿಸಿ ಟಿವಿ ಮತ್ತು ಡ್ರೋನ್ ಕ್ಯಾಮೆರಾದ ಕಣ್ಗಾವಲಿನಲ್ಲಿ ಇರಿಸಲಾಗಿದ್ದು, ನಗರದ ಮೂಲೆ-ಮೂಲೆಗಳಲ್ಲೂ ಸುಮಾರು ಒಂದು ಲಕ್ಷಕ್ಕೂ ಹೆಚ್ಚು ಸಿಸಿಟಿವಿಗಳನ್ನು ಅಳವಡಿಸಲಾಗಿದೆ.
ಸಿಸಿ ಟಿವಿಗಳನ್ನು ನಿಯಂತ್ರಿಸಲು ಪ್ರತ್ಯೇಕ ವಾರ್‍ರೂಮ್ ತೆರೆಯಲಾಗಿದೆ.ಸಿಸಿ ಟಿವಿಯಲ್ಲಿ ಸೆರೆಯಾಗಿರುವ ದೃಶ್ಯವಳಿಗಳನ್ನು ಸಿಬ್ಬಂದಿ ವೀಕ್ಷಿಸುತ್ತಿರುತ್ತಾರೆ. ಯಾವುದೇ ಸ್ಥಳದಲ್ಲಿ ಅಹಿತಕರ ಘಟನೆ, ಅಸಭ್ಯ ವರ್ತನೆ, ಕಳ್ಳತನ, ಇನ್ನಿತರ ಘಟನೆಗಳು ಕಂಡು ಬಂದರೆ ತಕ್ಷಣ ಆ ಸ್ಥಳದಲ್ಲಿರುವ ಅಧಿಕಾರಿಗಳಿಗೆ ಮಾಹಿತಿ ರವಾನೆ ಮಾಡುತ್ತಾರೆ.ಪೊಲೀಸರು ತಕ್ಷಣ ಕಾರ್ಯಪ್ರವೃತ್ತರಾಗಿ ಕ್ರಮ ಕೈಗೊಳ್ಳಲಿದ್ದಾರೆ.
ಎಂಜಿ ರಸ್ತೆ, ಬ್ರಿಗೇಡ್ ರಸ್ತೆ, ಚರ್ಚ್ ಸ್ಟ್ರೀಟ್‍ಗಳಲ್ಲಿ ಹೆಚ್ಚಿನ ಸಿಸಿ ಟಿವಿಗಳನ್ನು ಅಳವಡಿಸಲಾಗಿದೆ. ವಾಚ್ ಟವರ್ಸ್ ಹಾಗೂ ಮಹಿಳೆಯರಿಗೆ ವುಮೆನ್ ಸೇಪ್ಟಿ ಹೌಸ್(ಐಲ್ಯಾಂಡ್) ತೆರೆಯಲಾಗಿದೆ.ಹೊಸ ವರ್ಷಾಚರಣೆ ಸಂದರ್ಭದಲ್ಲಿ ಮಹಿಳೆಯರು ಅಸ್ವಸ್ತಗೊಂಡರೆ, ಅವರ ಆರೋಗ್ಯದಲ್ಲಿ ಏರುಪೇರಾದರೆ ಇಲ್ಲಿ ಅವರಿಗೆ ರಕ್ಷಣೆ ನೀಡಲಾಗುತ್ತದೆ.
ಎಂಜಿ ರಸ್ತೆ ಹಾಗೂ ಬ್ರಿಗೇಡ್ ರಸ್ತೆಗಳಲ್ಲಿ 37ಕ್ಕೂ ಹೆಚ್ಚು ಟವರ್‍ಗಳನ್ನು ತೆರೆಯಲಾಗಿದೆ.ರಾತ್ರಿ 9 ಗಂಟೆಯಿಂದ ನಾಳೆ ಬೆಳಗ್ಗೆ 6 ಗಂಟೆವರೆಗೆ ನಗರದ ಸುಮಾರು 30 ಪ್ಲೈಓವರ್‍ಗಳ ಮೇಲೆ ಸಂಚಾರ ನಿರ್ಬಂಧ ಮಾಡಲಾಗಿದೆ. ಹೊಟೆಲ್, ಪಬ್, ಬಾರ್ ಮುಂತಾದ ಕಟ್ಟಡಗಳ ಮೇಲ್ಚಾವಣಿ ಮೇಲೆ ಪಾರ್ಟಿಗಳನ್ನು ಮಾಡದಂತೆ ಪೊಲೀಸರು ಸೂಚನೆ ನೀಡಿದ್ದಾರೆ.