ಹೊಸ ವರ್ಷಕ್ಕೆ ಕಿಕ್ಕೇರಿಸಿಕೊಳ್ಳಲು ತಂದಿದ್ದ 6 ಕೋಟಿ ಮೌಲ್ಯದ ಡ್ರಗ್ಸ್ ವಶ..!

ನೂತನ ವರ್ಷದ ಸಂಭ್ರಮಾಚರಣೆ ಅಂಗವಾಗಿ ನಗರದಲ್ಲಿ ಮಾದಕವಸ್ತುಗಳನ್ನು ಮಾರಾಟ ಮಾಡಲು ತಯಾರಿ ನಡೆಸಿದ್ದ 8 ಮಂದಿ ಅಂತರ್ರಾಜ್ಯ ಡ್ರಗ್ ಪೆಡ್ಲರ್ಗಳನ್ನು ಸಿಸಿಬಿ ಪೊಲೀಸರು ಬಂಧಿಸಿ ಅಂದಾಜು 6.31 ಕೋಟಿಗೂ ಅಕ ಮೌಲ್ಯದ ಮಾದಕ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಇಬ್ಬರು ಐವರಿಕೋಸ್ಟ್, ಕೋಸ್ಟರಿಕ ದೇಶದ ಡ್ರಗ್ ಪೆಡ್ಲರ್ಗಳು ಹಾಗೂ 6 ಮಂದಿ ಭಾರತೀಯ ಆರೋಪಿಗಳು ಸೇರಿದಂತೆ 8 ಮಂದಿಯನ್ನು ಬಂಧಿಸಿದ್ದಾರೆ.ಕಾವೊ ಎಸ್ಸೆ ಸಬಾಸ್ಟೀನ್(19), ಆಗ್ಬು ಚಿಕೆ ಅಂಥೋನಿ, ರಾಮಣ್ಣ, ಇರ್ಫಾನ್, ಬಾಷಾ, ಮೊಹಮ್ಮದ್ ಮುಜಾಯಿದ್, ಇಲಿಯಾಜ್ ಬಂಧಿತರು.
2023ನೇ ಹೊಸ ವರ್ಷದ ಸಂಭ್ರಮಾಚರಣೆಯ ಸಂದರ್ಭದಲ್ಲಿ ಡ್ರಗ್ಸ್ ಸೇವನೆ, ಸರಬರಾಜು ಹಾಗೂ ಮಾರಾಟದಲ್ಲಿ ತೊಡಗುವ ಪೆಡ್ಲರ್ಗಳ ಮೇಲೆ ಪೊಲೀಸ್ ಆಯುಕ್ತರ ವಿಶೇಷ ಸೂಚನೆಯಂತೆ ಅಪರಾಧ ವಿಭಾಗದ ಜಂಟಿ ಪೊಲೀಸ್ ಆಯುಕ್ತರು ಹಾಗೂ ಅಪರಾಧ-2 ಉಪಪೊಲೀಸ್ ಆಯುಕ್ತರು ಪೆಡ್ಲರ್ಗಳ ಮೇಲೆ ಹೆಚ್ಚಿನ ನಿಗಾ ಇಟ್ಟು ಕಠಿಣ ಕಾನೂನು ಕ್ರಮ ಜರುಗಿಸುವಂತೆ ಸಿಸಿಬಿ ಮಾದಕ ದ್ರವ್ಯ ನಿಗ್ರಹದಳದ ಎಸಿಪಿ ಅವರ ನೇತೃತ್ವದಲ್ಲಿ ವಿಶೇಷ ತಂಡಗಳನ್ನು ರಚನೆ ಮಾಡಿದ್ದರು.
ಈ ತಂಡವು ಸುಮಾರು ಒಂದು ತಿಂಗಳಿನಿಂದ ಸಂಗ್ರಹಿಸಿದ ಮಾಹಿತಿ ಆಧಾರದ ಮೇಲೆ ವಿಶೇಷ ಕಾರ್ಯಾಚರಣೆ ನಡೆಸಿ ನಗರದ ವಿವಿಧ ಭಾಗಗಳಲ್ಲಿ ನಿಷೇತ ಮಾದಕ ವಸ್ತುಗಳನ್ನು ಮಾರಾಟ ಮಾಡಲು ತಯಾರಿ ನಡೆಸಿದ್ದ, ಇಬ್ಬರು ವಿದೇಶಿ ಪ್ರಜೆಗಳು ಸೇರಿದಂತೆ ಆಂಧ್ರ ಪ್ರದೇಶ ಹಾಗೂ ಬೆಂಗಳೂರಿನ ಕೊತ್ತನೂರು ಬಾಣಸವಾಡಿ ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ಒಟ್ಟು 8 ಮಂದಿ ಡ್ರಗ್ ಪೆಡ್ಲರ್ಗಳನ್ನು ಬಂಧಿಸಿದ್ದಾರೆ.
ಆರೋಪಿಗಳಿಂದ ಅಂದಾಜು 6 ಕೋಟಿಗೂ ಅಕ ಮೌಲ್ಯದ ಮಾದಕ ವಸ್ತುವಾದ 2 ಕೆಜಿ 550 ಗ್ರಾಂ ತೂಕದ ಎಂಡಿಎಂಎ ಕ್ರಿಸ್ಟಲ್, 350 ಎಕ್ಸ್ಟಸಿ ಮಾತ್ರೆಗಳು, 4 ಕೆಜಿ ತೂಕದ ಹ್ಯಾಶಿಸ್ ಆಯಿಲ್, 440 ಗ್ರಾಂ ತೂಕದ ಚರಸ್, 7 ಕೆಜಿ 100 ಗ್ರಾಂ ತೂಕದ ಗಾಂಜಾ ಮತ್ತು ಕೃತ್ಯಕ್ಕೆ ಬಳಸಲಾಗುತ್ತಿದ್ದ ಇತರೆ ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಈ ಎಂಟು ಮಂದಿ ಆರೋಪಿಗಳು ಹೊಸ ವರ್ಷದ ಸಂಭ್ರಮಾಚರಣೆ ಪ್ರಯುಕ್ತ ಹೆಚ್ಚಿನ ಡ್ರಗ್ ಪೆಡ್ಲಿಂಗ್ ಮಾಡಿ ಅಕ್ರಮ ಹಣ ಗಳಿಸುವ ಉದ್ದೇಶದಿಂದ ಗೋವಾ, ದೆಹಲಿ, ಆಂದ್ರಪ್ರದೇಶ, ಹೈದರಾಬಾದ್ ಹಾಗೂ ನಗರದಲ್ಲಿ ನೆಲೆಸಿರುವ ನೈಜೀರಿಯಾ ಡ್ರಗ್ ಪೆಡ್ಲರ್ಗಳಿಂದ ವಿವಿಧ ರೀತಿಯ ನಿಷೇತ ಮಾದಕ ವಸ್ತುಗಳನ್ನು ಖರೀದಿ ಮಾಡಿದ್ದಾರೆ.ಮಾದಕ ವಸ್ತುಗಳನ್ನು ಸಂಗ್ರಹಿಸಿಡುವ ಸಲುವಾಗಿಯೇ ಬಾಡಿಗೆ ಮನೆಯನ್ನು ಪಡೆದು ಶೇಖರಣೆ ಮಾಡಿಟ್ಟುಕೊಂಡಿದ್ದರು.
ಹೊಸ ವರ್ಷದ ಪ್ರಯುಕ್ತ ತಮ್ಮ ಗಿರಾಕಿಗಳಿಗೆ ಅವುಗಳನ್ನು ಮಾರಾಟ ಮಾಡಿ ಹೆಚ್ಚಿನ ಹಣ ಗಳಿಸುವ ಯೋಜನೆ ರೂಪಿಸಿದ್ದರು ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.ಕೊತ್ತನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 6 ಮಂದಿ ಭಾರತೀಯ ಆರೋಪಿಗಳನ್ನು ಬಂಧಿಸಿ 6 ಕೋಟಿ ಮೌಲ್ಯದ 2 ಕೆಜಿ 300 ಗ್ರಾಂ ಎಂಡಿಎಂಎ ಕ್ರಿಸ್ಟಲ್, 95.68 ಗ್ರಾಂ ತೂಕದ 250 ಎಕ್ಸ್ಟಸಿ ಮಾತ್ರೆಗಳು, 4 ಕೆಜಿ ತೂಕದ ಹ್ಯಾಶಿಸ್ ಆಯಿಲ್, 440 ಗ್ರಾಂ ತೂಕದ ಚರಸ್, 7 ಕೆಜಿ 100 ಗ್ರಾಂ ತೂಕದ ಗಾಂಜಾ ಹಾಗೂ ವಾಹನಗಳು ಮತ್ತು ಮೊಬೈಲ್ಗಳನ್ನು ವಶಪಡಿಸಿಕೊಂಡಿದ್ದಾರೆ.
ಬಾಣಸವಾಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಒಬ್ಬ ವಿದೇಶಿ ಪ್ರಜೆಯನ್ನು ಬಂಧಿಸಿ 6 ಲಕ್ಷ ಮೌಲ್ಯದ 11 ಗ್ರಾಂ ಕೊಕೈನ್, 100 ಎಕ್ಸ್ಟಸಿ ಮಾತ್ರೆಗಳು ಹಾಗೂ ವಾಹನಗಳು ಮತ್ತು ಮೊಬೈಲ್ಗಳನ್ನು ವಶಪಡಿಸಿಕೊಳ್ಳಲಾಗಿದೆ.ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಒಬ್ಬ ವಿದೇಶಿ ಪ್ರಜೆಯನ್ನು ಬಂಧಿಸಿ 25 ಲಕ್ಷ ಮೌಲ್ಯದ 250 ಗ್ರಾಂ ತೂಕದ ಎಂಡಿಎಂಎ ಮಾದಕ ವಸ್ತುಗಳನ್ನು ಜಪ್ತಿ ಮಾಡಲಾಗಿದೆ.
ಈ ಸಂಬಂಧ ಕೊತ್ತನೂರು, ಬಾಣಸವಾಡಿ ಮತ್ತು ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿದ್ದು, ಈ ಪ್ರಕರಣಗಳಲ್ಲಿ ಡ್ರಗ್ ಪೆಡ್ಲಿಂಗ್ನಲ್ಲಿ ತೊಡಗಿಕೊಂಡು ತಲೆಮರೆಸಿಕೊಂಡಿರುವ ಆರೋಪಿಗಳ ಪತ್ತೆ ಕಾರ್ಯ ಮುಂದುವರೆದಿದೆ.
ಬಂಧಿತರಾಗಿರುವ ಆರೋಪಿಗಳ ಹಣಕಾಸಿನ ಮೂಲ, ಡ್ರಗ್ ಸರಬರಾಜಿನ ಮೂಲ ಮುಂತಾದವುಗಳ ತನಿಖೆಯನ್ನು ಸಿಸಿಬಿ ಮಾದಕ ದ್ರವ್ಯ ನಿಗ್ರಹ ದಳದ ತಂಡವು ಮುಂದುವರೆಸಿದೆ.