ಹೊಸ ವರ್ಷಕ್ಕೂ ಮುನ್ನ ಬೆಂಗಳೂರು ರಸ್ತೆಗಳು ಗುಂಡಿ ಮುಕ್ತವಾಗಲಿವೆಯಂತೆ..!

ಹೊಸ ವರ್ಷ ಆರಂಭಕ್ಕೂ ಮುನ್ನ ನಗರದ ರಸ್ತೆಗಳನ್ನು ಗುಂಡಿಮುಕ್ತಗೊಳಿಸಲಾಗುವುದು ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಭರವಸೆ ನೀಡಿದ್ದಾರೆ.ನಗರದಲ್ಲಿ ಈಗಾಗಲೇ ರಸ್ತೆ ಗುಂಡಿಗಳನ್ನು ಮುಚ್ಚಲಾಗಿತ್ತು.
ಇತ್ತಿಚೆಗೆ ಬಿದ್ದ ಮಳೆಯಿಂದಾಗಿ ಇನ್ನು ಕೆಲವು ಕಡೆಗಳರಲ್ಲಿ ರಸ್ತೆಗಳಲ್ಲಿ ಗುಂಡಿ ಬಿದ್ದಿರುವುದನ್ನು ಗಂಭೀರವಾಗಿ ಪರಿಗಣಿಸಿ ಡಿ.31ರೊಳಗೆ ಎಲ್ಲ ಗುಂಡಿಗಳನ್ನು ಮುಚ್ಚುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು.
ನಗರದ ಪ್ರಮುಖ ರಸ್ತೆಗಳನ್ನು ಡಿ.31ರೊಳಗೆ ಮುಚ್ಚಲೆ ಬೇಕು. 31 ರ ನಂತರ ಫೀಕ್ಸ್ ಮೈ ಸ್ಟ್ರೀಟ್ ಆಪ್ ರಿಸ್ಟೋರ್ ಮಾಡಲಾಗುವುದು ಎಂದು ಅವರು ಹೇಳಿದರು. ರಸ್ತೆ ಗುಂಡಿ ಮುಚ್ಚುವ ಹೊಣೆ ಹೊರುವ ಸಂಸ್ಥೆಗಳೇ ಮತ್ತೆ ಗುಂಡಿ ಬಿದ್ದಾಗ ಅವುಗಳನ್ನು ಮುಚ್ಚಬೇಕು.
ಒಂದು ವೇಳೆ ಗುಂಡಿ ಮುಚ್ಚಲು ವಿಫಲವಾಗುವಂತಹ ಸಂಸ್ಥೆಗಳ ವಿರುದ್ಧ ಸಂಬಂಧಪಟ್ಟ ಎಂಜಿನಿಯರ್ಗಳು ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದಲ್ಲಿ, ಸ್ಥಳೀಯ ಎಂಜಿನಿಯರ್ಗಳ ವೇತನ ಕಡಿತ ಮಾಡಲಾಗುವುದು ಎಂದು ಆಯುಕ್ತರು ಎಚ್ಚರಿಸಿದರು.
ರಸ್ತೆ ಗುಂಡಿ ಹಾಗೂ ರೋಡ್ ಕಟಿಂಗ್ ವಿಚಾರದಲ್ಲಿ ನಿರ್ಲಕ್ಷ್ಯ ತೋರುವ ಎಂಜಿನಿಯರ್ಗಳ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು.
ಗುಣಮಟ್ಟ ಪರಿಶೀಲನೆ: ದೇಶದಲ್ಲೇ ಪ್ರಪ್ರಥಮ ಬಾರಿಗೆ ನಗರದಲ್ಲಿ ನಿರ್ಮಿಸಿರುವ ರ್ಯಾಪಿಡ್ ರಸ್ತೆಯ ಗುಣಮಟ್ಟ ಪರಿಶೀಲನೆ ನಡೆಸಲು ಭಾರತೀಯ ವಿಜ್ಞಾನ ಸಂಸ್ಥೆಗೆ ಮನವಿ ಮಾಡಿಕೊಳ್ಳಲಾಗಿದೆ.
ಅಲ್ಲಿನ ವರದಿ ಬಂದ ನಂತರ ರ್ಯಾಪಿಡ್ ರಸ್ತೆಯ ಸಾಮಥ್ರ್ಯ ತಿಳಿಯಲಿದೆ.ನಂತರವಷ್ಟೇ ಇತರ ಪ್ರದೇಶಗಳಲ್ಲೂ ರ್ಯಾಪಿಡ್ ರಸ್ತೆ ನಿರ್ಮಾಣ ಮಾಡುವ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಅವಧಿ ಪೂರ್ಣಗೊಂಡಿರುವ ಕೊರೊನಾ ಟೆಸ್ಟ್ ಉಪಕರಣಗಳನ್ನು ಬಳಕೆ ಮಾಡುತ್ತಿರುವ ವಿಚಾರ ನನ್ನ ಗಮನಕ್ಕೆ ಬಂದಿಲ್ಲ. ಒಂದು ವೇಳೆ ಅಂತಹ ದೂರು ಬಂದರೆ ಸಂಬಂಧಪಟ್ಟವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು.