
ಚಿತ್ರದುರ್ಗ: ಬಲವಂತದ ಮತಾಂತರಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆಗೆ ನಿರ್ದೇಶನ ನೀಡಲಾಗಿದ್ದು, ಹೊಸ ಕಾಯ್ದೆ ಪ್ರಕಾರ ವಿಶೇಷವಾಗಿ ಕಾರ್ಯಾಚರಣೆ ನಡೆಸಲು ಪೊಲೀಸ್ ಇಲಾಖೆಗೆ ನಿರ್ದೇಶನ ನೀಡಲಾಗಿದ್ದು, ಮುಂದಿನ ದಿನಗಳಲ್ಲಿ ಹೆಚ್ಚಿನ ಪ್ರಕರಣ ದಾಖಲಾಗಲಿವೆ’ ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ಹೇಳಿದರು.
ಜಿಲ್ಲೆ ವ್ಯಾಪ್ತಿಯಲ್ಲಿ ಕಾನೂನು, ಸುವ್ಯವಸ್ಥೆ ಕುರಿತು ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ಪರಿಶೀಲನೆ ನಡೆಸಿದ ನಂತರ ಸುದ್ದಿಗಾರರ ಜತೆ ಮಾತನಾಡಿ ‘ಜಿಲ್ಲೆಯಲ್ಲಿ ಬಲವಂತದ ಮತಾಂತರಕ್ಕೆ ಸಂಬಂಧಿಸಿದಂತೆ ಮೂರು ಪ್ರಕರಣಗಳು ದಾಖಲಾಗಿವೆ. ರಾಜ್ಯದ ಉಳಿದೆಡೆಗೆ ಹೋಲಿಸಿದರೆ ಚಿತ್ರದುರ್ಗ ಜಿಲ್ಲೆಯಲ್ಲಿ ಮತಾಂತರದ ಪ್ರಮಾಣ ಹೆಚ್ಚು. ಈ ಕುರಿತು ಸಂಬಂಧಪಟ್ಟವರು ದೂರು ನೀಡಿದರೆ ಕ್ರಮ ಕೈಗೊಳ್ಳಲಾಗುತ್ತದೆ’ ಎಂದರು.

ಗೂಳಿಹಟ್ಟಿ ಶೇಖರ್ ತಾಯಿಯವರ ಮತಾಂತರ ನಮಗೊಂದು ಉದಾಹರಣೆ ಆಯಿತು. ಇದರ ಪರಿಣಾಮವಾಗಿ ಗಂಭೀರವಾಗಿ ಆಲೋಚನೆ ಮಾಡಿ, ಮತಾಂತರ ನಿಷೇಧ ಕಾಯ್ದೆ ತಂದಿದ್ದೇವೆ ಎಂದು ಹೇಳಿದ ಸಚಿವರು‘ಜಿಲ್ಲೆಯಲ್ಲಿ ಮತಾಂತರ ಪ್ರಮಾಣ ಹೆಚ್ಚಾಗಿರುವುದರ ಕುರಿತು ಸಮಾಜ ಕಲ್ಯಾಣ ಇಲಾಖೆ ಆರ್ಥಿಕ ಹಾಗೂ ಸಾಮಾಜಿಕ ಸಮೀಕ್ಷೆ ನಡೆಸಬೇಕು’ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಮತಾಂತರ ಆಗಲೇಬಾರದೆಂದೇನೂ ಇಲ್ಲ. ಸಂವಿಧಾನದಲ್ಲಿ ಅದಕ್ಕೆ ಅವಕಾಶ ಇದೆ. ಮತಾಂತರ ಆಗುವವರು ಅಧಿಕೃತವಾಗಿ ಆಗಬೇಕು. ಡಿಸಿಯವರಿಗೆ 30 ದಿನ ಮೊದಲೇ ಅರ್ಜಿ ಕೊಡಬೇಕು. ಮತಾಂತರ ಮಾಡುವವರು ಇಂತಹವರನ್ನು ಮತಾಂತರ ಮಾಡುತ್ತಿದ್ದೇವೆ ಎಂದು 30 ದಿನ ಮೊದಲೇ ಅರ್ಜಿ ಕೊಡಬೇಕು. ಅರ್ಜಿಯನ್ನು ಡಿಸಿ ವಿಚಾರಣೆ ನಡೆಸಿ, ಮತಾಂತರ ಆಗುವವರು ಯಾವುದೇ ಅಮಿಷ, ಬಲವಂತಕ್ಕೆ ಒಳಗಾಗಿಲ್ಲ ಎಂಬುದನ್ನು ಖಾತ್ರಿ ಮಾಡಿ ಕೊಂಡು ಅನುಮತಿ ನೀಡಲಿದ್ದಾರೆ. ಆಗ ಮತಾಂತರ ಆಗಬಹುದು’ ಎಂದರು.
‘ಮತಾಂತರ ಆದ ಮೇಲೆ ತಹಸೀಲ್ದಾರ್, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ‘ಎಲ್ಲರಿಗೂ ಮಾಹಿತಿ ನೀಡುತ್ತಾರೆ. ಆದರೆ, ಎಸ್.ಸಿ., ಎಸ್.ಟಿ. ಮೊದಲಾದ ಅವರ ಮೂಲ ಜಾತಿಯ ಹೆಸರಿನಲ್ಲಿ ಸರಕಾರದಿಂದ ಪಡೆದ ಎಲ್ಲ ಸೌಲಭ್ಯಗಳನ್ನು (ಸರಕಾರಿ ನೌಕರಿ, ಬಡ್ತಿ ಮುಂತಾದವು) ಸೌಲಭ್ಯ ಕಳೆದು ಕೊಳ್ಳಲಿದ್ದಾರೆ. ಒಬಿಸಿ ವರ್ಗಕ್ಕೆ ಸೇರಿದವರು ಮತಾಂತರಗೊಂಡರೂ ಆ ಕೆಟಗರಿಗೆ ಸಿಗುವ ಸೌಲಭ್ಯಗಳನ್ನು ಕಳೆದುಕೊಳ್ಳಲಿದ್ದಾರೆ. ಮೂಲ ಮತದಲ್ಲಿ ಇದ್ದ ಸೌಲಭ್ಯಗಳನ್ನು ಕಳೆದುಕೊಳ್ಳಲಿದ್ದಾರೆ. ಯಾವ ‘ಧರ್ಮಕ್ಕೆ ಮತಾಂತರ ಆಗುತ್ತಾರೋ ಆ ಧರ್ಮದವರಿಗೆ ಸಿಗುವ ಸೌಲಭ್ಯ ಸಿಗಲಿವೆ’ ಎಂದು ತಿಳಿಸಿದರು.
‘ಅನುಮತಿ ಪಡೆದ ಚರ್ಚ್ ಅನ್ನು ಚರ್ಚ್ ಎಂದು ಕರೆಯುತ್ತೇವೆ. ಯಾರದೋ ಮನೆಯಲ್ಲಿ ಮತಾಂತರ ಮಾಡಲಿಕ್ಕಾಗಿ, ಇನ್ನಾವುದೋ ಧರ್ಮದವರನ್ನು ಕುಳ್ಳಿರಿಸಿ ಕೊಂಡು ಪ್ರಾರ್ಥನೆ ಮಾಡಿದರೆ, ಅದು ಕಾಯ್ದೆ ಪ್ರಕಾರ ಅಪರಾಧವಾಗಲಿದೆ. ಅನುಮತಿ ಪಡೆದ ಚರ್ಚ್‌ಗಳಲ್ಲೂ ಬೇರೆ ‘ಧರ್ಮದವರು ಸುಮ್ಮನೆ ಪ್ರಾರ್ಥನೆಗೆ ಹೋಗಿ ಬಂದರೆ ಏನೂ ಮಾಡೋಕೆ ಆಗಲ್ಲ. ಆದರೆ, ಅವರ ಕುಟುಂಬದವರು ದೂರು ನೀಡಿದರೆ ಆಗ ತನಿಖೆ ನಡೆಸಲಾಗುತ್ತದೆ’ ಎಂದರು.
‘ಚರ್ಚ್‌ಗೆ ಹೋಗುವವರು ಅಧಿಕೃತ ಮತಾಂತರ ಆಗಿದ್ದಾರಾ? ಯಾವಾಗ? ಯಾರು ಮತಾಂತರ ಮಾಡಿದ್ದಾರೆ ಎನ್ನುವ ಮಾಹಿತಿಯನ್ನು ಪೊಲೀಸರು ಸಂಗ್ರಹಿಸಲಿದ್ದಾರೆ. ಮೊದಲಿನ ಹಾಗೆ ಮಾಡಲು ಆಗುವುದಿಲ್ಲ. ಈಗ ಡಿಸಿ, ಎಸ್ಪಿಗಳಿಗೆ ಹೊಣೆಗಾರಿಕೆ ನೀಡಲಾಗಿದೆ’ ಎಂದು ತಿಳಿಸಿದರು.
ದಾವಣಗೆರೆ ಪೂರ್ವವಲಯ ಐಜಿಪಿ ತ್ಯಾಗರಾಜ್, ಜಿಲ್ಲಾ ಪೊಲೀಸ್ ವರಿಷ್ಠಾಕಾರಿ ಕೆ. ಪರಶುರಾಮ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎಸ್.ಜೆ.ಕುಮಾರಸ್ವಾಮಿ ಸೇರಿದಂತೆ ಮತ್ತಿತರರು ಇದ್ದರು.