ಆರೋಗ್ಯಬೆಂಗಳೂರುರಾಜ್ಯ

ಹೊಸಕೋಟೆಯ ಬೆಳಮಂಗಲದಲ್ಲಿ ಆಫ್ರಿಕನ್ ಹಂದಿಜ್ವರ ಪತ್ತೆ; ಹೈ ಅಲರ್ಟ್

ಹೊಸಕೋಟೆ ತಾಲೂಕು ಜಡಿಗೇನಹಳ್ಳಿ ಗ್ರಾ.ಪಂ ವ್ಯಾಪ್ತಿಯ ದೊಡ್ಡ ಬೆಳೆಮಂಗಲ ಗ್ರಾಮದ ಹಂದಿ ಸಾಕಾಣಿಕೆ ಕೇಂದ್ರದಲ್ಲಿ ಆಫ್ರಿಕನ್‌ ಹಂದಿ ಜ್ವರ ಪತ್ತೆಯಾಗಿದ್ದು, ಈ ಕೇಂದ್ರವನ್ನು ಜಿಲ್ಲಾಡಳಿತ 6 ತಿಂಗಳು ಕ್ಲೋಸ್‌ ಮಾಡಲು ಆದೇಶಿಸಿದೆ.

ಅಲ್ಲದೆ ಕೇಂದ್ರದ 1 ಕಿ.ಮೀ ವ್ಯಾಪ್ತಿಯನ್ನು ರೋಗಪಡಿತ ವಲಯ ಹಾಗೂ 10 ಕಿ.ಮೀ ಪ್ರದೇಶವನ್ನು ಜಾಗೃತಿ ವಲಯ ಎಂದು ಘೋಷಿಸಲಾಗಿದೆ.

ಬೆಳಮಂಗಲ ಗ್ರಾಮದಲ್ಲಿದ್ದ ಹಂದಿ ಸಾಕಾಣಿಕೆ ಕೇಂದ್ರದಲ್ಲಿ ಕಳೆದ ತಿಂಗಳು ಒಂದೊಂದೆ ಹಂದಿಗಳು ಸಾವನ್ನಪ್ಪಿದ ಪ್ರಕರಣಗಳ ನಡೆದಿದ್ದವು. ಹಂದಿಗಳ ಸಾವಿಗೆ ನಿಖರ ಕಾರಣ ಪತ್ತೆ ಹಚ್ಚಲು ಅಂಗಾಂಶ ಮಾದರಿಗಳನ್ನು ಬೆಂಗಳೂರಿನ ಪ್ರಾಣಿ ಆರೋಗ್ಯ ಮತ್ತು ಜೈವಿಕ ಹಾಗೂ ಭೂಪಾಲ್‌ ನಲ್ಲಿರುವ ರಾಷ್ಟ್ರೀಯ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು.

ಈ ಪ್ರಯೋಗಾಲಯದ ವರದಿ ಆ. 4 ರಂದು ರಾಜ್ಯ ಸರಕಾರದ ಕೈ ಸೇರಿದ್ದು, ಆಫ್ರಿಕನ್‌ ಹಂದಿ ಜ್ವರದಿಂದ ಹಂದಿಗಳು ಸಾವನ್ನಪ್ಪಿರುವುದು ದೃಢಪಟ್ಟಿದೆ.

ತಕ್ಷಣ ಇದರ ನಿಯಂತ್ರಣಕ್ಕೆ ಮುಂದಾದ ಜಿಲ್ಲಾಡಳಿತ ಹಂದಿ ಸಾಕಾಣಿಕೆ ಕೇಂದ್ರದಲ್ಲಿರುವ ಎಲ್ಲ ಹಂದಿಗಳನ್ನು ವೈಜ್ಞಾನಿಕವಾಗಿ ನಿಯಮಾನುಸಾರ ಸಾಯಿಸಿ ವೈಜ್ಞಾನಿಕ ಪದ್ಧತಿಯಲ್ಲಿ ವಿಲೇ ಮಾಡಲಾಗಿದೆ. ಸೋಂಕು ಹರಡದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ.

ರಾಜ್ಯದಲ್ಲಿಯೇ ಹಂದಿ ಜ್ವರ ಪ್ರಕರಣ ಗ್ರಾಮಾಂತರ ಜಿಲ್ಲೆಯಲ್ಲಿ ಪತ್ತೆಯಾಗಿರುವುದು ಪ್ರಥಮ ಎನ್ನಲಾಗಿದೆ. ಹಂದಿಗಳನ್ನು ಫಾರಂನಿಂದ ಮತ್ತೊಂದು ಫಾರಂಗೆ ರವಾನೆ ಮಾಡುವಾಗ ಈ ಜ್ವರದ ಸೋಂಕು ಬಂದಿರಬಹುದು ಎನ್ನಲಾಗುತ್ತಿದೆ.

ನಾಗಾಲ್ಯಾಂಡ್‌ ಮತ್ತಿತ್ತರ ಕಡೆ ಹಂದಿಜ್ವರ ಪ್ರಕರಣಗಳು ಕಂಡು ಬಂದಿದ್ದು, ಅಲ್ಲಿಂದ ಹಂದಿಗಳು, ಮಾಂಸ ಸಾಗಾಟ ಮಾಡುವಾಗ ಜ್ವರದ ಸೋಂಕು ಬಂದಿರುವ ಸಾಧ್ಯತೆಯಿದೆ.

ಸತ್ತ ಹಂದಿಗಳು ಎಷ್ಟು?: ಬೆಳಮಂಗಲ ಹಂದಿ ಸಾಕಾಣಿಕೆ ಕೇಂದ್ರದಲ್ಲಿ 550 ಹಂದಿಗಳನ್ನು ಸಾಕಲಾಗಿತ್ತು. ಇದರಲ್ಲಿ ಒಟ್ಟು 203 ಹಂದಿಗಳು ಸಾವನ್ನಪ್ಪಿದ್ದವು. ನಂತರ ರೋಗ ಪತ್ತೆಗಾಗಿ ಭೂಪಾಲ್‌ಗೆ ಇದರ ಅಂಗಾಂಶ ಮಾದರಿಗಳನ್ನು ಪ್ರಯೋಗಾಲಾಯಕ್ಕೆ ಕಳುಹಿಸಲಾಗಿತ್ತು.

ಆಫ್ರಿಕನ್‌ ಜ್ವರ ದೃಢಪಟ್ಟ ನಂತರ ಉಳಿದ 345 ಹಂದಿಗಳನ್ನು ಸಾಯಿಸಿ ಭೂಮಿಯಲ್ಲಿಯೇ ವೈಜ್ಞಾನಿಕ ಪದ್ಧತಿಗಳನ್ನು ಅನುಸರಿಸಿ ವಿಲೇ ಮಾಡಲಾಗಿದೆ.

ಹೈ ಅಲರ್ಟ್‌: ಸೋಂಕು ಮತ್ಯಾವುದೇ ಸಾಕಾಣಿಕೆ ಕೇಂದ್ರಕ್ಕೆ ಹರಡದಂತೆ ಪಶುಪಾಲನೆ ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳು ನಿಗಾ ವಹಿಸಿ ಆರೋಗ್ಯ ಶಿಕ್ಷಣ ಜಾಗೃತಿ ಮೂಡಿಸುತ್ತಿದ್ದಾರೆ.

ಸಾಕಾಣಿಕೆ ಕೇಂದ್ರದಿಂದ ಒಂದು ಕಿ.ಮೀ ಪ್ರದೇಶವನ್ನು ರೋಗ ಪೀಡಿತ, 1 ರಿಂದ 10.ಕಿ.ಮೀ ಪ್ರದೇಶವನ್ನು ಜಾಗೃತಿ ವಲಯದ ಎಂದು ಘೋಷಣೆ ಮಾಡಲಾಗಿದೆ. ಈ ಸೋಂಕು ಮನುಷ್ಯರಿಗೆ ಹರಡುವುದು ಕಡಿಮೆ ಎನ್ನಲಾಗುತ್ತಿದ್ದು, ಆಗೊಮ್ಮೆ ಸೋಂಕು ಮನುಷ್ಯನಿಗೆ ತಾಕಿದರೇ ಸಾವು ಖಚಿತ.

ರೋಗ ಪೀಡಿತ ಹಂದಿ ಫಾರಂನಿಂದ ಒಂದು ಕಿ.ಮೀ ವ್ಯಾಪ್ತಿಯ ಎಲ್ಲ ಸಾಕಾಣಿಕೆ ಕೇಂದ್ರಗಳನ್ನು ಮುಚ್ಚಲಾಗಿದೆ. ಫಾರಂ ಬಳಿ ಜನರ ಓಡಾಟ ನಿಷೇಧಿಸಿದ್ದು, ಜೀವಂತ ಹಂದಿಗಳ ಮಾರಾಟ, ಅವುಗಳ ಮಾಂಸ ಮಾರಾಟ ನಿಷೇಧಿಸಲಾಗಿದೆ.

ಹೊಸದಾಗಿ ಬೇರೆ ಕಡೆಯಿಂದ ಹಂದಿಗಳನ್ನು ಖರೀದಿಸಿ ತರುವುದು ನಿಷೇಧಿಸಲಾಗಿದೆ. ಸೋಂಕು ಕೇಂದ್ರಕ್ಕೆ ಸಂದರ್ಶಕರು ಬರದಂತೆ, ಅಲ್ಲಿನ ಸಿಬ್ಬಂದಿ ಬೇರೆ ಫಾರಂಗಳಿಗೆ ಹೋಗದಂತೆ ಸೂಚಿಸಲಾಗಿದೆ.

ಪಶು ಪಾಲನೆ ಹಾಗೂ ಆರೋಗ್ಯ ಇಲಾಖೆ ಆಶಾ, ಅಂಗನವಾಡಿ, ಶಾಲಾ ಶಿಕ್ಷಕರಿಗೆ ಹಂದಿ ಜ್ವರದ ಬಗೆ ಜಾಗೃತಿಯನ್ನು ಮೂಡಿಸಿ ಶಾಲಾ ಮಕ್ಕಳು, ಸುತ್ತಮುತ್ತಲ್ಲಿನ ಗ್ರಾಮಸ್ಥರಿಗೂ ಜ್ವರದ ಬಗೆ ಅರಿವು ಮೂಡಿಸಲಾಗುತ್ತಿದೆ.

ಅಲ್ಲದೆ ಜ್ವರ ಪ್ರಕರಣಗಳ ಬಗೆ ಈ ಭಾಗದಲ್ಲಿ ವಿಶೇಷ ಗಮನಹರಿಸಲಾಗುತ್ತಿದೆ. ಹೋಟೆಲ್‌ಗಳ ಸುತ್ತಮುತ್ತ ಶುಚಿತ್ವದ ಬಗೆ ಅರಿವು ಮೂಡಿಸುವ ಕಾರ್ಯ ಮಾಡಲಾಗುತ್ತಿದೆ.

ಹಂದಿ ಜ್ವರದ ವೈರಾಣುವು ಮನುಷ್ಯರಲ್ಲಿ ಯಾವುದೇ ರೀತಿಯ ರೋಗವನ್ನುಂಟು ಮಾಡುವುದಿಲ್ಲ. ಹಾಗಾಗಿ ಜನರು ಗಾಬರಿಯಾಗುವ ಅವಶ್ಯಕತೆಯಿಲ್ಲ.

ಜಿಲ್ಲೆಯಲ್ಲಿ ಒಟ್ಟು 85 ಹಂದಿ ಫಾರಂಗಳಿದ್ದು, ಸುಮಾರು 21685 ಹಂದಿಗಳ ಸಾಕಾಣಿಕೆ ಮಾಡುತ್ತಿದೆ. ಹಂದಿಜ್ವರ ಪತ್ತೆಯಾಗುತ್ತಿದ್ದಂತೆ ಸೋಂಕು ನಿವಾರಕ ಮತ್ತು ಸಾಂಕ್ರಾಮಿಕ ರೋಗಗಳ ಪ್ರತಿಬಂಧಕ ಮತ್ತು ನಿಯಂತ್ರಣ ಅಧಿನಿಯಮ 2009 ರಡಿ ಅಗತ್ಯ ಕ್ರಮಗಳನ್ನು ಕೈಗೊಂಡು ಸೋಂಕು ಪತ್ತೆಯಾದ ಪ್ರದೇಶದ ಸುತ್ತ ಜನ ಸಂಚಾರವನ್ನು ನಿಬಂಧಿಸಲಾಗಿದೆ.

ಅಲ್ಲದೆ ಜ್ವರ ಪತ್ತೆಯಾದ ಕೇಂದ್ರವನ್ನು 6 ತಿಂಗಳು ಮುಚ್ಚಲು ಕ್ರಮ ಕೈಗೊಳ್ಳಲಾಗಿದೆ ಎಂದು ಆರೋಗ್ಯ ಇಲಾಖೆ ಜಿಲ್ಲಾ ಸರ್ವೇಕ್ಷಾಣಾಧಿಕಾರಿ ಮುರುಳಿ ಮೋಹನ್‌ ಹೇಳಿದ್ರು.ಹಂದಿ ಜ್ವರ ಖಚಿತಗೊಂಡ ನಂತರ ಸಾಕಾಣಿಕೆ ಕೇಂದ್ರದ ಎಲ್ಲ ಹಂದಿಗಳನ್ನು ವೈಜ್ಞಾನಿಕವಾಗಿ ವಿಲೇ ಮಾಡಲಾಗಿದೆ.

ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡು ನಿಗಾ ವಹಿಸಲಾಗಿದೆ ಎಂದು ಪಶುಪಾಲನೆ ಇಲಾಖೆ ಉಪ ನಿರ್ದೇಶಕ ನಾಗರಾಜ್‌ ಗೌಡ ತಿಳಿಸಿದ್ರು.

Antony Raju A

Ncibtimesmedia Web Portal Director & national executive officer Contact:9482289151 Gmail: antonyraju166@gmail.com

Related Articles

Leave a Reply

Your email address will not be published. Required fields are marked *

Back to top button