
ಸೆಕೆಯೆಂದು ಮನೆಯ ಹೊರಗಡೆ ಮಲಗಿದ್ದ ವೃದ್ಧೆಯನ್ನು ಕೊಲೆ ಮಾಡಿದ ದುಷ್ಕರ್ಮಿಗಳು ಅವರ ಕಿವಿಯೋಲೆ ಹಾಗೂ ಕೈಯಲ್ಲಿದ್ದ ಬೆಳ್ಳಿ ಆಭರಣ ಬಿಚ್ಚಿಕೊಂಡು ಪರಾರಿಯಾಗಿರುವ ಘಟನೆ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.ಚಿಕ್ಕಸುಗೂರು ಗ್ರಾಮದ ನರಸಮ್ಮ(60) ಕೊಲೆಯಾದ ವೃದ್ಧೆ.ರಾತ್ರಿ ಊಟ ಮಾಡಿದ ನಂತರ ನರಸಮ್ಮ ತುಂಬಾ ಸೆಕೆಯಾಗುತ್ತಿದೆ ಎಂದು ಮನೆಯ ಹೊರಗೆ ಚಾಪೆ ಹಾಕಿಕೊಂಡು ಮಲಗಿದ್ದಾರೆ. ಮಧ್ಯರಾತ್ರಿ ದುಷ್ಕರ್ಮಿಗಳು ನರಸಮ್ಮ ಅವರ ಕಿವಿಯಲ್ಲಿದ್ದ ಚಿನ್ನದ ಓಲೆಗಳನ್ನು ಗಮನಿಸಿ ಬಿಚ್ಚಿಕೊಳ್ಳಲು ಯತ್ನಿಸಿದ್ದಾರೆ.ಆ ಸಂದರ್ಭದಲ್ಲಿ ನರಸಮ್ಮ ಎಚ್ಚರವಾಗುತ್ತಿದ್ದಂತೆ ಕೂಗಿಕೊಳ್ಳಬಹುದೆಂದು ಹೆದರಿ ಆಕೆಯ ಬಾಯಿ ಮುಚ್ಚಿ ತಲೆ ಮೇಲೆ ಕಲ್ಲು ಎತ್ತಿಹಾಕಿ ಕೊಲೆ ಮಾಡಿ ಆಭರಣಗಳನ್ನು ಕಳಚಿಕೊಂಡು ಶವವನ್ನು ಮನೆಯ ಹಿಂಭಾಗದ ಪೊದೆಯಲ್ಲಿ ಬಿಸಾಡಿ ಆರೋಪಿಗಳು ಪರಾರಿಯಾಗಿದ್ದಾರೆ.ಬೆಳಗ್ಗೆ ನರಸಮ್ಮ ಮಲಗಿದ್ದ ಜಾಗದಲ್ಲಿ ಇಲ್ಲದಿರುವುದು ಗಮನಿಸಿ ಗ್ರಾಮಸ್ಥರು ಹುಡುಕಿಕೊಂಡು ಹೋದಾಗ ಪೊದೆಯಲ್ಲಿ ಶವ ಕಂಡು ಬಂದಿದೆ.ತಕ್ಷಣ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಸ್ಥಳಕ್ಕಾಗಮಿಸಿದ ಪೊಲೀಸರು ಸ್ಥಳ ಪರಿಶೀಲನೆ ನಡೆಸಿ ಮೃತದೇಹವನ್ನು ಸರ್ಕಾರಿ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ರವಾನಿಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.
