ಹೈಟೆನ್ಷನ್ ತಂತಿ ತಗುಲಿ ಗಾಯಗೊಂಡಿದ್ದ ಬಾಲಕ ಸಾವು

ಪಾರಿವಾಳ ಹಿಡಿಯಲು ಹೋಗಿ ಹೈಟೆನ್ಷನ್ ತಂತಿ ತಾಗಿ ಇಬ್ಬರು ಬಾಲಕರು ತೀವ್ರವಾಗಿ ಗಾಯಗೊಂಡಿದ್ದು, ಒಬ್ಬ ಬಾಲಕ ಇಂದು ಮುಂಜಾನೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ.
ಕಳೆದ ಗುರುವಾರ ಸಂಜೆ ನಂದಿನಿ ಲೇಔಟ್‍ನ ವಿಜಯಾನಂದ ನಗರದಲ್ಲಿ ಪಾರಿವಾಳ ಹಿಡಿಯಲು ಹೋದಾಗ ವಿದ್ಯುತ್ ಪ್ರಹರಿಸಿ ಗಾಯಗೊಂಡಿದ್ದಸುಪ್ರೀತ್(11) ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ.
ಈತನ ಜೊತೆ ಇದ್ದ ಮತ್ತೊಬ್ಬ ಬಾಲಕ ಚಂದನ್ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.ಅಂದು ಈ ಇಬ್ಬರು ಬಾಲಕರು ಮನೆಯ ಮಹಡಿಯ ಮೇಲೆ ಹೋಗಲು ಪ್ರಯತ್ನಿಸಿದ್ದರು. ಆಗ ಪೋಷಕರು ಅವರಿಗೆ ಅವಕಾಶ ನೀಡಿರಲಿಲ್ಲ.
ಆದರೆ ಪಕ್ಕದ ಮನೆಯಿಂದ ಮಹಡಿ ಮೇಲೆ ಹೋಗಿ ಪಾರಿವಾಳ ಹಿಡಿಯಲು ಹೋಗಿದ್ದಾರೆ. ಪಾರಿವಾಳ ಹೈಟೆನ್ಷನ್ ತಂತಿಯ ಮೇಲೆ ಕೂತಿದೆ.ಬಾಲಕರು ಕಬ್ಬಿಣದ ಸಲಾಕೆಯಿಂದ ಹೈಟೆನ್ಷನ್ ತಂತಿಗೆ ಹೊಡೆದು ಓಡಿಸಲು ಪ್ರಯತ್ನಿಸಿದಾಗ ವಿದ್ಯುತ್ ಪ್ರಹರಿಸಿ ಗಂಭೀರವಾಗಿ ಗಾಯಗೊಂಡಿದ್ದಾರೆ.
ತಕ್ಷಣ ಅವರುಗಳನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಶೇ. 80ರಷ್ಟು ಸುಟ್ಟ ಗಾಯಗಳಾಗಿವೆ ಎಂದು ವೈದ್ಯರು ತಿಳಿಸಿದ್ದಾರೆ. ಜೀವ ಉಳಿಸಲು ವೈದ್ಯರು ಸಾಕಷ್ಟು ಪ್ರಯತ್ನ ಪಟ್ಟು ಸಹ ಒಬ್ಬ ಮೃತಪಟ್ಟಿದ್ದಾನೆ.ಮಗನನ್ನು ಕಳೆದುಕೊಂಡು ಪೋಷಕರು ಕಣ್ಣೀರಿಟ್ಟಿದ್ದಾರೆ.
ಮತ್ತೊಬ್ಬ ಬಾಲಕ ಚಂದನ್ ಬದುಕಿ ಬರಲಿ ಎಂದು ಕುಟುಂಬದವರು, ಸ್ಥಳೀಯರು ದೇವರಲ್ಲಿ ಪ್ರಾರ್ಥಿಸಿದ್ದಾರೆ. ಈ ಘಟನೆಯಿಂದ ಸ್ಥಳೀಯರು ಬೆಚ್ಚಿಬಿದ್ದಿದ್ದು, ನಂದಿನಿ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.