Weatherಬೆಂಗಳೂರುಹವಾಮಾನ

ಹೆಸರಿಗಷ್ಟೇ ಬಿಬಿಎಂಪಿ ಕಂಟ್ರೋಲ್‌ ರೂಂ, ಕರೆ ಮಾಡಿದರೆ ತಕ್ಷಣಕ್ಕೆ ಸಿಗ್ತಿಲ್ಲ ಸ್ಪಂದನೆ

ಭಾನುವಾರ ಸಂಜೆ ಬೆಂಗಳೂರಿನಲ್ಲಿ ಸುರಿದ ಭಾರಿ ಮಳೆ ಅಲ್ಲೋಲ ಕಲ್ಲೋಲವನ್ನೇ ಸೃಷ್ಟಿಸಿದೆ. ಅದರಲ್ಲೂ ಬೆಂಗಳೂರಿನ ಬೊಮ್ಮನಹಳ್ಳಿ ಹಾಗೂ ಮಹದೇವಪುರ ವ್ಯಾಪ್ತಿಯಲ್ಲಿ ಮಳೆ ಸೃಷ್ಟಿಸಿದ ಅವಾಂತರ ಅಷ್ಟಿಷ್ಟಲ್ಲ.

ಜನ ಸಾಮಾನ್ಯರಿಂದ ಹಿಡಿದು ಶ್ರೀಮಂತರೂ ಮಳೆಯ ಕಾಟಕ್ಕೆ ತುತ್ತಾಗಿದ್ದಾರೆ. ಮನೆಗಳು, ವಿಲ್ಲಾಗಳು ಜಲಾವೃತಗೊಂಡಿದ್ದು ಊಟಕ್ಕೂ ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ.

ಮಳೆ ಅವಾಂತರದ ಹಿನ್ನೆಲೆಯಲ್ಲಿ ಜನರ ಕಷ್ಟಕ್ಕೆ ಸ್ಪಂದಿಸುವ ನಿಟ್ಟಿನಲ್ಲಿ ಬಿಬಿಎಂಪಿ ಕಂಟ್ರೋಲ್‌ ರೂಂ ತೆರೆದಿದೆ. ಆದರೆ, ಕಂಟ್ರೋಲ್‌ ರೂಂ ಮೂಲಕ ಜನರ ಸಂಕಷ್ಟಕ್ಕೆ ತಕ್ಷಣಕ್ಕೆ ಸ್ಪಂದನೆ ಸಿಗುತ್ತಿಲ್ಲ ಎಂಬ ಆರೋಪವೂ ಕೇಳಿಬರುತ್ತಿದೆ.

ಬಿಬಿಎಂಪಿ ವ್ಯಾಪ್ತಿಯಲ್ಲಿ ಒಟ್ಟು 64 ಕಂಟ್ರೋಲ್‌ ರೂಂಗಳು ಇವೆ. ಈ ಬಾರಿ ಮಳೆಯಿಂದ ವ್ಯಾಪಕವಾಗಿ ಹಾನಿಗೊಳಗಾಗಿರುವ ಬೊಮ್ಮನಹಳ್ಳಿ ಹಾಗೂ ಮಹದೇವಪುರ ಪ್ರದೇಶದಲ್ಲಿ ಅಸಿಸ್ಟೆಂಟ್‌ ಇಂಜಿನಿಯರ್‌ ಕಚೇರಿಯಲ್ಲಿ ಕಂಟ್ರೋಲ್‌ ರೂಂ ತೆರೆಯಲಾಗಿದೆ. ಜನರ ಸಂಕಷ್ಟಗಳಿಗೆ ಅಲ್ಲಿ ಸ್ಪಂದಿಸಲಾಗುತ್ತಿದೆ ಎನ್ನುತ್ತಾರೆ ಬಿಬಿಎಂಪಿ ಅಧಿಕಾರಿಗಳು.

ಬಿಬಿಎಂಪಿಯಿಂದ ನಮಗೆ ಯಾವುದೇ ರೀತಿಯ ಪ್ರತಿಕ್ರಿಯೆ ಸಿಗುತ್ತಿಲ್ಲ. ಬೆಳ್ಳಂದೂರು ಕೆರೆ ಪಕ್ಕದಿಂದ ಸಕ್ರ ಆಸ್ಪತ್ರೆಗೆ ಹೋಗುವ ದಾರಿಯಲ್ಲಿ 30 ರಿಂದ 40 ಕುಟುಂಬಗಳು ಸಂಕಷ್ಟದಲ್ಲಿವೆ. ಮಳೆಯಿಂದ ಸೃಷ್ಟಿಯಾದ ಪ್ರವಾಹದಿಂದಾಗಿ ಅವರಿಗೆ ವಾಸ ಮಾಡಲು ಮನೆಯೂ ಇಲ್ಲದಂತಾಗಿದೆ.

ಊಟ ಸಿಗ್ತಿಲ್ಲ ಕನಿಷ್ಟನೀರು ಕೂಡಾ ಸಿಗುತ್ತಿಲ್ಲ. ಬಿಬಿಎಂಪಿಗೆ ಕರೆ ಮಾಡಿದರೆ ಇನ್ನೊಂದು ನಂಬರ್ ಕೊಡ್ತಾರೆ, ಅವರಿಗೆ ಕಾಲ್‌ ಮಾಡಿದ್ರೆ ಸೂಕ್ತ ಸ್ಪಂದನೆ ಸಿಗುತ್ತಿಲ್ಲ’ ಎನ್ನುತ್ತಾರೆ ಸ್ಥಳೀಯ ನಿವಾಸಿ ಕೃಷ್ಣ ಮಾದೇಶ್.

ಬಿಬಿಎಂಪಿ ಕಂಟ್ರೋಲ್‌ ರೂಂನಿಂದ ಯಾರಿಗೂ ನಿಗದಿತ ಅವಧಿಯಲ್ಲಿ ಸೂಕ್ತ ಸ್ಪಂದನೆ ಸಿಗುತ್ತಿಲ್ಲ. ಬದಲಾಗಿ ಎನ್‌ಡಿಆರ್‌ಎಫ್, ಅಗ್ನಿಶಾಮಕ ದಳ ಸ್ಪಂದನೆ ಮಾಡುತ್ತಿದೆ. ಮಳೆ ಹಾಗೂ ಪ್ರವಾಹದಿಂದ ಸಾಕಷ್ಟು ಜನರು ಸಂತ್ರಸ್ತರಾಗಿದ್ದಾರೆ. ಅವರನ್ನು ಸ್ಥಳಾಂತರ ಮಾಡುವುದು ಹಾಗೂ ಊಟದ ವ್ಯವಸ್ಥೆ ಕಲ್ಪಿಸುವ ಕೆಲಸ ಆಗಬೇಕು.

ಬಿಬಿಎಂಪಿ ಅಧಿಕಾರಿಗಳು ತಕ್ಕ ಮಟ್ಟಿಗೆ ಮಾಡ್ತಿದ್ದಾರೆ. ಜನರ ದೂರುಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಆದರೆ, ಅದಕ್ಕೆ ಸ್ಪಂದನೆ ಸಿಗುವುದು ಮಾತ್ರ ತಡವಾಗಿ’ ಎನ್ನುತ್ತಾರೆ ಸ್ಥಳೀಯ ಆಮ್‌ ಆದ್ಮಿ ಪಕ್ಷದ ಮುಖಂಡರಾದ ಅಶೋಕ್ ಮೃತ್ಯುಂಜಯ.

ನೆರೆಯಿಂದಾಗಿ ಸಂಕಷ್ಟ ಅನುಭವಿಸುತ್ತಿರುವ ಪ್ರದೇಶದ ಜನರಿಗೆ ಬಿಬಿಎಂಪಿಯಿಂದ ಊಟ, ತಿಂಡಿ ವಿತರಣೆ ಮಾಡಲಾಗುತ್ತಿದೆ. ಮಾರ್ಷಲ್‌ಗಳು ಕೂಡಾ ಈ ಭಾಗದಲ್ಲಿ ಬೀಡು ಬಿಟ್ಟಿದ್ದು, ಜನರ ಸಮಸ್ಯೆಗಳಿಗೆ ಸ್ಪಂದನೆ ನೀಡುತ್ತಿದ್ದಾರೆ ಎನ್ನುತ್ತಾರೆ ಬಿಬಿಎಂಪಿ ಅಧಿಕಾರಿಗಳು.

ಈ ಬಾರಿ ಮಳೆ ಹಾನಿ ಹಿನ್ನೆಲೆಯಲ್ಲಿ ಒಂದು ಮುಖ್ಯ ಕಂಟ್ರೋಲ್ ರೂಂ ತೆರೆಯಲಾಗಿದೆ. ಇನ್ನು ಆರು ಉಪವಿಭಾಗಗಳಲ್ಲಿ 6 ಕಂಟ್ರೋಲ್ ರೂಂಗಳನ್ನು ತೆರೆಯಲಾಗಿದೆ. ವಾರ್ಡ್‌ ನೋಡಲ್ ಆಫೀಸರ್‌ ತಂಡವೂ ಕಾರ್ಯಾಚರಣೆ ನಡೆಸುತ್ತಿದೆ.

ಸಂತ್ರಸ್ತರಿಗೆ ಅಗತ್ಯ ಊಟದ ವ್ಯವಸ್ಥೆಯನ್ನು ಇಸ್ಕಾನ್‌, ಇಂದಿರಾ ಕ್ಯಾಂಟೀನ್ ಹಾಗೂ ಅದಮ್ಯ ಚೇತನ ಸಂಸ್ಥೆಗಳ ಸಹಕಾರದೊಂದಿಗೆ ನಡೆಸಲಾಗುತ್ತಿದೆ.

ಜನರಿಗೆ ಸ್ಪಂದಿಸುವ ನಿಟ್ಟಿನಲ್ಲಿ ಮಾರ್ಷಲ್‌ಗಳು ಹಾಗೂ ಬಿಬಿಎಂಪಿ ಅಧಿಕಾರಿಗಳು ಸ್ಥಳದಲ್ಲಿದ್ದಾರೆ” ಎನ್ನುತ್ತಾರೆ ಕಂದಾಯ ಇಲಾಖೆಯ ಜಂಟಿ ಆಯುಕ್ತ ವೆಂಕಟಚಲಪತಿ.

ಮಳೆ ನಿಂತರೂ ಸದ್ಯ ಅಪಾರ್ಟ್ಮೆಂಟ್‌ಗಳ ಬೇಸ್‌ಮೆಂಟ್‌ಗಳಿಗೆ ನುಗ್ಗಿರುವ ನೀರು ಹಾಗೂ ಕೆಸರನ್ನು ತೆರವುಗೊಳಿಸುವುದೇ ದೊಡ್ಡ ಸವಾಲಾಗಿದೆ. ಈಗಾಗಲೇ ಅಧಿಕಾರಿಗಳು ಹಾಗೂ ಸಿಬ್ಬಂದಿ ಅಪಾರ್ಟ್ಮೆಂಟ್‌ಗಳಿಗೆ ಭೇಟಿ ನೀಡುತ್ತಿದ್ದಾರೆ.

ಬಿಬಿಎಂಪಿ, ಅಗ್ನಿಶಾಮಕ ದಳ, ವಿಪತ್ತು ನಿರ್ವಹಣಾ ದಳದ ಸಿಬ್ಬಂದಿ ಪ್ರಯಾಸಪಡುತ್ತಿದ್ದಾರೆ. ಮಹದೇವಪುರ ವಲಯದಲ್ಲಿ 106 ಅಪಾರ್ಮೆಂಟ್‌ಗಳಿಗೆ ನೀರು ನುಗ್ಗಿತ್ತು.

ಈ ಪೈಕಿ ಸುಮಾರು 25 ಕ್ಕೂ ಅಧಿಕ ಅಪಾರ್ಟ್ಮೆಂಟ್‌ಗಳಲ್ಲಿ ಇನ್ನೂ ನೀರು ನಿಂತಿದೆ. ಈ ನಿಟ್ಟಿನಲ್ಲಿ ಸೂಕ್ತ ಸ್ಪಂದನೆ ಸಿಗಬೇಕು ಎನ್ನುತ್ತಾರೆ ನಿವಾಸಿಗಳು.

Antony Raju A

Ncibtimesmedia Web Portal Director & national executive officer Contact:9482289151 Gmail: antonyraju166@gmail.com

Related Articles

Leave a Reply

Your email address will not be published. Required fields are marked *

Back to top button