ಹಿರಿಯೂರಿಗೆ ಭಾರತ್ ಜೋಡೋ ಯಾತ್ರೆ; ಸಂಚಾರ ಮಾರ್ಗ ಬದಲಾವಣೆ

ರಾಹುಲ್ ಗಾಂಧಿ ನೇತೃತ್ವದ ಕಾಂಗ್ರೆಸ್ ಪಕ್ಷದ ಭಾರತ್ ಜೋಡೋ ಪಾದಯಾತ್ರೆ ಅಕ್ಟೋಬರ್ 10ರಂದು ಚಿತ್ರದುರ್ಗ ಜಿಲ್ಲೆಗೆ ಆಗಮಿಸಲಿದೆ. ಚಿಕ್ಕನಾಯಕನಹಳ್ಳಿ ತಾಲೂಕಿನ ಹುಳಿಯಾರು ಗಡಿಭಾಗದಿಂದ ಜಿಲ್ಲೆಯ ಹೊಸದುರ್ಗ ತಾಲೂಕಿನ ಚಿಕ್ಕಬ್ಯಾಲದಕೆರೆ ಗೇಟ್ ಮೂಲಕ ಹಿರಿಯೂರು ಮಾರ್ಗವಾಗಿ ಪಾದಯಾತ್ರೆ ಆಗಮಿಸಲಿದೆ.
ಈ ಹಿನ್ನೆಲೆಯಲ್ಲಿ ಪಾದಯಾತ್ರೆ ಮಾರ್ಗದಲ್ಲಿ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದೆ ಎಂದು ಜಿಲ್ಲಾ ವರಿಷ್ಠಾಧಿಕಾರಿ ಪರುಶುರಾಮ್ ಮಾಹಿತಿ ನೀಡಿದ್ದಾರೆ. ವಾಹನ ಸವಾರರಿಗೆ ತೊಂದರೆ ಆಗಬಾರದೆಂದು ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ ಮಾರ್ಗಗಳ ಬದಲಾವಣೆ ಮಾಡಿ ಆದೇಶ ಹೊರಡಿಸಿದ್ದಾರೆ.
ಈ ಯಾತ್ರೆ ಅಕ್ಟೋಬರ್ 14ರವರೆಗೆ ಸಾಗಲಿದ್ದು, ಹಿರಿಯೂರು, ಚಳ್ಳಕೆರೆ, ಮೊಳಕಾಲ್ಮೂರು ಮೂಲಕ ಬಳ್ಳಾರಿ ತಲುಪಲಿದೆ. ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ನಡೆಯುತ್ತಿರುವ ‘ಭಾರತ್ ಜೋಡೊ ಪಾದಯಾತ್ರೆ ಇದಾಗಿದೆ. ಈಗಾಗಲೇ ಯಾತ್ರೆ ಸಾಗುವ ಹಿರಿಯೂರು, ಚಳ್ಳಕೆರೆ ಹಾಗೂ ಮೊಳಕಾಲ್ಮುರು ಮಾರ್ಗದಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳ ತಂಡ ಪರಿಶೀಲನೆ ನಡೆಸಿದೆ.
ಭಾರತ್ ಜೋಡೋ ಪಾದಯಾತ್ರೆಗೆ ಇಬ್ಬರು ಪೊಲೀಸ್ ವರಿಷ್ಠಾಧಿಕಾರಿಗಳ ನೇತೃತ್ವದಲ್ಲಿ 7 ಡಿವೈಎಸ್‌ಪಿ, 29 ಪಿಐ, 89 ಪಿಎಸ್‌ಐ, 5 ಕೆಎಸ್‌ಆರ್‌ಪಿ, 7 ಡಿಆರ್ ತುಕಡಿಗಳು ಕರ್ತವ್ಯ ನಿರ್ವಹಿಸಲಿವೆ. ಯಾತ್ರೆ ಸಾಗುವ ಮಾರ್ಗದಲ್ಲಿ ಭದ್ರತೆ ಹಾಗೂ ಸಾರ್ವಜನಿಕರ ಹಿತದೃಷ್ಟಿಯಿಂದ ಕೆಲವು ಕಡೆ ನಿರ್ಬಂಧ ಹೇರಲಾಗಿದೆ. ಕೆಲವೆಡೆ ವಾಹನ ಸಂಚಾರ ನಿಷೇಧಿಸಿ, ಬದಲಿ ಮಾರ್ಗಗಳ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಪರಶುರಾಮ ಮಾಹಿತಿ ನೀಡಿದ್ದಾರೆ.
ಮಾರ್ಗ ಬದಲಾವಣೆ; ಜಿಲ್ಲಾಧಿಕಾರಿ ಆದೇಶಸಂಸದ ರಾಹುಲ್ ಗಾಂಧಿ ಹಮ್ಮಿಕೊಂಡಿರುವ ಭಾರತ್ ಜೋಡೋ ಪಾದಯಾತ್ರೆ ಇದೇ ಅಕ್ಟೋಬರ್ 10 ರಿಂದ 14ರವೆರೆಗೆ ಚಿತ್ರದುರ್ಗ ಜಿಲ್ಲೆಯಲ್ಲಿ ಹಾದುಹೋಗಲಿದೆ. ಈ ಸಂದರ್ಭದಲ್ಲಿ ಭದ್ರತೆ ಹಾಗೂ ಸಾರ್ವಜನಿಕರ ಹಿತದೃಷ್ಠಿ ಪಾದಯಾತ್ರೆ ಸಾಗುವ ಮಾರ್ಗದ ರಸ್ತೆಗಳ ಸಂಚಾರ ಮಾರ್ಗಗಳಲ್ಲಿ ಬದಲಾವಣೆ ಮಾಡಿ ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ಆದೇಶ ಹೊರಡಿಸಿದ್ದಾರೆ.
ಅ. 12, 14ರಂದು ಬಳಸಬಹುದಾದ ಮಾರ್ಗಗಳು?
ಅಕ್ಟೋಬರ್ 10 ಹಾಗೂ 11ರಂದು ಹುಳಿಯಾರು ಗಡಿಯಿಂದ ಚಳ್ಳಕೆರೆ ಗಡಿವರೆಗೆ, ಅಕ್ಟೋಬರ್ 12 ಹಾಗೂ 14ರಂದು ಚಳ್ಳಕೆರೆಯಿಂದ ಬಳ್ಳಾರಿ ಗಡಿಯವರೆಗೆ ಮಧ್ಯದ ರಾಷ್ಟ್ರೀಯ ಹೆದ್ದಾರಿ 150(ಎ) ರಸ್ತೆ ಸಂಚಾರವನ್ನು ನಿಷೇಧಿಸಲಾಗಿದೆ. ಅಕ್ಟೋಬರ್ 10ರಂದು ಹುಳಿಯಾರು ಹಿರಿಯೂರು ಮಧ್ಯ ಸಂಚರಿಸುವ ವಾಹನಗಳು ರಾಷ್ಟ್ರೀಯ ಹೆದ್ದಾರಿ 48 ರಸ್ತೆಯನ್ನು ಬಳಸಿ ಶಿರಾ ಮಾರ್ಗವಾಗಿ ಸಂಚರಿಸುವುದು. ಹಿರಿಯೂರು ಮತ್ತು ಚಳ್ಳಕರೆ ಮಧ್ಯೆ ಸಂಚರಿಸುವ ವಾಹನಗಳು ರಾಷ್ಟ್ರೀಯ ಹೆದ್ದಾರಿ 48 ರಸ್ತೆ ಬಳಸಿ ಚಿತ್ರದುರ್ಗ ಮಾರ್ಗವಾಗಿ ಸಂಚರಿಸಬೇಕು ಎಂದು ತಿಳಿಸಿದ್ದಾರೆ.
ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ ಸೂಚನೆ ಅಕ್ಟೋಬರ್ 11ರಂದು ಚಳ್ಳಕೆರೆ, ಹಿರಿಯೂರು ಮಾರ್ಗವಾಗಿ ಸಂಚರಿಸುವ ವಾಹನಗಳು ರಾಷ್ಟ್ರೀಯ ಹೆದ್ದಾರಿ 48 ರಸ್ತೆಯನ್ನು ಬಳಸಿ ಚಿತ್ರದುರ್ಗ ಮಾರ್ಗವಾಗಿ ಸಂಚರಿಸುವುದು. ಅಕ್ಟೋಬರ್ 12ರಂದು ಹಿರಿಯೂರು-ಚಳ್ಳಕೆರೆ-ಮೊಳಕಾಲ್ಮೂರು ಮೂಲಕ ಬಳ್ಳಾರಿ ಕಡೆ ಹೋಗುವ ವಾಹನಗಳು ಹಿರಿಯೂರು, ಚಿತ್ರದುರ್ಗ ಮಾರ್ಗವಾಗಿ ಹೊಸಪೇಟೆ ಕಡೆಗೆ ಚಲಿಸುವುದು.
ವಾಹನ ಸವಾರರಿಗೆ ತೊಂದರೆ ಆಗಂದಂತೆ ಕ್ರಮಬಳ್ಳಾರಿಯಿಂದ ಮೊಳಕಾಲ್ಮೂರು ನಡುವೆ ಸಂಚರಿಸುವ ವಾಹನಗಳನ್ನು ಹೊರತುಪಡಿಸಿ, ಚಳ್ಳಕೆರೆ ಕಡೆಗೆ ಚಲಿಸುವ ವಾಹನಗಳು, ಬಳ್ಳಾರಿಯಿಂದ ಬೆಂಗಳೂರಿನ ಕಡೆಗೆ ಚಲಿಸುವ ವಾಹನಗಳು ಹೊಸಪೇಟೆ, ಚಿತ್ರದುರ್ಗ ಅಥವಾ ಆಂಧ್ರ ಪ್ರದೇಶದ ಅನಂತಪುರ ಮಾರ್ಗವಾಗಿ ಚಲಿಸಬೇಕು.
ಇನ್ನು ಅಕ್ಟೋಬರ್ 14ರಂದು ಹಿರಿಯೂರು, ಚಳ್ಳಕೆರೆ ಮೂಲಕ ಬಳ್ಳಾರಿ ಕಡೆಗೆ ಹೋಗುವ ವಾಹನಗಳು ಹಿರಿಯೂರು, ಚಿತ್ರದುರ್ಗ, ಹೊಸಪೇಟೆ ಮಾರ್ಗದಲ್ಲಿ ಚಲಿಸಬಹುದು. ಬಳ್ಳಾರಿಯಿಂದ ಮೊಳಕಾಲ್ಮೂರು, ಚಳ್ಳಕೆರೆ ಕಡೆಗೆ ಚಲಿಸುವ ವಾಹನಗಳು, ಬಳ್ಳಾರಿಯಿಂದ ಬೆಂಗಳೂರಿಗೆ ಚಲಿಸುವ ವಾಹನಗಳು, ಹೊಸಪೇಟೆ, ಚಿತ್ರದುರ್ಗ ಅಥವಾ ಆಂಧ್ರ ಪ್ರದೇಶದ ಅನಂತಪುರ ಮಾರ್ಗವಾಗಿ ಚಲಿಸಬೇಕಿದೆ ಎಂದು ಮಾಹಿತಿ ನೀಡಿದ್ದಾರೆ.