
ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ ಭಾಷೆ ಎನ್ನು ಮೂಲಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಚಿತ್ರನಟ ಕಿಚ್ಚ ಸುದೀಪ್ ಬೆಂಬಲಕ್ಕೆ ನಿಂತಿದ್ದಾರೆ. ಭಾಷಾವಾರು ರಚನೆಯಾದ ಮೇಲೆ ಆಯಾ ರಾಜ್ಯಗಳಿಗೆ ಅಲ್ಲಿನ ಭಾಷೆಗಳೇ ಮಾತೃಭಾಷೆಯಾಗಿವೆ. ಅದರಂತೆ ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ ಭಾಷೆ ಎಂದು ಹೇಳಿದರು.
ಇಲ್ಲಿನ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಿಚ್ಚ ಸುದೀಪ್ ಹೇಳಿರುವುದು ಸರಿಯಾಗಿದೆ. ಅವರವರ ರಾಜ್ಯಗಳಲ್ಲಿ ಅವರವರ ಭಾಷೆಯೇ ಶ್ರೇಷ್ಠ. ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ ಭಾಷೆ. ಇದರಲ್ಲಿ ಯಾವುದೇ ರಾಜಿ ಇಲ್ಲ ಎಂದು ಸ್ಪಷ್ಟಪಡಿಸಿದರು. ಕರ್ನಾಟಕದಲ್ಲಾಗಲಿ ಅಥವಾ ದೇಶದಲ್ಲಿ 4ನೇ ಕೋವಿಡ್ ಅಲೆ ಅಧಿಕೃತವಾಗಿ ಕಾಣಿಸಿಕೊಂಡಿಲ್ಲ. ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಾಗಿದೆ. ಇದನ್ನು ನಿಯಂತ್ರಿಸಲು ಯಾವುದೆಲ್ಲ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳಬೆಕೋ ಅದೆಲ್ಲವನ್ನು ಸರ್ಕಾರ ತೆಗೆದುಕೊಳ್ಳಲಿದೆ ಎಂದರು. ಪ್ರಧಾನಿ ನರೇಂದ್ರ ಮೋದಿ ಅವರ ಜೊತೆ ವಿಡಿಯೋ ಕಾನರೆನ್ಸ್ ನಡೆಸಿದ ವೇಳೆ ಕೆಲವು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳು ಸೂಚಿಸಿದ್ದಾರೆ. ಅದರಂತೆ ಆರ್ಥಿಕ ಚಟುವಟಿಕೆಗಳಿಗೆ ಹೊರೆಯಾಗದಂತೆ ಹಾಗೂ ಸಾರ್ವಜನಿಕರಿಗೆ ಹೊರೆಯಾಗದಂತೆ ಕೆಲವು ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ ಎಂದು ತಿಳಿಸಿದರು.
ರಾಜಧಾನಿ ಬೆಂಗಳೂರಿನಲ್ಲಿ ಪ್ರತಿದಿನ 10 ಸಾವಿರ ಹಾಗೂ ರಾಜ್ಯದ ಇತರೆ ಭಾಗಗಳಲ್ಲಿ 20 ಸಾವಿರ ಸೇರಿದಂತೆ ಒಟ್ಟು 30 ಸಾವಿರ ಕೋವಿಡ್ ಪರೀಕ್ಷೆ ನಡೆಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಆಯಾ ಕಾಲ ಹಾಗೂ ಪರಿಸ್ಥಿತಿಗಳಿಗೆ ಅನುಗುಣವಾಗಿ ಟೆಸ್ಟ್ ಹೆಚ್ಚಳ ಮಾಡಲಾಗುವುದು. ಈಗಾಗಲೇ 8500 ಜಿನೋಮ್ ಪರೀಕ್ಷೆಗಳನ್ನು ಮಾಡಿದ್ದೇವೆ. ಈ ಬಾರಿ ಐಎಲ್‍ಎ ಪರೀಕ್ಷೆಗೂ ಸಹ ಒಳಪಡಿಸಲಾಗುವುದು. ಇದರಿಂದ ಕೋವಿಡ್ ಸೋಂಕಿತರು ಚಿಕಿತ್ಸೆ ಪಡೆಯಲು ಅನುಕೂಲವಾಗಲಿದೆ ಎಂದು ಅಭಿಪ್ರಾಯಪಟ್ಟರು.ಕರ್ನಾಟಕ ಸೇರಿದಂತೆ ವಿಶ್ವದ ಯಾವುದೇ ಭಾಗದಲ್ಲಿ ಕೋವಿಡ್ ಬಿಟ್ಟು ಹೋಗಿಲ್ಲ. ಕೇವಲ ಸೋಂಕಿತರ ಸಂಖ್ಯೆ ಮಾತ್ರ ಕಡಿಮೆಯಾಗುತ್ತಿದೆ. ಹಾಗೆಂದ ಮಾತ್ರಕ್ಕೆ ಸಾರ್ವಜನಿಕರು ಕೋವಿಡ್ ನಿಯಮ ಪಾಲನೆ ಮಾಡುವುದನ್ನು ಮರೆಯಬಾರದು ಎಂದು ಬೊಮ್ಮಾಯಿ ಕಿವಿಮಾತು ಹೇಳಿದರು.ಈಗಾಗಲೇ ರಾಜ್ಯ ಸರ್ಕಾರ ಮಾರ್ಗಸೂಚಿಯನ್ನು ಹೊರಡಿಸಿದೆ. ಇದರ ಅನ್ವಯ ಪ್ರತಿಯೊಬ್ಬರು ಕಡ್ಡಾಯವಾಗಿ ಮಾಸ್ಕ್ ಧರಿಸುವುದು, ಸಾನಿಟೈಸರ್ ಬಳಕೆ, ಸಾಮಾಜಿಕ ಅಂತರ ಸೇರಿದಂತೆ ಸರ್ಕಾರದ ಮಾರ್ಗಸೂಚಿಯನ್ನು ಪಾಲನೆ ಮಾಡಬೇಕೆಂದು ಜನತೆಗೆ ಮನವಿ ಮಾಡಿದರು.ಪ್ರಧಾನಿಯವರ ಸೂಚನೆಯಂತೆ 6 ವರ್ಷದಿಂದ 12 ವರ್ಷ ಮಕ್ಕಳಿಗೆ ಕೋವಿಡ್ ಲಸಿಕೆಯನ್ನು ನೀಡಲಾಗುವುದು. ಜೊತೆಗೆ 60 ವರ್ಷ ಮೇಲ್ಪಟ್ಟವರಿಗೆ ಉಚಿತವಾಗಿ ಬೂಸ್ಟರ್ ಡೋಸ್ ನೀಡುತ್ತಿದ್ದೇವೆ. ಯಾರು ಇದನ್ನು ತೆಗೆದುಕೊಂಡಿಲ್ಲವೋ ತಕ್ಷಣವೇ ನಿಮ್ಮ ನಿಮ್ಮ ಬಳಿ ಇರುವ ಕೇಂದ್ರಗಳಿಗೆ ತೆರಳಿ ಲಸಿಕೆ ಪಡೆಯಿರಿ ಎಂದು ಹೇಳಿದರು.ಕೆಲವರು ಈವರೆಗೂ 2ನೇ ಲಸಿಕೆಯನ್ನು ಪಡೆದುಕೊಂಡಿಲ್ಲ. ಕೋವಿಡ್ ಹೋಗಿರುವಾಗ ಏಕೆ ಎಂಬ ಉದಾಸೀನ ತೋರುತ್ತಿದ್ದಾರೆ. ಲಸಿಕೆ ಪಡೆಯುವುದರಿಂದ ಕೋವಿಡ್ ಬರುವುದಿಲ್ಲ ಎಂದು ಭಾವಿಸಬೇಡಿ. ಆದರೆ ಅದರಿಂದಾಗುವ ಹೆಚ್ಚಿನ ಅನಾಹುತವನ್ನು ತಡೆಗಟ್ಟಲು ಇದು ಅನುಕೂಲವಾಗುತ್ತದೆ ಎಂದರು.ಗರ್ಭಪಾತ ಪ್ರಕರಣ ಕುರಿತಂತೆ ಸುಪ್ರೀಂಕೋರ್ಟ್ ಏನು ಆದೇಶ ನೀಡಿದೆಯೋ ಅದನ್ನು ಯಥಾವತ್ತಾಗಿ ರಾಜ್ಯ ಸರ್ಕಾರ ಅನುಷ್ಠಾನ ಮಾಡಲಿದೆ. ಸಂಬಂಧಪಟ್ಟ ಅಕಾರಿಗಳೊಂದಿಗೆ ಚರ್ಚಿಸಿ ಇದನ್ನು ಪರಿಣಾಮಕಾರಿಯಾಗಿ ಅನುಷ್ಟಾನ ಮಾಡಲಾಗುವುದು ಎಂದು ಹೇಳಿದರು.ಶಿಗ್ಗಾವಿ ಆಸ್ಪತ್ರೆಯಲ್ಲಿ ಗರ್ಭಪಾತ ಪ್ರಕರಣವು 2017ರಲ್ಲಿ ನಡೆದ ಪ್ರಕರಣವಾಗಿದೆ. ಈ ಕುರಿತು ಸಂಬಂಧಪಟ್ಟವರಿಂದ ಸಮಗ್ರ ಮಾಹಿತಿ ಪಡೆದು ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಹೇಳಿದರು.