ಹಾಸನ ಜಿಲ್ಲೆಯ ಹಲವೆಡೆ ಕಂಪಿಸಿದ ಭೂಮಿ

ಕರ್ನಾಟಕದ ಹಾಸನ ಜಿಲ್ಲೆಯಲ್ಲಿ 3.4 ತೀವ್ರತೆಯ ಭೂಕಂಪ: ಹಾಸನ ಜಿಲ್ಲೆಯ ಹಲವೆಡೆ ಇಂದು ಮುಂಜಾನೆ 4.30ರ ಸುಮಾರಿಗೆ ಭೂಮಿ ಕಂಪಿಸಿರುವ ಅನುಭವವಾಗಿದೆ. ಈ ವೇಳೆ ಹೆದರಿದ ನೂರಾರು ಮಂದಿ ಮನೆಯಿಂದ ಹೊರಬಂದಿರುವ ಬಗ್ಗೆ ವರದಿಯಾಗಿದೆ. ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಮೇಲ್ವಿಚಾರಣಾ ಕೇಂದ್ರ (ಕೆಎಸ್‌ಎನ್‌ಡಿಎಂಸಿ) ಅಧಿಕಾರಿಗಳು ಘಟನೆಯನ್ನು ಖಚಿತಪಡಿಸಿದ್ದಾರೆ.
ಹಾಸನ ಜಿಲ್ಲೆಯ ಅರಕಲಗೂಡು ಪಟ್ಟಣ, ಮುದ್ದನಹಳ್ಳಿ, ಹನೆಮಾರನಹಳ್ಳಿ, ಕ್ಯಾತನಹಳ್ಳಿ, ಹೊಳೆನರಸೀಪುರದಲ್ಲಿ ಇಂದು ಮುಂಜಾನೆ ಭೂಕಂಪ ಆಗಿರುವ ಬಗ್ಗೆ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ದೃಢಪಡಿಸಿದೆ. ಕೇಂದ್ರದ ಪತ್ರಿಕಾ ಪ್ರಕಟಣೆಯ ಪ್ರಕಾರ, ಹಾಸನ ಜಿಲ್ಲೆಯಲ್ಲಿ 3.4 ತೀವ್ರತೆಯ ಭೂಕಂಪ ದಾಖಲಾಗಿದೆ.
ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲೂಕಿನ ನಾಗರನಹಳ್ಳಿ ಗ್ರಾಮ ಪಂಚಾಯಿತಿಯ ಮಲುಗನಹಳ್ಳಿ ಗ್ರಾಮದ 0.8ಕಿಮೀ ದೂರದಲ್ಲಿ ಈ ಭೂಕಂಪದ ಕೇಂದ್ರಬಿಂದು ಇದೆ. ಬೆಳಗ್ಗಿನ ಜಾವ 4.30 ಕ್ಕೆ 10 ಕಿ.ಮೀ ಆಳದಲ್ಲಿ ಈ ಭೂಕಂಪ ಸಂಭವಿಸಿದೆ. ಇದು ಮಧ್ಯಮ ಭೂಕಂಪವಾಗಿದ್ದು, ಇದರಿಂದ ಯಾವುದೇ ರೀತಿಯ ಸಮಸ್ಯೆ ಇಲ್ಲ. ಹಾಗಾಗಿ ಭೂಕಂಪದ ಬಗ್ಗೆ ಸ್ಥಳೀಯರು ಆತಂಕ ಪಡುವ ಅಗತ್ಯವಿಲ್ಲ ಎಂದು ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಸ್ಪಷ್ಟಪಡಿಸಿದ್ದಾರೆ.
ಈ ಬಗ್ಗೆ ಪ್ರಕಟಣೆ ಹೊರದಿಸಿರುವೆ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರವು, ಭೂಕಂಪನದ ತೀವ್ರತೆಯು ಮಧ್ಯಮವಾಗಿದೆ ಮತ್ತು ಭೂಕಂಪನವು ಅಧಿಕೇಂದ್ರದಿಂದ 40-50 ಕಿಮೀ ಗರಿಷ್ಠ ರೇಡಿಯಲ್ ದೂರದವರೆಗೆ ಅನುಭವಿಸಬಹುದು. ಈ ರೀತಿಯ ಭೂಕಂಪವು ಯಾವುದೇ ಹಾನಿಯನ್ನು ಉಂಟುಮಾಡುವುದಿಲ್ಲ. ಸ್ಥಳೀಯವಾಗಿ ಸ್ವಲ್ಪ ಭೂಮಿ ಕಂಪಿಸುವ ಅನುಭವವಾದರೂ ಭೂಕಂಪನ ವಲಯ II ರಲ್ಲಿ ಕೇಂದ್ರಬಿಂದು ಬೀಳುವುದರಿಂದ, ಭೂಕಂಪಗಳು ಸಂಭವಿಸುವ ಸಾಧ್ಯತೆಗಳು ತೀರಾ ಕಡಿಮೆ ಮತ್ತು ಹಾನಿಯ ಸಾಧ್ಯತೆ ಕಡಿಮೆ ಎಂದು ತಿಳಿಸಿದೆ.
ಮಂಡ್ಯದಲ್ಲಿ ನಿಗೂಢ ಶಬ್ದ: ಇಂದು ಮುಂಜಾನೆ ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲೂಕಿನ ಕಿಕ್ಕೇರಿ ಹೋಬಳಿ ವ್ಯಾಪ್ತಿಯ ಹಲವು ಗ್ರಾಮಗಳಲ್ಲಿ ಭಾರೀ ಶಬ್ದದ ಜೊತೆ ಭೂಮಿ ಕಂಪಿಸಿದ ಬಗ್ಗೆಯೂ ವರದಿ ಆಗಿದೆ. ಮಂಡ್ಯ ಜಿಲ್ಲೆಯ ಮಾದಾಪುರ, ಗೊಂದಿಹಳ್ಳಿ, ಚಿನ್ನೇನಹಳ್ಳಿ ಸೇರಿದಂತೆ ಹಲವು ಗ್ರಾಮಗಳಲ್ಲಿ ಭಾರೀ ಶಬ್ಧದೊಂದಿಗೆ ಭೂಮಿ ಕಂಪಿಸಿರುವ ಬಗ್ಗೆ ವರದಿಗಲಾಗಿದ್ದು, ಈ ವೇಳೆ ಗಾಬರಿಗೊಂಡ ಜನರು ಮನೆಗಳಿಂದ ಹೊರಗೆ ಬಂದಿದ್ದರು ಎಂದು ವರದಿ ಆಗಿದೆ.