ಅಪರಾಧ

ಹಾಸನದಲ್ಲಿ ಹಾಡಹಗಲೇ ದರೋಡೆಗೆ ಮುಂದಾದ ಖದೀಮರು: ವೃದ್ಧೆಗೆ ಗನ್ ತೋರಿಸಿ ಕಳ್ಳತನಕ್ಕೆ ಯತ್ನ

ಖದೀಮರ ಕೃತ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಅದೃಷ್ಟ್ ವಶಾತ್ ಮಹಿಳೆಯೋರ್ವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಹಾಸನ ನಗರದ ಕೆ.ಆರ್ ಪುರಂನ ಡಿ. ಟಿ ಪ್ರಕಾಶ್ ಎಂಬುವವರ ಮನೆಗೆ ಯುವಕರಿಬ್ಬರು ಡೆಲಿವರಿ ಬಾಯ್ ರೂಪದಲ್ಲಿ ಬಂದು ಗನ್ ತೋರಿಸಿ ದರೋಡೆಗೆ ಯತ್ನ ಮಾಡಿದ್ದಾರೆ.

ಮಧ್ಯಾಹ್ನ ಈ ಘಟನೆ ನಡೆದಿದೆ.ಮನೆಯಲ್ಲಿ ರಂಗಮ್ಮ ಎಂಬುವವರು ಒಬ್ಬರೇ ಇದ್ದ ಸಂದರ್ಭದಲ್ಲಿ ಬಂದ ಆಗಂತುಕರಿಬ್ಬರು ಈ ಕೃತ್ಯಕ್ಕೆ ಕೈ ಹಾಕಿದ್ದಾರೆ. ಮೊದಲು ಗೇಟಿನೊಳಗೆ ಬಂದ ಯುವಕರು ಮನೆಗೆ ಏನೋ ಪಾರ್ಸೆಲ್ ಕೊಡುವ ರೂಪದಲ್ಲಿ ಬಂದು ಬಾಗಿಲು ಬೆಲ್ ಮಾಡಿದ್ದಾರೆ.

ಒಳಗಿದ್ದ ವಯೋವೃದ್ಧೆ ಬಾಗಿಲು ತೆಗೆದೆದ್ದಾರೆ. ನಂತರ ನಿಮ್ಮ ಮಗನಿಗೆ ಏನೋ ಪಾರ್ಸೆಲ್ ಬಂದಿದೆ. ಪಕ್ಕದೂರಿನಿಂದ ಕಳಿಸಿದ್ದಾರೆ ಅಂತಾ ರಟ್ಟಿನ ಡಬ್ಬ ತೋರಿಸಿದ್ದಾರೆ. ಬಾಗಿಲು ತೆಗೆದ ವೃದ್ಧೆ ರಂಗಮ್ಮ ಇದು ನಿಜ ಎಂದು ನಂಬಿದ್ದಾರೆ.

ಅಷ್ಟರಲ್ಲಿ ರಂಗಮ್ಮನವರ ಹಣೆಗೆ ಗನ್ ತೋರಿದ ಖದೀಮರು ರಂಗಮ್ಮನವರ ಕುತ್ತಿಗೆ ಕೈ ಹಾಕಿ ಚಿನ್ನದ ಸರಕ್ಕೆ ಕೈ ಹಾಕಲು ಯತ್ನಿಸಿದ್ದಾರೆ.ಈ ವೇಳೆ ರಂಗಮ್ಮ ಹೆದರಿ ಜೋರಾಗಿ ಕಿರುಚಾಡಿದ್ದರಿಂದ ಅಕ್ಕ-ಪಕ್ಕದ ಮನೆಯವರು ಬರುವುದನ್ನು ಕಂಡು ದರೋಡೆಕೋರರು ಕಾಂಪೌಂಡ್ ಹಾರಿ ಪರಾರಿಯಾಗಿದ್ದಾರೆ.

ಮನೆ ಯಜಮಾನ ಪ್ರಕಾಶ್, ಅವರ ಪತ್ನಿ ಆಶಾ ಅವರು ಮನೆಯಲ್ಲಿ ಇಲ್ಲದ ವೇಳೆ ಹೊಂಚುಹಾಕಿ ತಿಳಿದವರೇ ಈ ಕೃತ್ಯ ಎಸಗಿದ್ದಾರೆ ಎಂಬ ಅನುಮಾನ ದಟ್ಟವಾಗಿದೆ. ಇನ್ನು ಖದೀಮರು ರಟ್ಟಿನ ಡಬ್ಬದಲ್ಲಿ ಪಾರ್ಸೆಲ್ ರೂಪದಲ್ಲಿ ಇಟ್ಟಿಗೆ ತುಂಡು ತಂದಿದ್ದರು ಅನ್ನೋದು ಗೊತ್ತಾಗಿದೆ.ಕಳ್ಳತನಕ್ಕೆ ಯತ್ನದ ನಂತರ ಯುವಕರು ಪರಾರಿ ಆದ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ಪೊಲೀಸರು ಸಿಸಿ ಕ್ಯಾಮರಾ ದೃಶ್ಯದ ಆಧಾರದ ಮೇಲೆ ಖದೀಮರಿಗೆ ಬಲೆ ಬೀಸಿದ್ದಾರೆ. ಮಾಸ್ಕ್ ಕ್ಯಾಪ್ ಧರಿಸಿ ಬಂದ ಖದೀಮನೋರ್ವ ಚಪ್ಪಲಿ ಬಿಟ್ಟು ಪರಾರಿ ಆಗಿದ್ದಾನೆ. ಇನ್ನು ಮೂರು ದಿನದಲ್ಲಿ ಹೊಳೆನರಸೀಪುರ ದಲ್ಲಿ 11 ಅಂಗಡಿ ಮನೆ ಕಳ್ಳತನ ಮಾಡಿದ ಪ್ರಕರಣ ನಡೆದ ಬೆನ್ನಲ್ಲೆ ಹಾಡಹಗಲೆ ಗನ್ ತೋರಿಸಿ ಈ ಕೃತ್ಯಕ್ಕೆ ಯತ್ನ ಮಾಡಿರೋದು ಹಾಸನ ನಗರ ಜನತೆಯ ನಿದ್ದೆಗೆಡಿಸಿದೆ.

ಸದ್ಯ ಹಾಸನದಲ್ಲಿ ಪೊಲೀಸ್ ವ್ಯವಸ್ಥೆ ಇನ್ನಷ್ಟು ಬಲಗೊಳ್ಳದಿದ್ದಲ್ಲಿ ಮತ್ತು ಪುಂಡರಿಗೆ ಸರಿಯಾದ ಬಿಸಿ ಮುಟ್ಟಿಸದಿದ್ದಲ್ಲಿ ಇಂಥ ಪ್ರಕರಣಗಳಿಗೆ ಕೊನೆ ಎಲ್ಲಿ ಅಂತ ಜನ ಕೇಳುವಂತಾಗಿದೆ. ಹೀಗಾಗಿ ಹಾಸನ ಪೊಲೀಸ್ ಈ ಖದೀಮರು ಯಾರು ಅನ್ನೊದನ್ನು ಕೂಡಲೇ ಪತ್ತೆಹಚ್ಚಬೇಕಿದೆ.

Basaveshwara M

Crime reporter, Bangalore

Related Articles

Leave a Reply

Your email address will not be published. Required fields are marked *

Back to top button