
ಹಾಲು ಉತ್ಪಾದಕರಿಗೆ ಪ್ರತಿ ಲೀಟರ್‍ಗೆ 30 ರೂ. ನೀಡಲು ಹಾಲು ಒಕ್ಕೂಟ ನಿರ್ಧರಿಸಿದ್ದು, ಇನ್ನೊಂದು ವಾರದಲ್ಲಿ ಜಾರಿಗೆ ಬರಲಿದೆ ಎಂದು ಒಕ್ಕೂಟದ ಅಧ್ಯಕ್ಷ, ಶಾಸಕ ಎಚ್.ಡಿ.ರೇವಣ್ಣ ತಿಳಿಸಿದರು.
ನಗರದ ಹಾಲು ಒಕ್ಕೂಟದ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಸದ್ಯಕ್ಕೆ ಒಕ್ಕೂಟದಿಂದ 28 ರೂ.75 ಪೈಸೆ ನೀಡಲಾಗುತ್ತಿದ್ದು, ಹೊಸ ದರದ ನಂತರ ರಾಜ್ಯದಲ್ಲಿಯೇ ಗರಿಷ್ಠ ದರ ನೀಡುವ ಹಿರಿಮೆ ಒಕ್ಕೂಟದ್ದಾಗಲಿದೆ ಎಂದರು.
ಮೇವು ಕತ್ತರಿಸುವ ಯಂತ್ರಗಳನ್ನು ವಿತರಿಸಲಾಗಿದ್ದು, ರಾಸುಗಳು ಪೂರ್ಣ ಪ್ರಮಾಣದಲ್ಲಿ ಹಸಿರು ಮೇವನ್ನು ತಿಂದು ಗುಣಮಟ್ಟದ ಹಾಲನ್ನು ಪೂರೈಕೆ ಮಾಡಲು ಸಾಧ್ಯವಾಗಲಿದೆ. ಉತ್ಪಾದನಾ ವೆಚ್ಚದಲ್ಲಿ ಉಳಿತಾಯವಾಗುತ್ತದೆ.
ರಬ್ಬರ್ ಮ್ಯಾಟ್‍ಗಳನ್ನು ವಿತರಿಸಲಾಗಿದ್ದು, ರಾಸುಗಳನ್ನು ಬಹುಮುಖ್ಯವಾಗಿ ಬಾಸುವ ಕೆಚ್ಚಲು ಬಾವು ರೋಗ, ಮಂಡಿ ನೋವು, ಕೀಲು ನೋವು ತಡೆಗಟ್ಟಲು ಸಾಧ್ಯವಾಗಲಿದೆ. ಶುದ್ಧ ಹಾಲು ಉತ್ಪಾದನೆಗೂ ಸಹಕಾರಿಯಾಗುತ್ತದೆ ಎಂದರು.
ರೈತರು ಜೋಳದ ಬಿತ್ತನೆ ಬೀಜಗಳನ್ನು ಜಮೀನುಗಳಲ್ಲೇ ಬೆಳೆದು, ರಾಸುಗಳಿಗೆ ರಸ ಮೇವು ನೀಡಲು ಸಾಧ್ಯವಾಗಲಿದ್ದು, ಮೇವಿನ ವೆಚ್ಚ ಉಳಿತಾಯವಾಗಲಿದೆ ಎಂದು ತಿಳಿಸಿದರು.
ರಾಸುಗಳು ಆಕಸ್ಮಿಕವಾಗಿ ಸಾವಿಗೀಡಾದರೆ ವಿಮಾ ಸೌಲಭ್ಯವನ್ನು ಒದಗಿಸುತ್ತಿದ್ದು, 2020-21ನೆ ಸಾಲಿಗೆ 26,052 ರಾಸುಗಳನ್ನು ವಿಮೆ ವ್ಯಾಪ್ತಿಗೆ ಒಳಪಡಿಸಲಾಗಿದೆ. ವಿಮೆ ಮೊತ್ತ 2.01 ಕೋಟಿಯಾಗಿದ್ದು, 1.72 ಕೋಟಿ ಪರಿಹಾರವನ್ನು ಉತ್ಪಾದಕರಿಗೆ ಒದಗಿಸಲಾಗಿದೆ.
2022-23ನೆ ಸಾಲಿಗೆ 50ಸಾವಿರ ರಾಸುಗಳನ್ನು ವಿಮೆಗೆ ಒಳಪಡಿಸಲು ಯೋಜಿಸಲಾಗಿದೆ. ವಿಮೆ ಪ್ರೀಮಿಯಂ ಮೊತ್ತ 5 ಕೋಟಿಗಳಾಗಲಿದ್ದು, ಒಕ್ಕೂಟದಿಂದ 3 ಕೋಟಿ ಅನುದಾನ ನೀಡಲಾಗುತ್ತದೆ ಎಂದರು.
ಸಂಘಗಳ ಸದಸ್ಯರು ಸಾವಿಗೀಡಾದರೆ ಅವರ ಕುಟುಂಬಕ್ಕೆ 50ಸಾವಿರ ಪರಿಹಾರ ನೀಡಲು ಗುಂಪು ವಿಮೆ ಪಾಲಿಸಿ ಪಡೆಯಲು ಉದ್ದೇಶಿಸಲಾಗಿದೆ ಎಂದರು.ಒಕ್ಕೂಟದ ನಿರ್ದೇಶಕ, ಶಾಸಕ ಸಿ.ಎನ್. ಬಾಲಕೃಷ್ಣ, ವ್ಯವಸ್ಥಾಪಕ ನಿರ್ದೇಶಕ ಗೋಪಾಲಯ್ಯ ಇದ್ದರು.