ಹವಮಾನ ವೈಪರೀತ್ಯ ಹೆಚ್ಚಿದ ವೈರಲ್ ಜ್ವರ

ರಾಜ್ಯದಲ್ಲಿ ದಿನದಿಂದ ದಿನಕ್ಕೆ ಹವಮಾನ ಬದಲಾವಣೆಯಿಂದಾಗಿ ವೈರಲ್ ಜ್ವರಗಳು ಹೆಚ್ಚಾಗುತ್ತಿವೆ. ಈ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಸೂಕ್ತ ಮುನ್ನೆಚ್ಚರಿಕೆ ಕೈಗೊಳ್ಳುವಂತೆ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದೆ.
ಮೂರು ವಾರಗಳಿಂದ ಹವಮಾನದಲ್ಲಿ ವೈಪರೀತ್ಯ ಉಂಟಾಗುತ್ತಿದ್ದು ಮಳೆ ಹಾಗೂ ಇತರ ಕಾರಣಗಳಿಂದಾಗಿ ವೈರಲ್ ಜ್ವರ ಹೆಚ್ಚಾಗುತ್ತಿದೆ.ಕೆಮ್ಮು, ಜ್ವರ, ಶೀತ, ಗಂಟಲು, ತಲೆನೋವು, ಹೊಟ್ಟೆನೋವು ಮುಂತಾದ ಲಕ್ಷಣಗಳಿಂದ ಜನರು ವೈದ್ಯರತ್ತ ಮುಖ ಮಾಡಿದ್ದಾರೆ.
ಹೀಗಾಗಿ ಸಾಕಷ್ಟು ಮುನ್ನೆಚ್ಚರಿಕೆ ವಹಿಸಬೇಕು ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.ಹವಮಾನ ತಕ್ಕಂತೆ ಹೊಸದಾಗಿ ಸೋಂಕುಗಳು ಉತ್ಪತ್ತಿಯಾಗುತ್ತಿದ್ದು, ಕೋವಿಡ್ ಸಂದರ್ಭದಲ್ಲಿ ಕೈಗೊಂಡು ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸದಿರುವುದು ಪ್ರಮುಖ ಕಾರಣವಾಗಿದೆ.
ಮುಖ್ಯವಾಗಿ ವೈರಲ್ ಜ್ವರ ಉಸಿರಾಟದಿಂದ ಹರಡುತ್ತಿದ್ದು, ಜ್ವರದಿಂದ ಬಳಲುತ್ತಿರುವ ವ್ಯಕ್ತಿಗಳು ಮಾಸ್ಕ್ ಧರಿಸದೆ ಮತ್ತೊಬ್ಬ ವ್ಯಕ್ತಿಯ ಬಳಿ ಉಸಿರಾಡಿದಾಗ ಆತನ ದೇಹದಲ್ಲಿದ್ದ ವೈರಸ್‌ಗಳು ಬೇರೆಯವರಿಗೆ ಹರಡುವ ಸಾಧ್ಯತೆಯಿದೆ ಎಂದು ಮಕ್ಕಳ ಆರೋಗ್ಯ ಸಂಸ್ಥೆಯ ಪ್ರೊ. ಡಾ. ಎನ್. ನಿಜಗುಣ ಅವರು ಹೇಳಿದ್ದಾರೆ.
ಮಳೆ, ಚಳಿ, ಮೋಡಕವಿದ ವಾತಾವರಣದ ಸಂದರ್ಭದಲ್ಲಿ ಹೊಸ ವೈರಸ್ ಗಳು ಉತ್ಪತ್ತಿಯಾಗುತ್ತಿದ್ದು ಕೆಲವೊಂದು ಹವಮಾನದಲ್ಲಿ ಅಷ್ಟೊಂದು ಸುಲಭವಾಗಿ ವೈರಸ್ ಗಳು ಸಾಯುವುದಿಲ್ಲ.
ಹವಮಾನ ಬದಲಾವಣೆ ತಕ್ಕಂತೆ ಹೊಸ ವೈರಸ್ ಗಳು ಹುಟ್ಟಿಕೊಂಡು ಪ್ರತಿಕೂಲ ಹವಮಾನದಿಂದಾಗಿ ವೈರಸ್ ಗಳು ಬೇಗ ಹರಡುತ್ತವೆ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.