ಹಳೇ ಮೈಸೂರು ಭಾಗದ ಎರಡನೇ ಹಂತದ ಅಪರೇಷನ್ ಕಮಲ ನಿಶ್ಚಿತವಾಗಿದೆ.

ಮೈಸೂರು: ಹಳೇ ಮೈಸೂರು ಭಾಗದ ಎರಡನೇ ಹಂತದ ಅಪರೇಷನ್ ಕಮಲ ನಿಶ್ಚಿತವಾಗಿದೆ. ಶೀಘ್ರದಲ್ಲೇ ಮೈಸೂರು ಭಾಗದ ಐದಾರು ಘಟಾನುಘಟಿ ನಾಯಕರು ಬಿಜೆಪಿ ಸೇರ್ಪಡೆಯಾಗುವುದು ನಿಶ್ಚಿತವಾಗಿದೆ ಎಂದು ಮೈಸೂರಿನಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾಯಕರ ಜೊತೆಗೆ ಕೊನೆಯ ಹಂತದ ಮಾತುಕತೆಗಳು ನಡೆಯುತ್ತಿದೆ. ಬಿಜೆಪಿ ರಾಜ್ಯಾಧ್ಯಕ್ಷರ ಗ್ರೀನ್ ಸಿಗ್ನಲ್ ಬಾಕಿಯಿದೆ. ಯಾವ ಷರತ್ತುಗಳಿಲ್ಲದೆ ಬಿಜೆಪಿ ಸೇರ್ಪಡೆಗೆ ಒಪ್ಪಿದ್ದಾರೆ ಎಂದರು.
ಕಾಂಗ್ರೆಸ್ ಮತ್ತು ಜೆಡಿಎಸ್ ಎರಡೂ ಪಕ್ಷದವರಿದ್ದಾರೆ. ಸೇರ್ಪಡೆಯಾಗುವವರು ಯಾರೆಂದು ಈ ಹಂತದಲ್ಲಿ ಹೇಳಲಾಗುವುದಿಲ್ಲ. ಕೊನೆಯ ಮಾತುಕತೆಗಳು ಮುಗಿಯಲಿ. ನಾವೇ ಎಲ್ಲವನ್ನೂ ಸ್ಪಷ್ಟಪಡಿಸುತ್ತೇವೆ ಎಂದು ಸಚಿವರು ಹೇಳಿದರು.
ಕಾಂಗ್ರೆಸ್ ಆಂತರಿಕ ಕಿತ್ತಾಟ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಎಐಸಿಸಿ ದುರ್ಬಲವಾಗಿರುವ ಪರಿಣಾಮ ಎಲ್ಲರೂ ನಾಯಕರಾಗಿದ್ದಾರೆ. ಇದು ಆರಂಭ ಅಷ್ಟೇ, ಮುಂದೆ ಮತ್ತಷ್ಟು ಹೆಚ್ಚುತ್ತದೆ. ಇದು ವಿಕೋಪಕ್ಕೆ ತಿರುಗಿ ಪಕ್ಷವೇ ಮುಗಿಯುವ ಹಂತಕ್ಕೆ ಹೋಗುತ್ತದೆ. ಕಾಂಗ್ರೆಸ್ ನಲ್ಲಿ ಈಗ ನಾಲ್ಕು ಗುಂಪಾಗಿದೆ. ಯಾರೂ ಕೂಡ ಆಂತರಿಕವಾಗಿ ಚೆನ್ನಾಗಿಲ್ಲ. ಮೇಲ್ನೋಟಕ್ಕೆ ಒಟ್ಟಿಗೆ ಕಾಣಿಸಿಕೊಂಡರೂ ಒಳಗೆ ಅಸಮಾಧಾನವಿದೆ. ನಟಿ ರಮ್ಯಾ ವಿಚಾರದಲ್ಲೂ ಅದು ಬಹಿರಂಗವಾಗಿದೆ ಎಂದರು.
ಸಿಎಂ ಬೊಮ್ಮಾಯಿ ವೀಕ್, ಇದು ಭ್ರಷ್ಟ ಸರ್ಕಾರ ಎಂಬ ಸಿದ್ದರಾಮಯ್ಯ ಹೇಳಿಕೆ ವಿಚಾರಕ್ಕೆ ತಿರುಗೇಟು ನೀಡಿದ ಸೋಮಶೇಖರ್, ನಮ್ಮ ಮುಖ್ಯಮಂತ್ರಿಗಳು ದುರ್ಬಲರಲ್ಲ. ಅವರ ಮೇಲೆ ಯಾವುದೇ ಕಪ್ಪುಚುಕ್ಕಿ ಇಲ್ಲ. ಉತ್ತಮ ನಿರ್ಣಯಗಳನ್ನು ತೆಗೆದುಕೊಂಡು ಉತ್ತಮ ಆಡಳಿತ ಮಾಡ್ತಿದ್ದಾರೆ. ಸಿದ್ದರಾಮಯ್ಯ ತಮ್ಮ ಅಸ್ತಿತ್ವಕ್ಕಾಗಿ ಈ ರೀತಿ ಮಾತನಾಡುತ್ತಿದ್ದಾರೆ. ಕಾಂಗ್ರೆಸ್ ವರಿಷ್ಠರ ಒಲೈಕೆ ಮಾಡಲು ಹೀಗೆ ಹೇಳಿಕೆ ನೀಡುತ್ತಾರೆ. ಒಂದು ದಿನವೂ ವಿರೋಧ ಪಕ್ಷದ ನಾಯಕನ ಕೆಲಸ ಮಾಡಿಲ್ಲ ಎಂದರು.
ಜಿಟಿಡಿ ಭೇಟಿ: ಮೈಸೂರಿನ ಖಾಸಗಿ ಹೋಟೆಲ್ ನಲ್ಲಿ ಸಚಿವ ಸೋಮಶೇಖರ್ ಅವರನ್ನು ಶಾಸಕ ಜಿ.ಟಿ ದೇವೇಗೌಡ ಭೇಟಿ ಮಾಡಿದರು. ಕ್ಷೇತ್ರದ ಅಭಿವೃದ್ಧಿ ಕಾರ್ಯಗಳ ಉದ್ಘಾಟನೆ ವಿಚಾರವಾಗಿ ಭೇಟಿ ಎಂದು ಸಚಿವ ಎಸ್.ಟಿ ಸೋಮಶೇಖರ್ ಹೇಳಿದರು. ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ಮಾತುಕತೆ ನಡೆಸಿದರು. ಮಾಜಿ ಸಿಎಂ ಸಿದ್ದರಾಮಯ್ಯ ವಿಚಾರವಾಗಿ ಜಿಟಿಡಿ ಮುನಿಸಿಕೊಂಡಿದ್ದಾರೆ. ಈ ಕಾರಣದಿಂದ ಉಭಯ ನಾಯಕರ ಭೇಟಿ ಕುತೂಹಲ ಮೂಡಿಸಿದೆ.